Advertisement

ಆಪರೇಷನ್‌ ಗಜ ಯಶಸ್ವಿ; ಒಂಟಿ ಸಲಗ ಸೆರೆ

03:19 PM Apr 10, 2022 | Team Udayavani |

ಚಿಕ್ಕಮಗಳೂರು: ಹಂಪಾಪುರ, ಬೀಕನಹಳ್ಳಿ ಹಾಗೂ ಚುರ್ಚೆಗುಡ್ಡ ಸುತ್ತಮುತ್ತಲಿನ ಜನರಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Advertisement

ಸೆರೆ ಹಿಡಿದ ಸಲಗವನ್ನು ಬಂಡೀಪುರ ಅಭಯಾರಣ್ಯಕ್ಕೆ ರವಾನಿಸಲಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುತ್ತಿದ್ದ ಒಂಟಿ ಸಲಗ ರೈತರ ಜಮೀನುಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಗೊಳಿಸಿತ್ತು. ಈ ಭಾಗದ ಜನ ದಿನವೂ ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ ಅಥವಾ ಕಾಡಿಗಟ್ಟುವಂತೆ ಜನ ಅರಣ್ಯ ಇಲಾಖೆಗೆ ಪದೇ ಪದೇ ಒತ್ತಡ ತಂದಿದ್ದರು. ಒಂಟಿ ಸಲಗ ಸೆರೆ ಹಿಡಿಯಲು ಕಳೆದ ಎರಡು ವಾರಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಶನಿವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ ಚಿಕ್ಕಮಗಳೂರು ಸಮೀಪದ ಬೀಕನಹಳ್ಳಿಯಲ್ಲಿ ಸಲಗವನ್ನು ಸೆರೆ ಹಿಡಿದಿದ್ದಾರೆ. ಎರಡು ವಾರಗಳ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ನಾಗರಹೊಳೆಯಿಂದ ಭೀಮ ಮತ್ತು ಅರ್ಜುನ ಹೆಸರಿನ ಸಾಕಾನೆಗಳನ್ನು ಕರೆಸಿ ಕಾರ್ಯಾಚರಣೆ ಆರಂಭಿಸಿದ್ದರು. ಚರ್ಚೆಗುಡ್ಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಸಾಕಾನೆಗಳ ಮೇಲೆ ಕಾಡಾನೆ ಎಗರಿ ಬಂದಿದ್ದು, ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆಗ ಮಾವುತನಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂಟಿ ಸಲಗವನ್ನು ಸೆರೆ ಹಿಡಿಯಬೇಕೆಂದು ಹಠಕ್ಕೆ ಬಿದ್ದ ಅರಣ್ಯ ಇಲಾಖೆ ಸಿಬ್ಬಂದಿ ನಾಗರಹೊಳೆಯ ಭೀಮ ಮತ್ತು ಅರ್ಜುನ ಜೊತೆಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದ ಬಾಲಣ್ಣ, ಸಾಗರ್‌ ಮತ್ತು ಭಾನುಮತಿ ಹೆಣ್ಣಾನೆಯನ್ನು ಕರೆಸಿಕೊಳ್ಳಲಾಗಿತ್ತು.

ಐದು ಸಾಕಾನೆ ಮತ್ತು ಮಾವುತರು, ನಾಗರಹೊಳೆಯ 15 ಜನ ಸಿಬ್ಬಂದಿ, ಸಕ್ರೇಬೈಲು ಆನೆ ಬಿಡಾರದ 15 ಜನ ಸಿಬ್ಬಂದಿ, ಶಿವಮೊಗ್ಗದ ಡಾ|ವಿನಯ್‌ ಹಾಗೂ ಬಂಡೀಪುರದ ಡಾ|ವಾಸೀಂ ಸೇರಿದಂತೆ 100 ಜನ ಸಿಬ್ಬಂದಿ ಶನಿವಾರ ಬೆಳಗ್ಗೆ ಕಾರ್ಯಾಚರಣೆಗಿಳಿದರು. ಸಾಕಾನೆ ಮತ್ತು ಸಿಬ್ಬಂದಿ ಕಾಡಂಚಿನಲ್ಲಿ ಸಂಚರಿಸಿದರು. ಬೀಕನಹಳ್ಳಿ ಸಮೀಪ ಬೆಳಗ್ಗೆ 9 ಗಂಟೆ ಸುಮಾರಿಗೆ ಐದು ಸಾಕಾನೆಗಳು ಒಂಟಿ ಸಲಗವನ್ನು ಸುತ್ತುವರಿಯುತ್ತಿದ್ದಂತೆ ವೈದ್ಯರು ಒಂಟಿ ಸಲಗಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿದರು.

ಪ್ರಜ್ಞೆ ತಪ್ಪುತ್ತಿದ್ದಂತೆ ಕುತ್ತಿಗೆಗೆ ಹಗ್ಗ ಬಿಗಿದು ಸರಪಳಿಯಿಂದ ಬಂಧಿಸಲಾಯಿತು. ಬಳಿಕ ಸಾಕಾನೆಗಳ ಸಹಾಯ ಮತ್ತು ಕ್ರೇನ್‌ ಮೂಲಕ ಒಂಟಿ ಸಲಗವನ್ನು ಲಾರಿ ಹತ್ತಿಸಿ 11 ಗಂಟೆ ವೇಳೆಗೆ ಬಂಡೀಪುರ ಅಭಯಾರಣ್ಯಕ್ಕೆ ರವಾನಿಸಲಾಯಿತು. ಕಳೆದ ಅನೇಕ ದಿನಗಳಿಂದ ಒಂಟಿ ಸಲಗದ ಉಪಟಳದಿಂದ ಜೀವ ಭಯದಲ್ಲಿದ್ದ ಜನ ಆನೆ ಸೆರೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಚಿಕ್ಕಮಗಳೂರು ಸುತ್ತಮುತ್ತ ಕಳೆದ ಮೂರ್ನಾಲ್ಕು ತಿಂಗಳಿಂದ ಸಂಚರಿಸುತ್ತಿದ್ದ ಒಂಟಿ ಸಲಗವನ್ನು ಐದು ಸಾಕಾನೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶನಿವಾರ ಸೆರೆ ಹಿಡಿದಿದ್ದು, ಬಂಡೀಪುರ ಅರಣ್ಯಕ್ಕೆ ಬಿಡಲಾಗುತ್ತದೆ. -ಎನ್‌.ಇ.ಕ್ರಾಂತಿ, ಡಿಎಫ್‌ಒ

Advertisement

Udayavani is now on Telegram. Click here to join our channel and stay updated with the latest news.

Next