Advertisement

ಆದೇಶ ಉಲ್ಲಂ ಘಿಸಿ ಬಾರ್‌ ಕಾರ್ಯಾಚರಣೆ: ಗ್ರಾಮಸ್ಥರ ದೂರು 

07:00 AM Jul 23, 2017 | Team Udayavani |

ನೆಲ್ಯಾಡಿ : ನೆಲ್ಯಾಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಇರುವ ಬಾರ್‌ ಒಂದು ಸರ್ವೋತ್ಛ ನ್ಯಾಯಾಲಯದ ಆದೇಶ ಉಲ್ಲಂ ಸಿ ಕಾರ್ಯಾಚರಿಸುತ್ತಿದೆ ಎಂದು ನೆಲ್ಯಾಡಿ ಗ್ರಾಮಸ್ಥರು ದೂರಿದ್ದಾರೆ.

Advertisement

ಜು.20ರಂದು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ  ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬಾರ್‌ ಕಾರ್ಯನಿರ್ವಹಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮಸ್ಥ ವರ್ಗೀಸ್‌ ಮಾದೇರಿ ಮಾತನಾಡಿ, “ನೆಲ್ಯಾಡಿಯ ಇತರ ಬಾರ್‌ ಮತ್ತು ಮದ್ಯದ ಅಂಗಡಿಗಳು ಆದೇಶ ಪಾಲಿಸಿವೆ. ಆದರೆ  ಒಂದು ಬಾರ್‌ ಹಿಂಬಾಗಿಲಿನ ಮೂಲಕ ವ್ಯಹಾರ ನಡೆಸುತ್ತಿದೆ’ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ಇತರ ಕೆಲವು ಗ್ರಾಮಸ್ಥರು “ಈ ಬಾರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ  ನೆಲ್ಯಾಡಿಯಲ್ಲಿರುವ ಇತರ  ಬಾರ್‌ಗಳು ಕೂಡ ಅಡ್ಡದಾರಿ ಹಿಡಿಯಬುಹುದು’ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌, “ನೆಲ್ಯಾಡಿ ಪೇಟೆಯಲ್ಲಿರುವ ಬಾರ್‌ ಕೌಕ್ರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಇದೆ. ಆದೇಶ ಉಲ್ಲಂತ್ತಿರುವ ಬಗ್ಗೆ ನೆಲ್ಯಾಡಿ ಗ್ರಾ.ಪಂ. ಕೂಡ ವಿರೋಧ ವ್ಯಕ್ತಪಡಿಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಈ ಬಗ್ಗೆ ಕೌಕ್ರಾಡಿ ಗ್ರಾ.ಪಂ.ಗೆ ಪತ್ರ ಬರೆಯಲಾಗಿದೆ’ ಎಂದರು.

