Advertisement

ಕೈ ಶಾಸಕರ ಸುತ್ತ ಆವರಿಸಿದ ಆತಂಕ

07:02 AM Jan 15, 2019 | Harsha Rao |

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಸಮಾಧಾನ ಪಡಿಸುವ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ವಹಿಸಲಾಗಿದೆ.

Advertisement

ಸೋಮವಾರ ನಡೆದ ಉಪಾಹಾರ ಕೂಟದಲ್ಲಿ ರಮೇಶ್‌ ಜಾರಕಿಹೊಳಿ ಅವರನ್ನು ಸಮಾಧಾನ ಪಡೆಸಿ ಮುಂಬೈನಿಂದ ವಾಪಸ್‌ ಕರೆದುಕೊಂಡು ಬರುವ ಬಗ್ಗೆ ಗಂಭೀರ ಚರ್ಚೆ ನಡೆಸಿ ರಮೇಶ್‌ ಪ್ರಮುಖವಾಗಿ ಶಿವಕುಮಾರ್‌ ಅವರ ಮೇಲೆಯೇ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅವರೇ ರಮೇಶ್‌ ಜತೆಗೆ ಮಾತುಕತೆ ನಡೆಸಿ ಸಮಾಧಾನ ಪಡಿಸಬೇಕೆಂದು ಜಿ.ಪರಮೇಶ್ವರ್‌ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಶಿವಕುಮಾರ್‌ ಒಪ್ಪಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಶಿವಕುಮಾರ್‌ ಮಂಗಳವಾರ ಮುಂಬೈಗೆ ತೆರಳಲಿದ್ದಾರೆ. ಮಹಾರಾಷ್ಟ್ರದ ಔರಂಗಾ ಬಾದ್‌ನಲ್ಲಿ ಆಧುನಿಕ ಕೃಷಿಯಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿ ಕುರಿತು ನಡೆಯುವ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವರು. ಆ ಸಂದರ್ಭ ರಮೇಶ್‌ ಜಾರಕಿಹೊಳಿ ಹಾಗೂ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಮನವೊಲಿಸುವ ಸಾಧ್ಯತೆಯಿದೆ. ಈ ನಡುವೆ ಪಕ್ಷದ ನಾಯಕರು ಅತೃಪ್ತ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪಕ್ಷ ತೊರೆಯದಂತೆ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಹೊಸಪೇಟೆ ಶಾಸಕ ಆನಂದ ಸಿಂಗ್‌ ಅವರನ್ನು ಡಿ.ಕೆ.ಶಿವಕುಮಾರ್‌ ಸಂಪರ್ಕಿಸಿ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಂಪರ್ಕಕ್ಕೆ ಸಿಗದ ಹೆಬ್ಟಾರ್‌, ಉಮೇಶ್‌ ಜಾಧವ್‌:

ನಾಲ್ಕು ದಿನಗಳಿಂದ ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದಿರುವುದು ಕಾಂಗ್ರೆಸ್‌ ನಾಯಕರಿಗೆ ತಲೆಬಿಸಿಯಾಗಿದೆ. ರಮೇಶ್‌ ಜಾರಕಿಹೊಳಿ ತಂಡದೊಂದಿಗೂ ಗುರುತಿಸಿಕೊಳ್ಳದೇ ಪ್ರತ್ಯೇಕವಾಗಿ ಉಳಿದಿರುವ ಉಮೇಶ್‌ ಜಾಧವ್‌ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಅವರ ಬಗ್ಗೆ ಅಸಮಾ ಧಾನಗೊಂಡಿದ್ದಾರೆ ಎನ್ನಲಾಗಿದೆ.

Advertisement

ಕಲಬುರಗಿ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಕೊಡಿಸುವ ಬದಲು ತಮ್ಮ ಪುತ್ರರನ್ನು ಸಚಿವರನ್ನಾಗಿ ಮಾಡಿ, ತಮಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಉಮೇಶ್‌ ಜಾಧವ್‌ ಅಸಮಾಧಾನ ಗೊಂಡಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಟಾರ್‌ ಕೂಡ ಭಾನುವಾರದಿಂದ ಪಕ್ಷದ ನಾಯಕರ ದೂರವಾಣಿ ಕರೆಗಳನ್ನು ಸ್ವೀಕರಿಸದೇ ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾಗಿದ್ದು, ಅವರೂ ಮುಂಬೈಗೆ ತೆರಳಿ ರಮೇಶ್‌ ತಂಡ ಸೇರಿದ್ದಾರೆಂಬ ಆತಂಕ ಕಾಂಗ್ರೆಸ್‌ ನಾಯಕರಿಗೆ ಶುರುವಾಗಿದೆ.

ಆಪರೇಷನ್‌ ಗೊಂದಲ: ಅತೃಪ್ತ ಕಾಂಗ್ರೆಸ್‌ ಶಾಸಕರಾದ ರಮೇಶ್‌ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್‌ ಕುಮಠಳ್ಳಿ ಹಾಗೂ ಪಕ್ಷೇತರ ಶಾಸಕರಾದ ಆರ್‌.ಶಂಕರ್‌, ನಾಗೇಶ್‌ ಅವರು ಮುಂಬೈನಲ್ಲಿದ್ದಾರೆ ಎಂಬ ಮಾತು ಹರಿದಾಡಿತ್ತು. ಇನ್ನೂ ಕೆಲ ಕಾಂಗ್ರೆಸ್‌ ಶಾಸಕರು ಅವರನ್ನು ಸೇರಿಕೊಳ್ಳಲಿದ್ದು, ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂತು. ಕಾಂಗ್ರೆಸ್‌ನ ಕೆಲ ಶಾಸಕರು ಹಿರಿಯ ನಾಯಕ ಸಂಪರ್ಕಕ್ಕೆ ಸಿಗದಿದ್ದುದು ಈ ಮಾತುಗಳಿಗೆ ಪುಷ್ಠಿ ನೀಡುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next