ಮದ್ದೂರು: ಭತ್ತ ಹಾಗೂ ರಾಗಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮದ್ದೂರು- ಕೊಪ್ಪ ಮಾರ್ಗದ ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ಕೊಪ್ಪದಲ್ಲಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು, ರೈತರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯುವ ಮೂಲಕ ರೈತರ ಹಿತ ಕಾಯಬೇಕೆಂದು ಒತ್ತಾಯಿಸಿದರು.
ಕಟಾವು ಆರಂಭ: ತಾಲೂಕಾದ್ಯಂತ ಭತ್ತ ಕಟಾವು ಆರಂಭಗೊಂಡಿದ್ದು, ತಾಲೂಕು ಆಡಳಿತ ಭತ್ತ ಖರೀದಿ ಕೇಂದ್ರ ತೆರೆಯದೆ ನಿರ್ಲಕ್ಷ್ಯ ವಹಿಸಿದ್ದು ಮಧ್ಯವರ್ತಿಗಳು ಕಡಿಮೆ ಬೆಲೆಗೆ ಭತ್ತ ಖರೀದಿ ಮಾಡುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಕಂಡು ಕಾಣದಂತೆ ದಿನ ದೂಡುತ್ತಿದ್ದಾರೆಂದು ಆರೋಪಿಸಿದರು.
ಸಂಕಷ್ಟದಲ್ಲಿ ರೈತರು: ಸರ್ಕಾರ ಈಗಾಗಲೇ ಕ್ವಿಂಟಲ್ ಭತ್ತಕ್ಕೆ 1800, ರಾಗಿ ಕ್ವಿಂಟಲ್‌ಗೆ 2800 ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಕೆಲ ಮಧ್ಯವರ್ತಿಗಳು ಭತ್ತ 1200, ರಾಗಿ 1800 ರೂ.ಗಳಿಗೆ ಖರೀದಿಸುತ್ತಿದ್ದು, ಇದರಿಂದಾಗಿ ರೈತರು ಮತ್ತಷ್ಟು ಸಂಕಷ್ಟ ಎದುರಿಸಬೇಕಿದೆ. ಕೂಡಲೇ ಜಿಲ್ಲಾಡಳಿತ ಅಧಿಕಾರಿಗಳ ಸಭೆ ನಡೆಸಿ ಭತ್ತ ಖರೀದಿ ಕೇಂದ್ರ ತೆರೆಯಲು ಅವಕಾಶ ಕಲ್ಪಿಸ ಬೇಕೆಂದು ಆಗ್ರಹಿಸಿದರು.
ತಾಲೂಕಿನ ಕೀಳಘಟ್ಟ ಗ್ರಾಮದಲ್ಲಿ ಸಮರ್ಪಕವಾಗಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸದೆ ಪಿಡಿಒ ಮಹೇಶ್ ನಿರ್ಲಕ್ಷ್ಯ ವಹಿಸಿದ್ದು ಗ್ರಾಮಸ್ಥರು ಕಲುಷಿತ ನೀರನ್ನು ಸೇವಿಸುವ ಸ್ಥಿತಿ ಬಂದೊದಗಿದೆ. ಇದರಿಂದಾಗಿ ಕಾಯಿಲೆ ಕಂಡುಬರುತ್ತಿರುವುದಾಗಿ ದೂರಿ ದರು. ಕೆಟ್ಟು ನಿಂತಿರುವ ಟ್ರಾನ್ಸ್‌ಫಾರ್ಮ ರನ್ನು ದುರಸ್ತಿಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಟ್ರಾನ್ಸ್‌ಫಾರ್ಮರ್ ದುರಸ್ತಿಪಡಿಸಿ: ಕಳೆದ ಆರು ತಿಂಗಳಿಂದಲೂ ಟ್ರಾನ್ಸ್‌ಫಾರ್ಮರ್ ಕೆಟ್ಟು ನಿಂತು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದ್ದರೂ ಮರಳಿಗ ಗ್ರಾಪಂ ಪಿಡಿಒ ಮಹೇಶ್ ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದು ಸೆಸ್ಕ್ ಅಧಿಕಾರಿಗಳು ಕೂಡಲೇ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದರು. ಒಂದು ವಾರದೊಳಗಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಮುಂದಾಗದಿದ್ದಲ್ಲಿ ಜನ ಜಾನುವಾರುಗಳ ಸಮೇತ ಮೈಸೂರು- ಬೆಂಗಳೂರು ಹೆದ್ದಾರಿ ತಡೆ ನಡೆಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ರಾಮಕೃಷ್ಣಯ್ಯ, ಉಮೇಶ್, ಶಂಕರ್, ಅನಿಲ್, ಶಿವರಾಮು, ಪುಟ್ಟಸ್ವಾಮಿ, ಚನ್ನಪ್ಪ, ರಾಮಣ್ಣ, ಅಶೋಕ್, ಲಿಂಗಪ್ಪ, ರವಿ ಭಾಗವಹಿಸಿದ್ದರು