Advertisement
ಬಹಿರಂಗ ಸಭೆ, ಮನೆ ಮನೆಗೆ ತೆರಳಿ ಮತಯಾಚನೆ, ಆಪ್ತರು, ಸಂಬಂಧಿಕರನ್ನು ಮತ ಪ್ರಚಾರಕ್ಕೆ ಕರೆ ತರುವುದು ಇದುವರೆಗೆ ನಡೆದಿತ್ತು. ಇದೀಗ ತಮ್ಮ ಲೆಕ್ಕಾಚಾರದಂತೆ ಗೆಲುವಿನ ಸಂಖ್ಯೆ ಮತ ಪಡೆಯಲು ವಿರೋಧಿ ಪಾಳಯದ ಬಲ ಕುಗ್ಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಕ್ಷದ ನಾಯಕರು ಈ ವಿಷಯದಲ್ಲಿ ಮುಂದಿದ್ದಾರೆ.
ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಯಶವಂತರಾವ್ ಜಾಧವ್ ಈ ಬಾರಿ ಮುಸ್ಲಿಂ ಮತ ಸೆಳೆಯಲು ಹೊಸದೊಂದು ತಂತ್ರಗಾರಿಕೆ ಹೆಣೆದಿದ್ದಾರೆ. ಪ್ರತೀ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬಿಜೆಪಿಗೆ ಮತಗಳೇ ಬೀಳದೆ ಇರುವುದನ್ನು ಮನಗಂಡು ಈ ಬಾರಿ ಹೇಗಾದರೂ ಮಾಡಿ ಕನಿಷ್ಠ ಆ ಪ್ರದೇಶದಲ್ಲಿ 5 ಸಾವಿರ ಮತ ಪಡೆಯಲು ಪ್ಲಾನ್ ಹಾಕಿಕೊಂಡಿದ್ದಾರೆ.
Related Articles
Advertisement
ಇನ್ನು ದಕ್ಷಿಣ, ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳು ಮತದಾರರ ಮನವೊಲಿಕೆಯ ಕಸರತ್ತು ಮುಂದುವರಿಸಿದ್ದಾರೆ. ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ. ಅಮಾನುಲ್ಲಾ ಖಾನ್ ಚೌಡೇಶ್ವರಿ ನಗರ, ಬಸವ ಬುದ್ಧ ಭೀಮಾ ನಗರ, ಗಾಂಧಿನಗರ ಭಾಗದಲ್ಲಿ ಸಂಚರಿಸಿ, ಮತಯಾಚನೆ ಮಾಡಿದರೆ ಉತ್ತರದ ಅಭ್ಯರ್ಥಿ ಆನಂದ ಜಯನಗರ, ಸರಸ್ವತಿ ನಗರ ಭಾಗದಲ್ಲಿ ಮತ ಬೇಟೆ ನಡೆಸಿದರು.
ಮಾಯಕೊಂಡ ಕ್ಷೇತ್ರದಲ್ಲಿ ಸೋಮವಾರ ಪ್ರಚಾರದ ಭರಾಟೆ ಜೋರಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಕಾರಿಗನೂರು, ಕತ್ತಲಗೆರೆ, ರೆಡ್ಡಿಹಳ್ಳಿ, ಬೆಳಲಗೆರೆ ಭಾಗದಲ್ಲಿ ಮತಪ್ರಚಾರ ನಡೆಸಿದರು. ಇವರಿಗೆ ಬಸವರಾಜ ಗೌಡ, ಬಿ. ಕರಿಬಸಪ್ಪ, ರುದ್ರಪ್ಪ, ಚಂದ್ರಪ್ಪ ಇತರೆ ನಾಯಕರು ಸಾಥ್ ನೀಡಿದರು.
ಜೆಡಿಯು ಅಭ್ಯರ್ಥಿ ಬಸವರಾಜ ನಾಯ್ಕ ಮಾಯಕೊಂಡ, ಹೆದೆ ಗ್ರಾಮಗಳ ಸುತ್ತಮುತ್ತ ಸಂಚರಿಸಿ, ಮತ ಬೇಟೆ ನಡೆಸಿದರು. ಬಿಜೆಪಿಯ ಪ್ರೊ. ಎನ್. ಲಿಂಗಣ್ಣ, ಪಕ್ಷೇತರ ಅಭ್ಯರ್ಥಿ ಎಚ್.ಆನಂದಪ್ಪ ತ್ಯಾವಣಿಗೆ ಭಾಗದಲ್ಲಿ ಮತಯಾಚಿಸಿದರು.
ಹರಿಹರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್ ಹೊಳೆಸಿರಿಗೆರೆ. ಮಲ್ಲನಾಯ್ಕನಹಳ್ಳಿ, ಕುಣಿಬೆಳಕೆರೆ, ಹರಿಹರ ನಗರದಲ್ಲಿ ಪ್ರಚಾರ ಕೈಗೊಂಡರು. ಜೆಡಿಎಸ್‌ನ ಎಚ್.ಎಸ್. ಶಿವಶಂಕರ್ ದೇವರಬೆಳಕೆರೆ, ಬೂದಿಹಾಳ್, ಹರಳಹಳ್ಳಿ, ಹರಿಹರ ಪಟ್ಟಣದಲ್ಲಿ ಪ್ರಚಾರ ಕೈಗೊಂಡರು. ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಮಪ್ಪ ಬನ್ನಿಕೋಡು, ಷಂಷೀಪುರ, ಕೆ. ಬೇವಿನಹಳ್ಳಿ, ಕಡ್ಲೆಗೊಂದಿ ಭಾಗದಲ್ಲಿ ಮತಯಾಚಿದರು.
ಹೊನ್ನಾಳಿಯಲ್ಲಿ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಬೆಳಗುತ್ತಿಗೆ ಹೋಬಳಿಯ ಕಡದಕಟ್ಟೆ, ಹಿರೇಮಠ, ದೇವನಾಯಕನಹಳ್ಳಿ ಭಾಗದಲ್ಲಿ ಪ್ರಚಾರ ಕೈಗೊಂಡರು. ಕಾಂಗ್ರೆಸ್‌ನ ಶಾಂತನಗೌಡ ಗೊಲ್ಲರಹಳ್ಳಿ, ಕುಂಕುವ, ತಿಮ್ಲಾಪುರ, ಹಿರೇಮಠ ಗ್ರಾಮಗಳಲ್ಲಿ ಮತದಾರರ ಮನವೊಲಿಸುವ ಕಸರತ್ತು ನಡೆಸಿದರು. ಬಿಎಸ್‌ಪಿ ಅಭ್ಯರ್ಥಿ ಸತ್ಯನಾರಾಯಣ ರಾವ್ ಕೊಠಾರಿ ಹೊನ್ನಾಳಿ ಪಟ್ಟಣದಲ್ಲಿ ಪ್ರಚಾರ ನಡೆಸಿದರು.
ಹರಪನಹಳ್ಳಿಯಲ್ಲಿ ಕಾಂಗ್ರೆಸ್‌ನ ಎಂ.ಪಿ. ರವೀಂದ್ರ, ಜೆಡಿಎಸ್‌ನ ಎನ್. ಕೊಟ್ರೇಶ್, ಬಿಜೆಪಿಯ ಜಿ.ಕರುಣಾಕರ ರೆಡ್ಡಿ ಹರಪನಹಳ್ಳಿ ಪಟ್ಟಣದ ವಿವಿಧ ಭಾಗಗಳಲ್ಲಿ ಮತಬೇಟೆ ನಡೆಸಿದರು. ಜಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ರಾಜೇಶ್ ದೊಣ್ಣೆಹಳ್ಳಿ, ಮುಷ್ಟೂರು, ಕ್ಯಾಸನಹಳ್ಳಿ ಭಾಗದಲ್ಲಿ ಮತ ಬೇಟೆ ನಡೆಸಿದರು. ಜೆಡಿಎಸ್‌ನ ದೇವೇಂದ್ರಪ್ಪ ಜಗಳೂರು ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಬಿಜೆಪಿಯ ಎಸ್.ವಿ. ರಾಮಚಂದ್ರ ಸೊಕ್ಕೆ ಹೋಬಳಿಯಲ್ಲಿ ಪ್ರಚಾರ ಕೈಗೊಂಡರು.