ಮೈಸೂರು: ಮೈಸೂರು ಮೃಗಾಲಯಕ್ಕೆ ಇತ್ತೀಚೆಗೆ ಆಗಮಿಸಿದ್ದ ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ ಪ್ರಾಣಿಯಾದ ಒರಾಂಗುಟಾನ್‌ಗಳ ಮನೆಯನ್ನು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ(ಬಿಎನ್‌ಪಿಎಂ)ದ ಅಧ್ಯಕ್ಷೆ ತೃಪ್ತಿ ಘೋಷ್ ಉದ್ಘಾಟಿಸಿದರು. ಮೃಗಾಲಯಕ್ಕೆ ಕರೆತಂದಿರುವ ಅಪರೂಪದ 2 ಜೋಡಿ ಒರಾಂಗುಟಾನ್ ವಾಸಕ್ಕಾಗಿ 70 ಲಕ್ಷ ರೂ. ವೆಚ್ಚದಲ್ಲಿ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಅನುದಾನ ನೀಡಿತ್ತು. ಅದರಂತೆ ಬುಧವಾರ ಮೃಗಾಲಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಒರಾಂಗುಟಾನ್‌ಗಳ ಮನೆಯನ್ನು ಉದ್ಘಾಟಿಸಲಾಯಿತು.
ಏಕೈಕ ಮೃಗಾಲಯ: ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಅಧ್ಯಕ್ಷೆ ತೃಪ್ತಿ ಘೋಷ್, ವಿದೇಶದಿಂದ ತಂದಿರುವ ಅಳಿವಿನಂಚಿನಲ್ಲಿರುವ ಒರಾಂಗುಟಾನ್‌ಗಳಿಗೆ ಸಂಸ್ಥೆ ಸಿಎಸ್‌ಆರ್ ಫಂಡ್‌ನಡಿ ಮೈಸೂರು ಮೃಗಾಲ ಯದಲ್ಲಿ ಮನೆ ನಿರ್ಮಾಣ ಮಾಡಿಕೊಟ್ಟಿರುವುದು ಸಂತಸದ ಸಂಗತಿ.
ದೇಶದಲ್ಲಿಯೇ ಒರಾಂಗುಟಾನ್ ಇರುವ ಏಕೈಕ ಮೃಗಾಲಯ ಎಂಬ ಕೀರ್ತಿಗೆ ಮೈಸೂರು ಮೃಗಾಲಯ ಪಾತ್ರವಾಗಿದ್ದು, ಒರಾಂಗುಟಾನ್‌ಗಳನ್ನು ಪ್ರವಾಸಿಗರಿಗು ಕಣ್ತುಂಬಿಕೊಂಡು ಸಂಭ್ರಮಿಸಲಿದ್ದಾರೆ ಎಂದು ಅಚ್ಚುಕಟ್ಟಾಗಿ ಒರಾಂಗುಟಾನ್‌ಗಳಿಗೆ ಮನೆ ನಿರ್ಮಾಣ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:- ಕಡಲ ತೀರದಲ್ಲಿ ಮೊಳಗಿದ ಕನ್ನಡ ಗೀತೆ
ಶೀಘ್ರವೇ ಮೈಸೂರಿಗೆ ಜಾಗ್ವಾರ್: ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ, ಎಲ್.ಆರ್. ಮಹದೇವಸ್ವಾಮಿ ಮಾತ ನಾಡಿ, ಮೃಗಾಲಯಕ್ಕೆ ಅಪರೂಪದ ಪ್ರಾಣಿ ಗಳನ್ನು ತರಲಾಗಿದ್ದು, ಪ್ರವಾಸಿಗರಿಗೆ ಮುದ ನೀಡು ತ್ತಿವೆ. ಮೃಗಾಲಯಕ್ಕೆ ಶೀಘ್ರದಲ್ಲಿಯೇ ಜಾಗ್ವಾರ್ ತರುವ ಪ್ರಯತ್ನ ನಡೆಯುತ್ತಿದೆ. ಶೀಘ್ರವೇ ಮೈಸೂರು ಮೃಗಾಲಯದಲ್ಲಿ ಜಾಗ್ವಾರ್ ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದರು.
ಮೃಗಾಲಯಕ್ಕೆ ಆಗಮಿಸಿದ ಒರಾಂಗುಟಾನ್‌ಗಳಿಗೆ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ವ್ಯವಸ್ಥಿತ ಮನೆ ನಿರ್ಮಾಣ ಮಾಡಿಕೊಟ್ಟಿದ್ದು, ಅವರಿಗೆ ಮೃಗಾಲಯ ಪ್ರಾಧಿಕಾರದ ವತಿಯಿಂದ ಧನ್ಯವಾದ ಸಮರ್ಪಿಸಲು ಬಯಸುತ್ತೇನೆ ಎಂದರು.
