ಚಿಕ್ಕಬಳ್ಳಾಪುರ: ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಒತ್ತು ಕೊಟ್ಟಿರುವ ಜಿಲ್ಲಾಡಳಿತ, ಗಣೇಶ ಚತುರ್ಥಿ ಹಬ್ಬದ ಮುನ್ನ ದಿನವಾದ ಭಾನುವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಸ್ಥಳೀಯ ನಗರಸಭೆ ಅಧಿಕಾರಿಗಳ ತಂಡ ಜಂಟಿ ಕಾರ್ಯಚರಣೆ ನಡೆಸಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟವಾಗದಂತೆ ಖುದ್ದು ಪರಿಶೀಲಿಸಿ ಖಚಿತಪಡಿಸಿಕೊಂಡರು.
ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಸಹಾಯಕ ಪರಿಸರ ಅಧಿಕಾರಿ ವಿಜಯಾ ಹಾಗೂ ನಗರಸಭೆ ಆಯುಕ್ತ ಉಮಾಕಾಂತ್ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಗಣೇಶ ಮೂರ್ತಿ ವ್ಯಾಪಾರಸ್ಥರಿಗೆ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು.
ವಿವಿಧೆಡೆ ಪರಿಶೀಲನೆ: ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದ ನಗದ ಬೆಸ್ಕಾಂ ಕಚೇರಿ ಆವರಣ, ಸಂತೆ ಮಾರುಕಟ್ಟೆ ಸಮೀಪ, ಬಿಬಿ ರಸ್ತೆ, ಬಜಾರ್ ರಸ್ತೆ, ಎಂಜಿ ರಸ್ತೆ, ಖಾಸಗಿ ಬಸ್ ನಿಲ್ದಾಣ, ವಾಪಸಂದ್ರ, ಎಪಿಎಂಸಿ ಮಾರುಕಟ್ಟೆ, ಗಂಗಮ್ಮ ಗುಡಿ ರಸ್ತೆ, ಟೌನ್ ಹಾಲ್ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಿ ಪಿಒಪಿ ಗಣೇಶ ಮೂರ್ತಿಗಳು ಮಾರಾಟವಾಗದಂತೆ ನೋಡಿಕೊಂಡರು. ವ್ಯಾಪಾರಸ್ಥರು ದಾಸ್ತಾನು ಮಾಡಲಾಗಿದ್ದ ಗೋಡೌನ್‌ಗಳಿಗೆ ತೆರಳಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಕರಪತ್ರ ಹಂಚಿ ಅರಿವು: ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಪ್ಲಾಸ್ಟರ್ ಆಫ್ ಫ್ಯಾರೀಸ್‌ನಿಂದ ಸಿದ್ಧಪಡಿಸಿರುವ ಗಣೇಶ ಮೂರ್ತಿಗಳ ಮಾರಾಟ ಹಾಗೂ ತಯಾರಿಕೆ ನಿಷೇಧಿಸಲಾಗಿದ್ದು, ಪ್ರತಿಯೊಬ್ಬರು ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಬೇಕು. ಜೇಡಿ ಮಣ್ಣಿನಿಂದ ಹಾಗೂ ಬಣ್ಣ ರಹಿತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಕರಪತ್ರ ಹಂಚಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಉದಯವಾಣಿಯೊಂದಿಗೆ ಮಾತನಾಡಿದ ಸಹಾಯಕ ಪರಿಸರ ಅಧಿಕಾರಿ ವಿಜಯಾ, ಜಿಲ್ಲಾದ್ಯಂತ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಮೂಲಕ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಜಿಲ್ಲೆಯಲ್ಲಿ ಎಲ್ಲೂ ಪಿಒಪಿ ಗಣೇಶ ಮಾರಾಟವಾಗಿಲ್ಲ.
ಮುಂದಿನ ವರ್ಷದಿಂದ ಸಂಪೂರ್ಣ ಬಣ್ಣ ರಹಿತ ಗಣೇಶ ಮೂರ್ತಿಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುವುದು. ಪ್ರತಿಷ್ಠಾಪನೆ ಆದ ಮೇಲೆಯು ಕೂಡ ಇಲಾಖೆ ಉತ್ಸವ ಮೂರ್ತಿಗಳನ್ನು ತಪಾಸಣೆ ನಡೆಸಿ ಪರೀಕ್ಷೆಗೆ ಒಳಪಡಿಸಲಿದೆ. ಯಾರಾದರೂ ನಿಯಮಾವಳಿಗಳನ್ನು ಮೀರಿ ಪಿಒಪಿ ಗಣೇಶ ಪ್ರತಿಷ್ಠಾಪಿಸಿದ್ದರೆ ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.