ವಿರೋಧಿಸಿ ನಿರ್ಣಯ 
ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ ಅವರು ಮಾತನಾಡಿ, “ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ಕಾನೂನು ಪ್ರಕಾರವಾಗಿಯೇ ಇದೆ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ರಸ್ತೆಯಲ್ಲಿ ಹಲವು ಕುಟುಂಬಗಳು ಇವೆ. ಶಾಲಾ ಮಕ್ಕಳು ಓಡಾಡುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಬಾರ್‌ಗೆ ಹೋಗುವ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಓಡಾಟಕ್ಕೂ ತೊಂದರೆಯಾಗುತ್ತಿದೆ. ಪೊಲೀಸ್‌ ಇಲಾಖೆಗೆ ಈಗಾಗಲೇ ಕ್ರಮ ಕೈಗೊಳ್ಳುವಂತೆ ಮನವಿ ನೀಡಲಾಗಿದೆ ಎಂದರು. ಬಳಿಕ ಗ್ರಾಮಸ್ಥರ ವಿರೋಧವಿರುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಕಳಪೆ ರಸ್ತೆ ಕಾಮಗಾರಿ
“ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ನೆಲ್ಯಾಡಿ-ಪಡ್ಡಡ್ಕ ರಸ್ತೆಯ ಡಾಮರು ಕಾಮಗಾರಿ ನಡೆದು ಆರು ತಿಂಗಳು ಕೂಡ ಕಳೆದಿಲ್ಲ. ಈಗಲೇ ಡಾಮರು ಎದ್ದು ಹೊಂಡ ನಿರ್ಮಾಣಗೊಂಡಿದೆ. ಪೈಪ್‌ಲೈನ್‌ಗಳು ಸಹ ಕಿತ್ತು¤ಹೋಗಿವೆ. ಈ ಬಗ್ಗೆ ಗುತ್ತಿಗೆದಾರರು ಹಾಗೂ ಇಲಾಖೆಯ ಗಮನಕ್ಕೆ ತಂದರೂ ಸರಿಪಡಿಸಿಲ್ಲ ಎಂದು ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ ಹಾಗೂ ಇತರ  ಗ್ರಾಮಸ್ಥರು ಜಿ.ಪಂ. ಎಂಜಿನಿಯರ್‌ ಗಮನಕ್ಕೆ ತಂದರು. ನೆಲ್ಯಾಡಿ-ಪಡುಬೆಟ್ಟು ರಸ್ತೆಯಲ್ಲೂ ಡಾಮರು ಎದ್ದು ಹೊಂಡ ನಿರ್ಮಾಣಗೊಂಡಿದೆ ಎಂದು ರಮೇಶ್‌ ಬೀದಿ ಆರೋಪಿಸಿದರು. ನೆಲ್ಯಾಡಿ-ಮಾದೇರಿ-ಕೊಲೊÂಟ್ಟು ಜಿ.ಪಂ.ರಸ್ತೆಯಲ್ಲಿ ಚರಂಡಿ ಸರಿಯಿಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆಯ ಎರಡು ಬದಿಗಳಲ್ಲೂ ಗಿಡಗಂಟಿಗಳು ಬೆಳೆದಿದ್ದು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥ ವರ್ಗೀಸ್‌ ಸಭೆಯ ಗಮನ ಸೆಳೆದರು. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಅವರಿಗೆ ಉಳಿಕೆ ಹಣ ಪಾವತಿಗೆ ತಡೆ ನೀಡಬೇಕೆಂದು ಗ್ರಾಮಸ್ಥ ರವಿಚಂದ್ರ ಹೊಸವೊಕ್ಲು ಆಗ್ರಹಿಸಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. 

ಕೃಷಿ ಭೂಮಿಗೆ ನೀರು: ಆರೋಪ ಸರಳಿಕೆರೆಯಲ್ಲಿ ಸಮರ್ಪಕವಾಗಿ ಚರಂಡಿ ದುರಸ್ತಿಯಾಗದೆ ಇರುವುದರಿಂದ  ಕೃಷಿ ಭೂಮಿಗೆ ನೀರು ಬರುತ್ತಿದ್ದು ಕೃಷಿ ಹಾನಿಯಾಗುತಿದೆ.  ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಅಲ್ಲಿನ ಮಹಿಳೆಯರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌, ಅಲ್ಲಿ ತಾತ್ಕಾಲಿಕವಾಗಿ ದುರಸ್ತಿ ಕೆಲಸ ಮಾಡಲಾಗಿದೆ. ಇದು ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾ.ಪಂ. ರಸ್ತೆಯಾಗಿರುವುದರಿಂದ ಎರಡೂ ಪಂಚಾಯತ್‌ನವರು ಸೇರಿಕೊಂಡು ಸರಿಪಡಿಸಬೇಕಾಗಿದೆ. 3 ದಿನದೊಳಗೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Advertisement

