Advertisement

Bantwal ಸಂಚಾರ ಪೊಲೀಸರಿಂದ ಎಲ್‌ಇಡಿ ಲೈಟ್‌ ವಿರುದ್ಧ ಕಾರ್ಯಾಚರಣೆ

09:57 PM Jul 10, 2024 | Team Udayavani |

ಬಂಟ್ವಾಳ: ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸಿ ಎಲ್‌ಇಡಿ ಲೈಟ್‌ ಅಳವಡಿಸಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬಂಟ್ವಾಳ ಸಂಚಾರ ಪೊಲೀಸರು ಬುಧವಾರ ಬಿ.ಸಿ.ರೋಡಿನಲ್ಲಿ ವಾಹನಗಳ ಎಲ್‌ಇಡಿ ಲೈಟ್‌ಗಳನ್ನು ತೆರವು ಮಾಡಿಸಿದರು.

Advertisement

ಬಂಟ್ವಾಳ ಸಂಚಾರ ಠಾಣಾ ಪಿಎಸ್‌ಐ ಸುತೇಶ್‌ ಕೆ.ಪಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮೊದಲ ಹಂತದಲ್ಲಿ ಬಿ.ಸಿ.ರೋಡು, ಕೈಕಂಬ ಭಾಗದಲ್ಲಿ ಆಟೋ ರಿಕ್ಷಾಗಳಲ್ಲಿ ಹಾಕಿರುವ ಎಲ್‌ಇಡಿ ಲೈಟ್‌ಗಳನ್ನು ತೆರವು ಮಾಡಿಸಿ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳಲಿದ್ದು, ಆಟೋಗಳ ಜತೆಗೆ ಇತರ ವಾಹನ ಲೈಟ್‌ಗಳನ್ನೂ ತೆರವು ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ವಾಹನಗಳಲ್ಲಿ ಕಾನೂನು ಮೀರಿ ಪ್ರಖರ ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಎದುರು ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಜತೆಗೆ ಇದು ಅಪಘಾತಗಳಿಗೂ ಕಾರಣವಾಗುತ್ತಿದೆ. ಪ್ರತಿ ವಾಹನಗಳು ಕೂಡ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡದಂತೆ ಹೆಡ್‌ಲೈಟ್‌ಗಳನ್ನು ಅಳವಡಿಸಬೇಕಿದೆ.

ಒಂದು ವೇಳೆ ಸಿಎಂವಿ ಕಾಯ್ದೆಯಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಐಎಂವಿ ಕಾಯ್ದೆಯ ಕಲಂ 177ರಡಿ ಪ್ರಕರಣ ದಾಖಲಿಸಲಾಗುತ್ತಿದೆ. ನಿಯಮ ಮೀರಿ ಎಲ್‌ಇಡಿ ದೀಪಗಳನ್ನು ಅಳವಡಿಸಿರುವ ವಾಹನ ಚಾಲಕರ ವಿರುದ್ಧ ಜುಲೈ ತಿಂಗಳಿನಿಂದ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಆದೇಶವಿದೆ ಎಂದು ಬಂಟ್ವಾಳ ಸಂಚಾರ ಪಿಎಸ್‌ಐ ಸುತೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next