Advertisement

ಈಗ ಬಿಜೆಪಿ ಆಪರೇಶನ್‌ ಎಂಎಲ್‌ಸಿ

06:00 AM Sep 23, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್‌ ಕಮಲ ಕಾರ್ಯಾಚರಣೆ ಪ್ರಯತ್ನ ನಡೆಯುತ್ತಿರುವುದು ಸಮ್ಮಿಶ್ರ ಸರ್ಕಾರ ಉರುಳಿಸಿ ಪರ್ಯಾಯ ಸರ್ಕಾರ ರಚನೆಗಲ್ಲ. ವಿಧಾನಪರಿಷತ್‌ ಚುನಾವಣೆಯಲ್ಲಿ ಮೂರೂ ಸ್ಥಾನ ಗೆಲ್ಲಲು…

Advertisement

ಇಂಥದೊಂದು ಮಾಹಿತಿ ಹೊರಬಿದ್ದಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 5 ಶಾಸಕರು ತಲಾ ಐದು ಕೋಟಿ ರೂ. ಅಡ್ವಾನ್ಸ್‌ ಸಹ ಪಡೆದಿದ್ದು ಇನ್ನೂ ಮೂರರಿಂದ ಐವರು ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ.

ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ 104 ಸಂಖ್ಯಾಬಲ ಹೊಂದಿದ್ದು ಎಂಟು ಶಾಸಕರ ಬಲ ಬಿಜೆಪಿಗೆ ದೊರೆತರೆ 112 ಆಗಲಿದ್ದು ಸುಲಭವಾಗಿ ಮೂರು ವಿಧಾನಪರಿಷತ್‌ ಸೀಟು ಗೆಲ್ಲಬಹುದು. ಇದಕ್ಕಾಗಿಯೇ ಕಾರ್ಯತಂತ್ರ ರೂಪಿಸಲಾಗಿದೆ. ಇದು ಯಶಸ್ವಿಯಾದ ಬಳಿಕ ಸಮ್ಮಿಶ್ರ ಸರ್ಕಾರ  ಉರುಳಿಸುವ ಮಾಸ್ಟರ್‌ಪ್ಲ್ರಾನ್‌ ಸಿದ್ಧಪಡಿಸಲಾಗಿದೆ.

224 ಸಂಖ್ಯಾಬಲದ ವಿಧಾನಸಭೆಯಲ್ಲಿ ರಾಮನಗರ, ಜಮಖಂಡಿ ಕ್ಷೇತ್ರ ತೆರವಾಗಿದ್ದು 222 ಸದಸ್ಯರಿದ್ದಾರೆ. ಬಿಜೆಪಿಯ ಸಂಖ್ಯಾಬಲ 112 ತಲುಪಿದರೆ, ಕಾಂಗ್ರೆಸ್‌-ಜೆಡಿಎಸ್‌ನದು 110 ಕ್ಕೆ ಇಳಿಯಲಿದೆ. ಆಗ ಬಿಜೆಪಿ ಮೂರೂ ಸ್ಥಾನ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ.

ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ ರಹಸ್ಯ ಮತದಾನ (ಸೀಕ್ರೆಟ್‌ ಬ್ಯಾಲೆಟ್‌) ಹೀಗಾಗಿ, ಕಾಂಗ್ರೆಸ್‌-ಜೆಡಿಎಸ್‌ ಶಾಸಕರು ಬಿಜೆಪಿಯವರಿಗೆ ಕ್ರಾಸ್‌ ಓಟ್‌ ಮಾಡಿದರೂ ಗೊತ್ತಾಗುವುದಿಲ್ಲ. ಸದಸ್ಯತ್ವಕ್ಕೂ ಕುತ್ತು ಬರುವುದಿಲ್ಲ. ಹೀಗಾಗಿ, ಚುನಾವಣೆಯಲ್ಲಿ ಅಡ್ಡ ಮತದಾನಕ್ಕೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಐದು ಕೋಟಿ ರೂ. ಅಡ್ವಾನ್ಸ್‌ ಪಡೆದಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕುವ ಭರವಸೆ ನೀಡಿದ್ದು, ತಮ್ಮ ಹೆಸರು ಬಹಿರಂಗಪಡಿಸಬಾರದು ಎಂದು ಬಿಜೆಪಿ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಕೆಲವರು ದೇವರ ಮತ್ತು ಕುಟುಂಬದವರ ಮೇಲೆ ಆಣೆ ಪ್ರಮಾಣ ಸಹ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಮೂರು ಸ್ಥಾನಗಳ ಭರ್ತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿರುವುದರಿಂದ ಒಬ್ಬ ಅಭ್ಯರ್ಥಿಗೆ 111 ರಿಂದ 112 ಮತ ಬೇಕಾಗಬಹುದು. ಹೀಗಾಗಿ, ಬಿಜೆಪಿ 112 ಟಾರ್ಗೆಟ್‌ ಇಟ್ಟುಕೊಂಡಿದೆ. ಒರ್ವ ಸಚಿವ ಸೇರಿದಂತೆ 10 ಶಾಸಕರನ್ನು ಸಂಪರ್ಕಿಸಿದೆ ಎಂದು ಹೇಳಲಾಗಿದೆ.

