ಚನ್ನರಾಯಪಟ್ಟಣ: ಒಂದು ದೇಶ ಒಂದು ಸಂವಿಧಾನ ಇರಬೇಕು ಎನ್ನುವುದು ಬಿಜೆಪಿಯ ಮಹತ್ವಾಕಾಂಕ್ಷೆಯಾಗಿದೆ ಆದರೆ ಸಂವಿಧಾನ ವಿರೋಧಿಗಳು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡುವಂತೆ ಈಗಲೂ ಮನವಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಪಟ್ಟಣದ ಖಾಸಗಿ ಸಮುದಾಯದಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಜಮ್ಮು ಕಾಶ್ಮೀರಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ಥಾನ ಮಾನ ನೀಡಲಾಗಿತ್ತು. ಆದರೆ ಇದನ್ನು ರದ್ದು ಮಾಡುವುದರಿಂದ ತಮ್ಮ ಅಧಿಕಾರಕ್ಕೆ ತೊಂದರೆ ಆಗುತ್ತದೆ ಎಂಬ ಭಾವನೆಯಿಂದ ಕಾಂಗ್ರೆಸ್ ಕಳೆದ 70 ವರ್ಷದಿಂದ 370 ಕಲಂ ಅನ್ನು ಮುಂದುವರಿಸಿಕೊಂಡು ಬಂದಿದ್ದರು ಎಂದು ತಿಳಿಸಿದರು.
ದೇಶ ಸಂಪೂರ್ಣ ಸ್ವತಂತ್ರವಾಗಿದೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 370 ವಿಧಿಯನ್ನು ತೆರವು ಮಾಡಲಾಗಿದೆ 2014ರಲ್ಲಿ ತೆರವು ಮಾಡಲು ಮುಂದಾಗಿತ್ತು ಅಂದು ರಾಜ್ಯಸಭೆಯಲ್ಲಿ ಬಹುಮತ ಇಲ್ಲದೇ ಇದುದ್ದರಿಂದ ತಾಂತ್ರಿಕವಾಗಿ ತೊಂದರೆ ಆಗುತ್ತಿದ್ದರಿಂದ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾದಾಗ ವಿಶೇಷ ಸ್ಥಾನ ಮಾನವನ್ನು ತೆಗೆದು ಒಂದು ದೇಶ ಒಂದು ಸಂವಿಧಾನ ಎಂಬುದನ್ನು ಸಾಬೀತು ಮಾಡಿದ್ದಾರೆ. ಇಂದು ದೇಶ ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂದರೆ ತಪ್ಪಾಗಲಾರದು ಎಂದು ನುಡಿದರು.
ನೆಹರು ಪ್ರಧಾನಿಯಾಗಿದ್ದಾಗ ಒಂದು ದೇಶದಲ್ಲಿ ಎರಡು ಸಂವಿಧಾನ ಇರಬಾರದು ಒಂದು ವೇಳೆ ಇದ್ದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತೆ. ಇಂತಹ ಸರ್ಕಾರದಲ್ಲಿ ನಾವು ಮಂತ್ರಿಯಾಗಿ ಮುಂದುವರಿಯಲು ಇಚ್ಛಿಸುವುದಿಲ್ಲ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ಯಾಮ್‌ಪ್ರಸಾದ್ ಮುಖರ್ಜಿ ಅವರು 370ನೇ ವಿಧಿಯ ವಿರುದ್ಧ ವಾಗಿ ಹೋರಾಡಲು ಜನಸಂಘ ಸ್ಥಾಪಿಸಿದರು. ಜನಸಂಘ ಕ್ರಮೇಣ ರಾಜಕೀಯ ಪಕ್ಷವಾಗಿ ಮಾರ್ಪಾಡಾಗಿ ಇಂದು ಬಿಜೆಪಿಯಾಗಿದೆ ಎಂದು ಹೇಳಿದರು.
ಭ್ರಷ್ಟಾಚಾರ ನಿಯಂತ್ರಿಸಲು ನೋಟು ಅಮಾನ್ಯ: ಮೋದಿ ಪ್ರಧಾನಿಯಾದ ಬಳಿಕ ಭ್ರಷ್ಟರಿಗೆ ಕಡಿವಾಣ ಹಾಕಲು 500 ಹಾಗೂ ಸಾವಿರ ರೂ . ಮುಖಬೆಲೆಯ ನೋಟು ಅಮಾನ್ಯ ಮಾಡಿದ್ದಾರೆ. ಎಂದು ತಿಳಿಸಿದರು. ಪಾಕಿಸ್ತಾನ ಭಾರತದ 500 ಮತ್ತು ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಮುದ್ರಿಸಿ ಉಗ್ರರಿಗೆ ಹಾಗೂ ಜಮ್ಮು ಕಾಶ್ಮೀರದಲ್ಲಿನ ಜಿಹಾದಿಗಳಿಗೆ ಸರಬರಾಜು ಮಾಡಲು ಯೋಜನೆ ರೂಪಿಸಿತ್ತು. ಇದಕ್ಕೆ ಕಡಿವಾಣ ಹಾಕಲು ಮೋದಿ ಮಹತ್ತರ ಹೆಜ್ಜೆ ಇಟ್ಟರು. ಇದರಿಂದ ಪಾಕಿಸ್ತಾನ ಕಂಗಾಲಾಗಿದೆ ಎಂದರು. ದೇಶದಲ್ಲಿ ಯಾರು ಅಕ್ರಮವಾಗಿ ಹಣ ಸಂಪಾದಿಸಿದ್ದರು ಅವರು ನೋಟ್ ಅಮಾನಿಕರಣವನ್ನು ವಿರೋಧಿಸಿದರು ಎಂದು ಟೀಕಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಶಿವನಂಜೇಗೌಡ, ಮಾಜಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಕಾರ್ಯಕ್ರಮದ ಸಂಯೋಜನ ಜಿ.ವಿ.ವಿಜಯಕುಮಾರ್, ವಿಜಯವಿಕ್ರಂ ಉಪಸ್ಥಿತರಿದ್ದರು.
