ದಾವಣಗೆರೆ: ಅಕಾಲಿಕವಾಗಿ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನೇತ್ರದಾನದಿಂದ ಪ್ರೇರಣೆಗೊಂಡ ತಾಲೂಕಿನ ಚಟ್ಟೋಬನಹಳ್ಳಿಯ ಹಿರಿಯರು, ಮಹಿಳೆಯರು ಒಳಗೊಂಡಂತೆ 100ಕ್ಕೂ ಹೆಚ್ಚು ಜನ ನೇತ್ರದಾನ ಮಾಡಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕಿಸ್ತಾನದ ಹೋರಾಟಗಾರ್ತಿ ಮಲಾಲ
ಜಿಲ್ಲಾ ಕೇಂದ್ರ ದಾವಣಗೆರೆಗೆ ಸಮೀಪದಲ್ಲಿರುವ ಚಟ್ಟೋಬನ ಹಳ್ಳಿಯಲ್ಲಿ ಸುಮಾರು 125 ಮನೆಗಳಿವೆ. ಮನೆಗೆ ಒಬ್ಬರಂತೆ ನೇತ್ರದಾನಕ್ಕೆ ಒಪ್ಪಿದ್ದಾರೆ. ಅದಕ್ಕೆ ಮೂಲ ಕಾರಣ ಪುನೀತ್ ರಾಜ್‌ಕುಮಾರ್. ನಿಧನಾನಂತರ ಅವರ ಕಣ್ಣುಗಳು ನಾಲ್ವರು ಅಂಧರ ಬಾಳಲ್ಲಿ ಬೆಳಕು ತಂದಿದ್ದನ್ನು ತಿಳಿದ ಗ್ರಾಮದ ಅನೇಕರು ಪುನೀತ್ ಅವರಂತೆಯೇ ತಮ್ಮ ಕಣ್ಣುಗಳು ಬೇರೆಯವರಿಗೆ ಬೆಳಕಾಗಬೇಕು, ಅತ್ಯಮೂಲ್ಯ ಕಣ್ಣುಗಳು ಮಣ್ಣಲ್ಲಿ ಮಣ್ಣಾಗಿ ಹೋಗಬಾರದು ಎಂದು ತಮ್ಮ ನೇತ್ರಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ನೇತ್ರದಾನಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ಬಾಪೂಜಿ ಆಸ್ಪತ್ರೆಯವರನ್ನು ಸಂಪರ್ಕಿಸಿದ್ದೇವೆ. ಇನ್ನೆರಡು ದಿನಗಳಲ್ಲಿ ಅರ್ಜಿ ಭರ್ತಿ ಮಾಡಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಈ ವಿಷಯದ ಬಗ್ಗೆ ಇನ್ನೂ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಗಮನಕ್ಕೆ ತಂದಿಲ್ಲ. 15 ದಿನಗಳಲ್ಲಿ 20 ಜನ ಬೆಂಗಳೂರಿಗೆ ತೆರಳಿ ಅಪ್ಪು ಸಮಾಧಿಗೆ ನಮಿಸಿ ರಾಜ್‌ಕುಮಾರ್ ಕುಟುಂಬದವರನ್ನೂ ಭೇಟಿಯಾಗಲು ನಿರ್ಧರಿಸಿದ್ದೇವೆ ಎಂದು ಎಸ್‌ಬಿಐ ಉದ್ಯೋಗಿ ಯೂ ಆಗಿರುವ ಗ್ರಾಮಸ್ಥ ಎಸ್. ಅಣ್ಣಪ್ಪ ತಿಳಿಸಿದ್ದಾರೆ.
ವೇದಿಕೆಗೆ ಪುನೀತ್ ಹೆಸರು: ನಿರಾಣಿ
ಕೈಗಾರಿಕೆ ಇಲಾಖೆಯ ಮಹತ್ವಾಕಾಂಕ್ಷಿ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರದ ವೇದಿಕೆಗೆ ನಟ ಪುನೀತ್ ರಾಜ್‌ಕುಮಾರ್ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಕಲಬುರಗಿ ,ಮೈಸೂರು, ಬೆಳಗಾವಿ, ಕರಾವಳಿ ಭಾಗದ ಮಂಗಳೂರು ಹಾಗೂ ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಸರ್ವಸಮ್ಮತದ ತೀರ್ಮಾನ ಕೈಗೊಳ್ಳ ಲಾಗಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ನ.11 ರಂದು ಕಲಬುರಗಿಯಲ್ಲಿ ಯೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಉದ್ಯಮಿಯಾಗಿ ಉದ್ಯೋಗ ನೀಡು ಕಾರ್ಯಾಗಾರ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.