ಬೆಂಗಳೂರು: ರಾಜಸ್ಥಾನದಿಂದ ಮಾದಕ ವಸ್ತು “ಅಫೀಮು’ ಕಳವು ಮಾಡಿಕೊಂಡು ಸರಕು ಲಾರಿಗಳು ಹಾಗೂ ರೈಲು ಪ್ರಯಾಣದ ಮೂಲಕ ನಗರಕ್ಕೆ ತಂದು ಪರಿಚಯಸ್ಥ ಗಿರಾಕಿಗಳಿಗೆ ತಲುಪಿಸುತ್ತಿದ್ದ ದಂಧೆಕೋರ ಬೇರಾರಾಮ್ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈತ, ಕಳೆದ ಮೂರು ವರ್ಷಗಳಿಂದ ಪರಿಚಯಸ್ಥ ರಾಜಸ್ಥಾನ ಮೂಲದ ನಗರ ವಾಸಿಗಳಿಗೆ “ಅಫೀಮು’ ಸರಬರಾಜು ಮಾಡುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದ್ದು, ಕುತೂಹಲಕಾರಿ ವಿಷಯ ಎಂದರೆ, ರಾಜಸ್ಥಾನದಲ್ಲಿ ಬೆಳೆಯುವ ಅಫೀಮು ಕೆ.ಜಿ ಗಟ್ಟಲೆ ಕಳವು ಮಾಡುತ್ತಿದ್ದ ಆರೋಪಿ, “ಟಿಫಿನ್ ಬಾಕ್ಸ್’ಗಳಲ್ಲಿಟ್ಟು ಅಂತರ್‌ರಾಜ್ಯ ಸರಕು ಲಾರಿಗಳ ಚಾಲಕರಿಗೆ ನೀಡಿ ಬೆಂಗಳೂರಿನಲ್ಲಿ ಪರಿಚಯಸ್ಥರಿಗೆ ನೀಡಿ ಎಂದು ಹೇಳಿ ಸ್ವಲ್ಪ ಹಣ ನೀಡುತ್ತಿದ್ದ.
ಬಳಿಕ ಲಾರಿ ಇಲ್ಲಿಗೆ ತಲುಪುವಷ್ಟರಲ್ಲಿ ತಾನು ವಿಮಾನ ಪ್ರಯಾಣದ ಮೂಲಕ ನಗರಕ್ಕೆ ಆಗಮಿಸಿ ತಾನೇ ಅಫೀಮು ತುಂಬಿರುತ್ತಿದ್ದ “ಟಿಫಿನ್ ಬಾಕ್ಸ್’ಗಳನ್ನು ಪಡೆದುಕೊಳ್ಳುತ್ತಿದ್ದ. ಕೆಲವೊಮ್ಮೆ ರೈಲುಗಳ ಮೂಲಕ ತಾನೇ ಅಫೀಮು ತರುತ್ತಿದ್ದ, ಇಲ್ಲಿ ಮಾರಾಟ ಮಾಡಿದ ಬಳಿಕ ವಿಮಾನದಲ್ಲಿ ವಾಪಾಸ್ ಹೋಗುತ್ತಿದ್ದ. ತಿಂಗಳಿಗೆ ಎರಡು ಬಾರಿ ಈ ರೀತಿ ನಗರಕ್ಕೆ ಅಪೀಮು ತರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬೇರಾರಾಮ್, ಇತ್ತೀಚೆಗೆ ಗ್ರಾಹಕರೊಬ್ಬರಿಗೆ ಗೋಪಾಲನ್ ರೆಸಿಡೆನ್ಸಿ ಬಳಿ ಅಫೀಮು ನೀಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕೆ.ಪಿ.ಅಗ್ರಹಾರ ಇನ್ಸ್‌ಪೆಕ್ಟರ್ ಎಸ್.ಎಸ್.