ಅಂಕೋಲಾ : ತಾಲೂಕಿನ ಬೊಬ್ರುವಾಡದಲ್ಲಿ ಕಳೆದ 15 ದಿನಗಳಿಂದ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸದ ಸಿಂಗಳೀಕವನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮದಲ್ಲಿ ಸುಮಾರು 15 ಕ್ಕೂ ಹೆಚ್ಚು ಜನರ ಮೇಲೆ ಸಿಂಗಳೀಕ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿತ್ತು. ಇದರಿಂದಾಗಿ ಜನರು ಮನೆಯಿಂದ ಹೊರ ಬರಲು ಸಾಧ್ಯವಾಗದ ವಾತಾವರಣ ಉಂಟಾಗಿತ್ತು.
ಸೆರೆಯಾದ ವಾನರ ಮಾನಸಿಕ ಸ್ಥಿಮಿತ ಕಳೆದುಕೊಂಡು ಕಂಡಕಂಡವರಿಗೆ ಕಚ್ಚುತ್ತಿತ್ತು. ಕಳೆದ ನಾಲ್ಕು ದಿನದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೊಬ್ರುವಾಡಾದಲ್ಲಿ ಬೀಡು ಬಿಟ್ಟಿದ್ದು ಮಂಗನ ಹಿಡಿಯುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಮಂಗನ ಹಾವಳಿಯಿಂದ ಸಾರ್ವಜನಿಕರು ರಸ್ತೆಯಲ್ಲಿ ಒಡಾಡುವ ಸಂದರ್ಭದಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಟ ನಡೆಸಬೇಕಾಗಿತ್ತು. ಬುಧವಾರ ಆಪರೇಷನ್ ಮಂಗ ಕಾರ್ಯಾಚರಣೆ ವಿಫಲವಾದರೂ, ಗುರುವಾರ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅರಣ್ಯಾಧಿಕಾರಿಗಳು ಸಿಂಗಳೀಕವನ್ನು ಅರವಳಿಕೆ ಔಷಧ ನೀಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜ್ಞೆ ತಪ್ಪಿದ ಸಿಂಗಳೀಕ ಚೇತರಿಸಿಕೊಂಡ ಬಳಿಕ ಕದ್ರಾ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ತಿಳಿಸಿದ್ದಾರೆ.ಇದರಿಂದಾಗಿ ಕಳೆದ 15 ದಿನಗಳಿಂದ ಸಿಂಗಳೀಕನ ಹಾವಳಿಯಿಂದ ಆತಂಕದಲ್ಲಿದ್ದ ಸ್ಥಳೀಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.
ಅಂಕೋಲಾ ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ತಂಡದಲ್ಲಿ ಉಪವಲಯ ಅರಣ್ಯಾಧಿಕಾರಿ ಎನ್.ಕೆ.ನಾಯಕ, ಪ್ರಮೋದ ಪಟಗಾರ, ಮಹೇಶ, ಲಿಂಗಣ್ಣ ಸೇರದಂತೆ ಅರಣ್ಯ ವಿಕ್ಷಕರು ಇದ್ದರು.