ಶಾಲಾ ಕಟ್ಟಡ ದುರಸ್ತಿಗೆ ಆಗ್ರಹ
ಪಡುಬೆಟ್ಟು ಪ್ರಾಥಮಿಕ ಶಾಲಾ ಕೊಠಡಿಯೊಂದು ನಾದುರಸ್ತಿಯಲ್ಲಿದ್ದು ಬೀಳುವ ಸ್ಥಿತಿಯಲ್ಲಿದೆ. ದುರಸ್ತಿಗೊಳಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಬಗ್ಗೆ ತತ್‌ಕ್ಷಣ ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಆರ್‌ಪಿ ಅಶೋಕ್‌ ಕುಮಾರ್‌, ಇದನ್ನು ಇಲಾಖೆಯಿಂದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ ಎಂದರು. ಈ ವೇಳೆ ಮಾತನಾಡಿದ ತಾ.ಪಂ.ಸದಸ್ಯೆ ಉಷಾ ಅಂಚನ್‌, ಶಾಲಾ ಕಟ್ಟಡ ದುರಸ್ತಿಗೆ ತಾಲೂಕಿಗೆ 9 ಲಕ್ಷ ರೂ.ಬಂದಿದೆ.  ಪಡುಬೆಟ್ಟು ಶಾಲೆಗೆ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ನೆಲ್ಯಾಡಿ ಶಾಲೆಗೆ ಪೀಠೊಪಕರಣ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಕುಡಿಯುವ ನೀರಿನ ಘಟಕ ಅಪೂರ್ಣ
ಪಡುಬೆಟ್ಟು ಶಾಲೆಯ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ ಅಪೂರ್ಣವಾಗಿದೆ ಎಂದು ಸುಂದರ ಗೌಡ ಅತ್ರಿಜಾಲು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್‌ ಪ್ರಭಾಚಂದ್ರ, ಜಿಲ್ಲೆಯೆಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ ಕಂಪೆನಿಯವರನ್ನು ಜಿ.ಪಂ. ಸಿಇಒ ಅವರು ಕರೆಸಿ ಮಾತುಕತೆ ನಡೆಸಿದ್ದು ಅಗಸ್ಟ್‌ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಅವರಿಗೆ ಇದಕ್ಕೆ ಹಣ ಪಾವತಿಯಾಗಿಲ್ಲ ಎಂದರು.

ನೆಲ್ಯಾಡಿ ಕಾರ್ಪೊರೇಶನ್‌ ಬ್ಯಾಂಕ್‌ನ ಮ್ಯಾನೇಜರ್‌ ಪಿ.ವಿ.ರಾಮುಡು, ಗ್ರಾಮಕರಣಿಕರಾದ ಅಶ್ವಿ‌ನಿ, ತೋಟಗಾರಿಕೆ ಇಲಾಖೆಯ ಬಸವರಾಜ ಹಡಪದ, ಕೃಷಿ ಇಲಾಖೆಯ ಟಿ.ಎನ್‌. ಭರಮಣ್ಣನವರ್‌, ಅಂಗನವಾಡಿ ಮೇಲ್ವಿಚಾರಕಿ ಉಮಾವತಿ, ಪಶುವೈದ್ಯಾಧಿಕಾರಿ ಪ್ರಕಾಶ್‌, ಮೆಸ್ಕಾಂ ಜೆಇ ರಮೇಶ್‌, ಸಿಆರ್‌ಪಿ ಅಶೋಕ್‌ ಕುಮಾರ್‌, ಜಿ.ಪಂ. ಎಂಜಿನಿಯರ್‌ ಪ್ರಭಾಚಂದ್ರ, ಆರೋಗ್ಯ ಸಹಾಯಕಿ ಅನ್ನಮ್ಮ ಅವರು ಇಲಾಖಾವಾರು ಮಾಹಿತಿ ನೀಡಿದರು.

ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್‌, ಮಾರ್ಗದರ್ಶಿ ಅಧಿಕಾರಿ ಸುಂದರ ಗೌಡ, ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ ಸಭೆ ಉದ್ದೇಶಿಸಿ ಮಾತನಾಡಿದರು. ಉಪಾಧ್ಯಕ್ಷೆ ಉಮಾವತಿ, ಸದಸ್ಯರುಗಳಾದ ಅಬ್ದುಲ್‌ ಹಮೀದ್‌, ಶಬ್ಬೀರ್‌ ಸಾಹೇಬ್‌, ತೀರ್ಥೇಶ್ವರ ಯು., ವಿನೋದರ, ಅಬ್ರಹಾಂ ಕೆ.ಪಿ., ಪೋ›ರಿನಾ ಡಿ’ಸೋಜಾ, ಉಷಾ ಒ.ಕೆ., ಉಮಾವತಿ ದರ್ಖಾಸು, ಚಿತ್ರಾ ಕೆ.ಉಪಸ್ಥಿತರಿದ್ದರು. ಪಿಡಿಒ ದೇವರಾಜ್‌ ಸ್ವಾಗತಿಸಿದರು. ಸಿಬಂದಿ ಶಿವಪ್ರಸಾದ್‌ ವರದಿ ಮಂಡಿಸಿದರು. ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ವಂದಿಸಿದರು. ಸಿಬಂದಿ ಗಿರೀಶ್‌, ಸೋಮಶೇಖರ ಸಹಕರಿಸಿದರು.

ಜಾಗ ನೀಡದಿದ್ದಲ್ಲಿ ಪ್ರತಿಭಟನೆ
ನೆಲ್ಯಾಡಿಯಲ್ಲಿ ಅಂಬೇಡ್ಕರ್‌ ಭವನಕ್ಕೆ ಜಾಗ ಗುರುತಿಸುವಂತೆ ಪ್ರತಿ ಗ್ರಾಮಸಭೆಯಲ್ಲೂ ಮನವಿ ಮಾಡುತ್ತಿದ್ದೇವೆ. ಆದರೆ ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ. ಡಿಸೆಂಬರ್‌ ಅಂತ್ಯದೊಳಗೆ ಜಾಗ ಗುರುತಿಸಿಕೊಡಬೇಕು. ಇಲ್ಲದಿದ್ದಲ್ಲಿ ಜನವರಿಯಲ್ಲಿ ದಲಿತಾ ಸೇವಾ ಸಮಿತಿ ವತಿಯಿಂದ ಗ್ರಾ.ಪಂ.ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಕೆ.ಪಿ.ಆನಂದ, ಅಣ್ಣಿ ಎಲ್ತಿಮಾರ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿಕರಾದ ಅಶ್ವಿ‌ನಿ, ಆಕ್ಷೇಪ ರಹಿತ ಸೂಕ್ತ ಜಾಗ ಗುರುತಿಸಿಕೊಟ್ಟಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಅಂಬೇಡ್ಕರ್‌ ಭವನಕ್ಕೆ ಜಾಗ ನೀಡಲು ಗ್ರಾ.ಪಂ.ನಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ ಭರವಸೆ ನೀಡಿದರು.

ಆ.2ರಂದು ಪ್ರತಿಭಟನೆ
ಆದೇಶವನ್ನು ಕಡೆಗಣಿಸಿ ಕಾರ್ಯಾಚರಿಸು ತ್ತಿರುವ ಬಾರ್‌ ವಿರುದ್ಧ ದೂರು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ ಆ. 2ರಂದು ನೆಲ್ಯಾಡಿ ಪೇಟೆಯನ್ನು ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಮಿತಿ ತಿಳಿಸಿದೆ. ಪ್ರತಿಭಟನೆ ನಡೆಸುವ ನಿಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳು ನೆಲ್ಯಾಡಿಯ ಕೃಷ್ಣಭವನ ಹಾಲ್‌ನಲ್ಲಿ  ಸಭೆ ಸೇರಿ ಪ್ರತಿಭಟನಾ ಸಮಿತಿ ರಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next