ಕುಟುಂಬದ ಆಡಳಿತ ಅಂತ್ಯ: ಜಮ್ಮು ಕಾಶ್ಮೀರಕ್ಕೆ ನೀಡುತ್ತಿದ್ದ ವಿಶೇಷ ಸ್ಥಾನ ಮಾನದಿಂದ ಕೇವಲ ನಾಲ್ಕು ಕುಟುಂಬಗಳು ಆಡಳಿತ ಮಾಡುತ್ತಿದ್ದವು. ಹಣವಂತರು ತಮ್ಮ ಮಕ್ಕಳಿಗೆ ವಿದೇಶದಲ್ಲಿ ವಿದ್ಯೆ ಕೊಡಿಸಿದರೆ, ಅಲ್ಲಿನ ಅಮಾಯಕರಿಗೆ ಧರ್ಮದ ವಿಷಬೀಜ ಬಿತ್ತಿ ಜಿಹಾದ್ ಹೆಸರಿನಲ್ಲಿ ಬಡವರ ಹಾಗೂ ಕೂಲಿಕಾರ್ಮಿಕ ಮಕ್ಕಳ ಕೈಗಿ ಕಲ್ಲು ನೀಡಿ ದೇಶ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳುವಂತೆ ಮಾಡುವ ಮೂಲಕ ಕೆಲ ಕುಟುಂಬಗಳು ನಿರಂತರವಾಗಿ ಏಳು ದಶಕದಿಂದ ಅಧಿಕಾರ ನಡೆಸಿವೆ ಇದಕ್ಕೆ ಕಡಿವಾಣ ಹಾಕಿದ ಕೀರ್ತಿ ಅಮಿತ್ ಶಾ ಅವರಿಗೆ ಸಲ್ಲಬೇಕು ಮಾಧುಸ್ವಾಮಿ ಹೇಳಿದರು.
ಪಾಕಿಸ್ತಾನದ ಕುತಂತ್ರ: ದೇಶದಲ್ಲಿ ಹೊರ ರಾಜ್ಯ ಹಾಗೂ ಹೊರದೇಶಗಳಿಂದ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಬರದಂತೆ ಮಾಡುವಲ್ಲಿ ಪಾಕಿಸ್ತಾನದ ಕೈವಾಡವಿದೆ. ಗಡಿಭಾಗದಲ್ಲಿ ಉಗ್ರರಿಂದ ಆಗಾಗ ಬಾಂಬ್ ಸಿಡಿಸುವ ಮೂಲಕ ಪ್ರವಾಸೋದ್ಯಮ ಕುಂಠಿತವಾಗುವಂತೆ ಮಾಡಿದೆ. ಇದಕ್ಕೆ ಜಮ್ಮುವಿನ ಕೆಲ ಜಿಹಾದಿಗಳು ಸೇರಿಕೊಂಡು ಹವಳಿ ರಾಜ್ಯದ ವಾಣಿಜ್ಯ ವ್ಯವಹಾರಕ್ಕೆ ಕೊಡಲಿ ಪೆಟ್ಟು ನೀಡಿದ್ದರು. ಈಗ ಇದೆಲ್ಲ ನಡೆಯುವುದಿಲ್ಲ ಎಂಬುದು ತಿಳಿದಾಗ ಕೇಂದ್ರ ಸರ್ಕಾರದ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಆರೋಪಿಸಿದರು.
ನಾನು ಜಿಲ್ಲಾ ಮಂತ್ರಿಯಾಗಿದ್ದಾ ಹಾಸನ ಜಿಲ್ಲಾ ಪಂಚಾಯಿತಿಯನ್ನು ಬಿಜೆಪಿ ತೆಕ್ಕೆಗೆ ತರಬೇಕಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಿಸ್ತಿನ ಸಿಪಾಯಿಗಳಾಗಿ ಪಕ್ಷ ಸಂಘಟನೆ ಮಾಡಲು ಮುಂದಾಗಬೇಕು.
-ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