ಮಂಗಳೂರು: ದಕ್ಷಿಣ ಕನ್ನಡದಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗಿ ನಿರ್ಬಂಧಗಳು ಸಡಿಲಗೊಳ್ಳುತ್ತಿರುವಂತೆಯೇ ಜಿಲ್ಲೆ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುತ್ತಿದೆ.
ಹೊರರಾಜ್ಯಗಳ ಪ್ರವಾಸಿಗರು ಜಿಲ್ಲೆಗೆ ಆಗಮಿಸಲು ಆರಂಭಿಸಿದ್ದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಮುನ್ನದಿನವಾದ ರವಿವಾರ ಪುಣೆಯ 13 ಪ್ರವಾಸಿಗರು ಖಾಸಗಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ
ಭೇಟಿ ನೀಡಿದ್ದಾರೆ.
ಖಾಸಗಿ ವಿಮಾನದಲ್ಲಿ ಬೆಳಗ್ಗೆ 11.30ಕ್ಕೆ ಆಗಮಿಸಿದ ಪುಣೆಯ ಒಂದೇ ಕುಟುಂಬದ 13 ಮಂದಿಯನ್ನು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮಾಜಿ ಸಿಇಒ ಯತೀಶ್ ಬೈಕಂಪಾಡಿ ಅವರು ಸ್ವಾಗತಿಸಿದರು.
ಇದನ್ನೂ ಓದಿ:ಧಾರವಾಡ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ
ದೇಶ ವಿದೇಶದ ಹಲವು ಪ್ರವಾಸಿಗರು ಮೂಡುಬಿದಿರೆಯ ಸಾವಿರಕಂಬದ ಬಸದಿ, ಕಟೀಲು, ಬಪ್ಪನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿದರು. ಸೆ. 27ರಂದು ಮಡಿಕೇರಿಗೆ ಪ್ರಯಾಣ ಬೆಳೆಸಿ ಅಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲಿದ್ದಾರೆ. ಪ್ರವಾಸಿಗರು ಈ ಹಿಂದೆಯೂ ಖಾಸಗಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ವಿವಿಧ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿದ್ದರು.