Advertisement

ಧರ್ಮಸ್ಥಳದಲ್ಲಿ ಕುಳಿತು ಸರ್ಕಾರ ಪತನ ಮಾಡಿದ ಷಡ್ಯಂತ್ರ ಬಿಚ್ಚಿಡುತ್ತೇನೆ: ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ಕಿಡಿ

05:52 PM Jan 22, 2023 | Team Udayavani |

ವಿಜಯಪುರ : ಜಯಪ್ರಕಾಶ ನಾರಾಯಣ ಸಿದ್ಧಾಂತವನ್ನು ಗಾಳಿಗೆ ತೂರಿ, ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣಿ ಸಿದ್ಧರಾಮಯ್ಯ ಅವರಿಗೆ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಬಗ್ಗೆ ಟೀಕಿಸುವ ನೈತಿಕೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Advertisement

ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆಗಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಸವನಬಾಗೇವಾಡಿ, ಬಬಲೇಶ್ವರ ತಾಲೂಕಿನಲ್ಲಿ ಸಂಚಾರದ ಸಂದರ್ಭದಲ್ಲಿ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಅವರು, ಜಾತ್ಯತೀತ ತತ್ವವೇ ಆಸ್ತಿ ಎಂಬಂತೆ ವರ್ತಿಸುವ ನೀವು ಜಯಪ್ರಕಾಶ ನಾರಾಯಣ ಅವರ ಸಿದ್ದಾಂತಕ್ಕೆ ಬದ್ಧರಾಗಿದ್ದರೆ ಮುಖ್ಯಮಂತ್ರಿ ಅಧಿಕಾರದ ಆಸೆಗಾಗಿ ಮಾತೃಪಕ್ಷ ಜೆಡಿಎಸ್ ತೊರೆದು ಹೋಗುತ್ತಿರಲಿಲ್ಲ. ಅವಕಾಶವಾದಿ ರಾಜಕಾರಣ ಮಾಡುವ ನಿಮ್ಮಿಂದ ನಾನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

ಜನರು ಕಷ್ಟ ಹೇಳಿಕೊಂಡು ನಿರಂತರವಾಗಿ ಜನ ನನ್ನ ಬಳಿ ಬರುತ್ತಾರೆ. ಅನಗತ್ಯವಾಗಿ ಜೆಡಿಎಸ್ ಪಕ್ಷದ ಬಗ್ಗೆ ಹಗರುವಾಗಿ ಮತನಾಡಬೇಡಿ. ಧರ್ಮಸ್ಥಳದ ಸಿದ್ಧವನದಲ್ಲಿ ಕುಳಿತು ನನ್ನ ನೇತೃತ್ವದ ಮೈತ್ರಿ ಸರ್ಕಾರ ಪತನ ಮಾಡಿದ ಷಡ್ಯಂತ್ರವನ್ನು ಜನತೆಯ ಮುಂದೆ ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದರು.

ನನ್ನ ನೇತೃತ್ವದ ಮೈತ್ರಿ ಸರ್ಕಾರ ಪತನಗೊಲಿಸಲು ನೀವು ಏನೇನು ಮಾಡಿದಿರಿ ಎನ್ನುವುದೆಲ್ಲ ನನಗೆ ಗೊತ್ತಿದೆ. ಎಲ್ಲಿ ಕುಳಿತು, ಯಾರ ಜತೆಗೂಡಿ ಏನೇನು ಕುತಂತ್ರ ಮಾಡಿದಿರಿ ಎನ್ನುವುದು ನನಗೆ ತಿಳಿದಿದೆ. ಬಿಜೆಪಿ ಪಕ್ಷಕ್ಕೆ ಅಧಿಕಾರ ಹೋಗಬಾರದೆಂದು ನಿಮ್ಮ ಪಕ್ಷದ ವರಿಷ್ಠರು ನಮ್ಮ ಬಾಗಿಲಿಗೆ ಬಂದಿದ್ದರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ, ಡಿ.ಕೆ.ಶಿವಕುಮಾರ ಇದ್ದಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ಲವೆ, ಆಗ ನೀವು ಎಲ್ಲಿದ್ದೀರಿ ಎಂದು ಕಿಡಿಕಾರಿದರು.