ಬಿಜೆಪಿಯಿಂದ ವಿಧಾನಪರಿಷತ್‌ ಸದಸ್ಯರಾಗಲು ಬಯಸಿರುವವರು “ಬಂಡವಾಳ’ ಹಾಕಿದ್ದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ಅಡ್ವಾನ್ಸ್‌ ನೀಡಿದ್ದಾರೆ. ಆಪರೇಷನ್‌ ಎಂಎಲ್‌ಸಿ ಕಾರ್ಯಾಚರಣೆ ನಡೆಸಿ ಆ ಮೂಲಕ ಗಾಳಕ್ಕೆ ಸಿಕ್ಕವರನ್ನು ಬಿಜೆಪಿಯತ್ತ ಸೆಳೆಯುವುದು ನಾಯಕರ ಗುರಿ ಎಂದು ತಿಳಿದು ಬಂದಿದೆ.ಆದರೆ, ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದು ಅಧಿಕೃತ ಅಭ್ಯರ್ಥಿಗಳು ಸೋಲು ಅನುಭವಿಸಿದರೆ ಸಮ್ಮಿಶ್ರ ಸರ್ಕಾರಕ್ಕೂ ಆಪತ್ತು ತಪ್ಪದು ಎಂಬ ಕಾರಣಕ್ಕೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ತಮ್ಮ ತಮ್ಮ ಶಾಸಕರನ್ನು ಬಂದೋಬಸ್ತ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಅ.4 ರಂದು ನಿಗದಿಯಾಗಿರುವ ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯುವ  ಉಪ ಚುನಾವಣೆ ರಹಸ್ಯ ಮತದಾನ (ಸೀಕ್ರೆಟ್‌ ಬ್ಯಾಲೆಟ್‌) ಇರುತ್ತದೆ.
– ಎಂ.ಎಸ್‌. ಕುಮಾರಸ್ವಾಮಿ, ಜಂಟಿ ಕಾರ್ಯದರ್ಶಿ, ರಾಜ್ಯ ವಿಧಾನಸಭೆ

ಒಟ್ಟು ಶಾಸಕರು- 222
ಬಿಜೆಪಿ-104
ಕಾಂಗ್ರೆಸ್‌-79
ಜೆಡಿಎಸ್‌ ಮತ್ತು ಬಿಎಸ್‌ಪಿ- 37
ಪಕ್ಷೇತರ-2
ಚುನಾವಣೆ ನಡೆಯುವ ವಿಧಾನ ಪರಿಷತ್‌ ಸ್ಥಾನಗಳು-3
ಪ್ರತಿ ಅಭ್ಯರ್ಥಿಗೆ ಬೇಕಾದ ಮತ-111-112
ಬಿಜೆಪಿಗೆ ಬೇಕಾದ ಸಂಖ್ಯಾಬಲ-112
ಪ್ರಸ್ತುತ ಬಿಜೆಪಿ ಬಲ-104
ಆಪರೇಷನ್‌ ಎಂಎಲ್‌ಸಿಗೆ ಬೇಕಾದ ಹೆಚ್ಚುವರಿ ಶಾಸಕರ ಸಂಖ್ಯೆ-8

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next