ಪ್ರಾಣಿ ವಿನಿಮಯ: ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ಮಾತನಾಡಿ, ಸಿಂಗಾಪುರ ಮತ್ತು ಮಲೇಷಿಯಾ ಮೃಗಾಲಯದಿಂದ ತಲಾ 2 ಜೋಡಿ ಒರಾಂಗುಟಾನ್‌ಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿ ನಮ್ಮ ಮೃಗಾಲಯಕ್ಕೆ ತರಿಸಿ ಕೊಂಡಿದ್ದೇವೆ. ಒರಾಂಗೂಟಾನ್ ಇಲ್ಲಿನ ವಾತಾವರಣಕ್ಕೆ ಇದೀಗ ಸಂಪೂರ್ಣ ಹೊಂದಿಕೊಂಡಿವೆ ಎಂದರು.
ಕಾರ್ಯಕ್ರಮದಲ್ಲಿ ಬಿಎನ್‌ಪಿಎಂ ವ್ಯವಸ್ಥಾಪಕ ನಿರ್ದೇಶಕ ಕೆ.ಜಿ.ವಿಶ್ವನಾಥನ್, ಡಾ.ಎ.ಜಿ.ಕುಲಕರ್ಣಿ, ಎಸ್.ಕೆ.ಸಿನ್ಹಾ, ಎಸ್.ತಲಿಕೇರಪ್ಪ, ಸುಧೀರ್ ಸಾಹು, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ಇದ್ದರು.
ಕೊರೊನಾ ಸೋಂಕು ಹರಡುವಿಕೆಗೂ ಮುನ್ನ ಮೈಸೂರು ಮೃಗಾಲಯಕ್ಕೆ ಪ್ರತಿದಿನ 15 ರಿಂದ 20 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಕೊರೊನಾ ಬಳಿಕ ಈ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರುತ್ತಿದೆ. ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಸುಧಾರಣೆ ಕಂಡು ಬರುತ್ತಿದೆ.
– ಎಲ್.ಆರ್. ಮಹದೇವಸ್ವಾಮಿ, ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ
50 ವರ್ಷಗಳ ಬಳಿಕ ಮೃಗಾಲಯಕ್ಕೆ ಒರಾಂಗುಟಾನ್ –
ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಬರೋಬ್ಬರಿ 50 ವರ್ಷಗಳ ಬಳಿಕ ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿಯಾದ ಒರಾಂಗುಟಾನ್ ಪ್ರಾಣಿಗಳು ತರಲಾಗಿದ್ದು, ಒರಾಂಗುಟಾನ್ ಹೊಂದಿರುವ ಭಾರತದ ಏಕೈಕ ಮೃಗಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.
50 ವರ್ಷಗಳ ಹಿಂದೆ ಮೈಸೂರಿನ ಮೃಗಾಲಯದಲ್ಲಿ ಇದ್ದ ಒಂದು ಜೋಡಿ ಒರಾಂಗುಟಾನ್ ಸಾವಿಗೀಡಾದ ನಂತರ ಒರಾಂಗುಟಾನ್ ಕೊರತೆ ಎದ್ದು ಕಾಣುತ್ತಿತ್ತು. ಹಲವು ವರ್ಷಗಳಿಂದ ಮೃಗಾಲಯಕ್ಕೆ ಒರಾಂಗುಟಾನ್ ತರುವ ಪ್ರಯತ್ನ ಮಾಡಲಾಗಿತ್ತು.
ಅಧಿಕಾರಿಗಳು ಮತ್ತು ಪಾಧಿಕಾರದ ಅಧ್ಯಕ್ಷರ ಕಾಳಜಿಯಿಂದ ಕಳೆದ ತಿಂಗಳಷ್ಟೇ ಮೈಸೂರು ಮೃಗಾಲಯಕ್ಕೆ ಅಪರೂಪದ ಪ್ರಾಣಿ ತರಲಾಗಿದೆ. ಮಲೇಷಿಯಾ ಮೃಗಾಲಯದಿಂದ 5 ವರ್ಷದ ಗಂಡು ಅಫಾ, 7 ವರ್ಷದ ಹೆಣ್ಣು ಮಿನ್ನಿ, ಸಿಂಗಾಪುರ ಮೃಗಾಲಯದಿಂದ 17ವರ್ಷದ ಗಂಡು ಒರಾಂಗೂಟಾನ್ ಮೆರ್ಲಿನ್ ಹಾಗೂ 13 ವರ್ಷದ ಹೆಣ್ಣು ಅಟಿನ ಮೈಸೂರು ಮೃಗಾಲಯಕ್ಕೆ ಬಂದಿವೆ.