ಜಯಪ್ರಕಾಶ್ ನಾರಾಯಣ್ ಕಟ್ಟಿದ ಪಕ್ಷವ ಉಳಿಸಿಕೊಂಡು ಹೊರಟಿದ್ದೇವೆ. ಆದರೆ ಮುಖ್ಯಮಂತ್ರಿ ಕುರ್ಚಿಯ ಅಧಿಕಾರದ ಅಸೆಗಾಗಿ ಸಿದ್ದಾಂತವನ್ನೆಲ್ಲ ಗಾಳಿಗೆ ತೂರಿದ ಅಧಿಕಾರದ ಹಿಂದೆ ಓಡಿ ಹೋದ ರಾಜಕೀಯ ನೈತಿಕೆ ಇಲ್ಲದ ನಿಮ್ಮಿಂದ ನಾನು ಕಲಿಯಬೇಕಿರುವುದು ಏನೂ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

Advertisement

ನನ್ನ ನೇತೃತ್ವದ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದದ್ದು ಹೇಗೆ, ನನ್ನ ಸರ್ಕಾರವನ್ನು ಪತನ ಮಾಡುವಲ್ಲಿ ನಿಮ್ಮ ಕಾಣಿಕೆ ಏನಿದೆ. ಬಿಜೆಪಿ ನಾಯಕರ ಜೊತೆ ಹೇಗೆಲ್ಲಾ ಕುಮ್ಮಕ್ಕು ನಡೆಸಿದಿರಿ, ಯಾರನ್ನೆಲ್ಲ ಎಲ್ಲೆಲ್ಲಿಗೆ ಕಲಿಸಿದಿರಿ ಎನ್ನುವುದು ನನಗೆ ಮಾಹಿತಿ ಇದೆ. ಇದನ್ನು ಜನತೆಯ ಮುಂದಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭ್ರಷ್ಟಾಚಾರದಲ್ಲಿ ಬಿಜೆಪಿ ಪಕ್ಷದವರಿಗಿಂತ ನಿವೇನೂ ಕಮ್ಮಿ ಇಲ್ಲ. ನೀವು ಬೇಕಾದಷ್ಟು ಅಕ್ರಮಗಳನ್ನು ನಡೆಸಿರುವ ನಿಮಗೆ ನಾನು ಎತ್ತಿದ ಪ್ರಶ್ನೆಗಳಿಗೆ ಈವರೆಗೆ ಉತ್ತರ ಕೊಡುವ ಶಕ್ತಿಯೂ ನಿಮಗೆ ಇಲ್ಲವಾಗಿದೆ ಎಂದು ಟೀಕೆಗಳ ಸುರಿಮಳ ಗರೆದರು.

ನಾನು ಹೋಟೆಲ್‍ನಲ್ಲಿ ಇದ್ದೆ ಎಂದು ಹೇಳುವ ನೀವು, ನಿಮ್ಮ ಸರಕಾರ ಅಧಿಕಾರ ಕಳೆದಕೊಂಡ ತಕ್ಷಣ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನೀವು ಕೂಡಲೇ ಸರಕಾರಿ ಮನೆ ಖಾಲಿ ಮಾಡಿಕೊಡಬೇಕಿತ್ತು. ನಾನು ಹೋಟೆಲ್‍ನಲ್ಲಿ ಇದ್ದರೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಿಮ್ಮ ಪಕ್ಷ ಶಾಸಕರಿಗೆ ಸಾವಿರಾರು ಕೋಟಿ ರೂ. ಅನುದಾನ ಎಲ್ಲಿಂದ ಬಮತು ಎಂದು ಪ್ರಶ್ನಿಸಿದರು.

ಪಂಚರತ್ನ ರಥಯಾತ್ರೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ ಹಾಗಾದರೆ ನೀವು ನಡೆಸಿರುವ ಯಾತ್ರೆ ಯಾವುದು, ನಿಮ್ಮದು ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ ಎಂದು ಚಾಟಿ ಬೀಸಿದರು.

ಯಶಸ್ವಿ 5ನೇ ದಿನದಲ್ಲಿ ಮುನ್ನಡೆಯುತ್ತಿರುವ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಜನತೆಯಿಮದ ಸಿಗುತ್ತಿರುವ ಬೆಂಬಲ ನಿಮ್ಮ ನಿದ್ದೆಗೆಡಿಸಿದೆ. ನಮಗೆ ಸಿಗುತ್ತಿರುವ ಜನಬೆಂಬಲವನ್ನು ಸಹಿಸಲಾಗದೇ ಟೀಕೆ ಮಾಡುವ ನೀವು, ಇನ್ನಾದರೂ ನಮ್ಮ ಬಗ್ಗೆ ಹಗರುವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದು ಕುಟುಕಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next