Advertisement

ಉನ್ನತ ಶಿಕ್ಷಣದಲ್ಲಿ ಅವಕಾಶಗಳು ಕ್ಷೀಣ

09:15 AM Apr 23, 2019 | Team Udayavani |

ಬೆಂಗಳೂರು: “ಉನ್ನತ ಶಿಕ್ಷಣ ಎಲ್ಲರಿಗೂ ಕೈಗೆಟುಕುವಂತೆ ಮಾಡುವುದೇ ಈಗ ನಮ್ಮ ಮುಂದಿರುವ ದೊಡ್ಡ ಸವಾಲು’ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತಿಳಿಸಿದರು.

Advertisement

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, “ಶಿಕ್ಷಣದ ವಾಣಿಜ್ಯೀಕರಣ ಮತ್ತು ಜ್ಞಾನವು ಒಂದು ಸರಕಾಗಿ ಮಾರ್ಪಟ್ಟಿರುವುದರಿಂದ ಉನ್ನತ ಶಿಕ್ಷಣದಲ್ಲಿ ಸಮಾನ ಅವಕಾಶಗಳು ಕ್ಷೀಣಿಸುತ್ತಿವೆ.

ಎಲ್ಲರಿಗೂ ಉನ್ನತ ಶಿಕ್ಷಣ ಕೈಗೆಟಕುವಂತೆ ಮಾಡುವುದು ದೊಡ್ಡ ಸವಾಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ರಾಷ್ಟ್ರೀಯ ಜ್ಞಾನ ಆಯೋಗದ ವರದಿ ಪ್ರಕಾರ ದೇಶದಲ್ಲಿ ಪ್ರಸ್ತುತ ಉನ್ನತ ಶಿಕ್ಷಣ ಹೊಂದಿರುವವರ ಪ್ರಮಾಣ ಶೇ.27ರಷ್ಟಿದೆ.

ಆದರೆ, ಅಮೆರಿಕ ಮತ್ತು ಚೀನಾದಲ್ಲಿ ಕ್ರಮವಾಗಿ ಶೇ.85.8 ಹಾಗೂ ಶೇ.43.4ರಷ್ಟಿದೆ. ಇದು ನಮ್ಮ ಉನ್ನತ ಶಿಕ್ಷಣದಲ್ಲಿ ದೊರೆಯುತ್ತಿರುವ ಅವಕಾಶಗಳಿಗೆ ಕನ್ನಡಿ ಹಿಡಿಯುತ್ತದೆ. ಹಾಗಂತ, ಬರೀ ಅಂಕಿ-ಸಂಖ್ಯೆಗಳನ್ನು ಹೆಚ್ಚಿಸಿದರೆ ಉದ್ದೇಶ ಸಾಕಾರಗೊಳ್ಳುವುದಿಲ್ಲ.

ಬದಲಿಗೆ ಜಾಗತಿಕ ಮಟ್ಟಕ್ಕೆ ಸರಿಸಮನಾಗಿ ಶಿಕ್ಷಣದ ಗುಣಮಟ್ಟ ವೃದ್ಧಿ ಆಗಬೇಕು. ಬೆಳೆಯುತ್ತಿರುವ ಉನ್ನತ ಶಿಕ್ಷಣ ಕ್ಷೇತ್ರದ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ನೀತಿಗಳು ರೂಪುಗೊಳ್ಳಬೇಕು ಎಂದು ಹೇಳಿದರು.

Advertisement

ಡಿಜಿಟಲ್‌ ಕ್ರಾಂತಿ: ಭರತವರ್ಷದಲ್ಲೇ ನಳಂದಾ ಮತ್ತು ತಕ್ಷಶಿಲಾದಂತಹ ವಿಶ್ವವಿದ್ಯಾಲಯಗಳು ನಮ್ಮಲ್ಲಿದ್ದವು. ಆಗಿನ ಕಾಲದಲ್ಲೇ 1,500 ಶಿಕ್ಷಕರಿದ್ದು, ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡಿದ್ದರು. ಇಂತಹ ಐತಿಹಾಸಿಕ ಹಿನ್ನೆಲೆವುಳ್ಳ ಭಾರತದಲ್ಲಿ ಇಂದು ಉನ್ನತ ಶಿಕ್ಷಣದಲ್ಲಿ ಅವಕಾಶಗಳು ಕ್ಷೀಣಿಸುತ್ತಿರುವುದು ಬೇಸರದ ಸಂಗತಿ.

ನಾವು ಮತ್ತೆ ಆ ಗತ ವೈಭವವನ್ನು ಮರುಸ್ಥಾಪನೆ ಮಾಡಬೇಕಿದೆ. ಡಿಜಿಟಲ್‌ ಕ್ರಾಂತಿಯಿಂದ ಅದು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟ ಉಪ ರಾಷ್ಟ್ರಪತಿಗಳು, ಆನ್‌ಲೈನ್‌ ಕೋರ್ಸ್‌ಗಳು, ದೂರಶಿಕ್ಷಣ ಸೇರಿದಂತೆ ಹಲವು ಡಿಜಿಟಲ್‌ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಇದೇ ವೇಳೆ ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌, ಸಾಮಾಜಿಕ ಕಾರ್ಯಕರ್ತ ಎಸ್‌.ವಿ.ವಿ.ಸುಬ್ರಹ್ಮಣ್ಯ ಗುಪ್ತ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಅಲ್ಲದೆ, 166 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಹಾಗೂ 216 ವಿದ್ಯಾರ್ಥಿಗಳು ಚಿನ್ನದ ಪದಕ ಸೇರಿದಂತೆ 55,171 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ರಾಜ್ಯಪಾಲ ಮತ್ತು ಕುಲಾಧಿಪತಿ ವಜುಭಾಯಿ ವಾಲಾ, ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next