ಮಂಜು ನೇತೃತ್ವದ ತಂಡ, ಆತನನ್ನು ಬಂಧಿಸಿ 20 ಗ್ರಾಂ ಅಫೀಮು ವಶಕ್ಕೆ ಪಡೆದುಕೊಂಡಿತ್ತು. ಬಳಿಕ, ಆತನನ್ನು ವಿಚಾರಣೆಗೆ ಒಳಪಡಿಸಿ ಆತನ ಮನೆಯಲ್ಲಿದ್ದ ಮೂರೂವರೆ ಲಕ್ಷ ರೂ. ಮೌಲ್ಯದ 750 ಗ್ರಾಂ. ಅಫೀಮು ಜಪ್ತಿ ಮಾಡಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಪಾತ್ರೆ ವ್ಯಾಪಾರಿ ಅಫೀಮು ಸರಬರಾಜುದಾರನಾದ: ರಾಜಸ್ಥಾನದ ಜಾಲಾರ್ ಜಿಲ್ಲೆಯ ಕರ್ವಾಡಿ ಗ್ರಾಮದ ಬೇರಾಸಿಂಗ್ ಕೆಲ ವರ್ಷಗಳ ಹಿಂದೆ ನಗರಕ್ಕೆ ಆಗಮಿಸಿದ್ದು, ಪಾತ್ರೆಗಳ ಮಾರಾಟ ಅಂಗಡಿ ಇಟ್ಟುಕೊಂಡಿದ್ದ. ಆದರೆ, ವ್ಯವಹಾರದಲ್ಲಿ ನಷ್ಟವುಂಟಾಗಿತ್ತು. ಈ ಮಧ್ಯೆ ಅಫೀಮು ಸೇವಿಸುವ ಕೆಲವು ವ್ಯಕ್ತಿಗಳು ಪರಿಚಯವಾಗಿದ್ದರಿಂದ ನಾನೇ ಅಫೀಮು ಸರಬರಾಜು ಮಾಡಬಹುದು ಎಂದು ಯೋಚಿಸಿದ ಆತ, ವ್ಯಾಪಾರ ಸ್ಥಗಿತಗೊಳಿಸಿ ಕುಟುಂಬವನ್ನು ಸ್ವಂತ ಊರಿಗೆ ಕರೆದೊಯ್ದಿದ್ದ.
ಬಳಿಕ ಪಂತರಪಾಳ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು, ಅಫೀಮು ಸರಬರಾಜು, ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಈ ದಂಧೆಯಲ್ಲಿ ಬೇರೆ ಯಾರನ್ನೂ ಸೇರಿಸಿಕೊಂಡಿರಲಿಲ್ಲ. ಪರಿಚಯಸ್ಥ ಮಾರ್ವಾಡಿಗಳಿಗೆ ಮಾತ್ರವೇ ಮಾರಾಟ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಎರಡು ಮೂರು ದಿನ ಇದ್ದು ಅಪೀಮು ಖಾಲಿಯಾದ ಕೂಡಲೇ ಹಣ ತೆಗೆದುಕೊಂಡು ಊರು ಸೇರುತ್ತಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದರು.
ಅಫೀಮು ಕೊಳ್ಳುತ್ತಿದ್ದವರ ಬಂಧನಕ್ಕೆ ಬಲೆ: ಆರೋಪಿ ಬೇರಾರಾಮ್ ಬಳಿ ಅಫೀಮು ಕೊಳ್ಳುತ್ತಿದ್ದವರ ಪೈಕಿ ಪ್ರಭಾವಿ ವ್ಯಾಪಾರಿಗಳಿದ್ದಾರೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದಿದೆ. ಆತ ಯಾರಿಗೆ ಮಾರಾಟ ಮಾಡುತ್ತಿದ್ದ ಎಂಬ ಬಗ್ಗೆ ಬಾಯಿ ಬಿಡುತ್ತಿಲ್ಲ. ಕೆಲವರ ಬಗ್ಗೆ ಮಾಹಿತಿ ತಿಳಿದಿದ್ದರೂ ಅವರು ಈಗಾಗಲೇ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ, ತನಿಖೆ ಮುಂದುವರಿಸಲಾಗಿದೆ. ಬೇರಾರಾಮ್ ಬಳಿ ಜಪ್ತಿ ಮಾಡಿಕೊಂಡಿರುವುದು ಕಚ್ಚಾ ಅಫೀಮು ಆಗಿದ್ದು, 100 ಗ್ರಾಂಗೆ 50 ಸಾವಿರ ರೂ. ಪಡೆಯುತ್ತಿದ್ದ ಎಂದು ಹೇಳಲಾಗಿದೆ.