ಬೆಂಗಳೂರು: “ಆಪರೇಷನ್ ಕಮಲಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ. ಮೈತ್ರಿ ಸರ್ಕಾರ ನಡೆಯುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಇದಕ್ಕಾಗಿಯೇ ಅವರ ಕೆಲವು ಆಪ್ತ ಶಾಸಕರನ್ನು ಬಿಜೆಪಿಗರೊಟ್ಟಿಗೆ ಸೇರಿಸುತ್ತಿದ್ದಾರೆ’ ಎಂದು ಸಂಸದೆ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಆಪರೇಷನ್ ಕಮಲ ನಾವು ಮಾಡುತ್ತಿಲ್ಲ. ಶಾಸಕರನ್ನು ಛೂ ಬಿಟ್ಟು ಆಪರೇಷನ್ ಕಮಲದ ಹೆಸರಲ್ಲಿ ಸಿದ್ದರಾಮಯ್ಯ ಅವರೇ ಆಟ ಆಡುತ್ತಿದ್ದಾರೆ. ನಾಲ್ವರು ಶಾಸಕರನ್ನು ಇಲ್ಲಿಗೆ, ಅಲ್ಲಿಗೆ ಕಳುಹಿಸಿ ಸುದ್ದಿ ಬರುವಂತೆ ಮಾಡುತ್ತಿದ್ದಾರೆ. ಈ ಎಲ್ಲ ನಾಟಕದ ಸೂತ್ರಧಾರಿ ಸಿದ್ದರಾಮಯ್ಯ’ ಎಂದು ಕೆಣಕಿದರು.
ಬಿಜೆಪಿಯಿಂದ ಯಾರೂ ಬೇರೆ ಪಕ್ಷದ ಶಾಸಕರನ್ನು ಭೇಟಿ ಮಾಡಿಲ್ಲ, ಸಂಪರ್ಕಿಸುವ ಪ್ರಯತ್ನವೂ ನಡೆದಿಲ್ಲ. ಅವರಾಗಿ ಬರುತ್ತಿದ್ದಾರೆ. ಡಾ.ಉಮೇಶ್ ಜಾಧವ್ ಪಕ್ಷ ಬಿಟ್ಟು ಬಂದು ಈಗ ಬಿಜೆಪಿಯಿಂದ ಸಂಸದರಾಗಿದ್ದಾರೆ. ನಾವು ಯಾರನ್ನೂ ಭೇಟಿ ಮಾಡಿಲ್ಲ. ಈಗ ರಿವರ್ಸ್ ಆಪರೇಷನ್ ಮಾತನಾಡುತ್ತಿದ್ದಾರೆ ಎಂದರು.
ಜಿಂದಾಲ್ ಬಗ್ಗೆ ಮೌನ ಯಾಕೆ?: ಜಿಂದಾಲ್ ಸಂಸ್ಥೆಗೆ ಹೇರಳವಾದ ಕಬ್ಬಿಣದ ಅದಿರಿನ ನಿಕ್ಷೇಪ ಇರುವ ಭೂಮಿಯನ್ನು ರಾಜ್ಯ ಸರ್ಕಾರ ನೀಡುತ್ತಿರುವ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಮೌನವಾಗಿರುವುದು ಏಕೆ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ಜಿಂದಾಲ್ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ನಡುವೆ 10 ವರ್ಷಗಳ ಹಿಂದೆ ನಡೆದಿರುವ ಒಪ್ಪಂದವೇ ಮುಂದುವರಿದಿದ್ದರೆ ಯಾವುದೇ ಆಕ್ಷೇಪ ಇರಲಿಲ್ಲ. ಬದಲಿಗೆ 3,666 ಎಕರೆ ಭೂಮಿಯ ಶುದ್ಧ ಕ್ರಯಪತ್ರ ಸರ್ಕಾರದಿಂದ ಸಂಸ್ಥೆಗೆ ನೀಡಲು ಮುಂದಾಗಿರುವ ಕ್ರಮ ಸರಿಯಲ್ಲ. ಇದರಿಂದ ಅಕ್ರಮ ಗಣಿಗಾರಿಕೆ ನಡೆಯುವ ಸಾಧ್ಯತೆ ಇದೆ ಎಂದು ದೂರಿದರು.
ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ನೀಡಿ ಕಮಿಷನ್ ಹೊಡೆಯುವುದಕ್ಕಾಗಿಯೆ ಡಿ.ಕೆ.ಶಿವಕುಮಾರ್ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಿರಬಹುದು. ಇದು ಡಿ.ಕೆ.ಶಿವಕುಮಾರ್ ಮತ್ತು ಕೆ.ಜೆ.ಜಾರ್ಜ್ ನಡೆಸಿದ ವ್ಯವಹಾರ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.