Advertisement

ಬಳ್ಳಾರಿಯಲ್ಲಿ 3ನೇ ಕ್ಯಾಂಟೀನ್‌ ಆರಂಭ

06:38 PM Oct 20, 2021 | Team Udayavani |

ಬಳ್ಳಾರಿ: ನಗರದ ತಾಲೂಕು ಕಚೇರಿ, ವಿಮ್ಸ್‌ ಆಸ್ಪತ್ರೆ ಬಳಿ ಈಗಾಗಲೇ ಉಚಿತ ಕ್ಯಾಂಟೀನ್‌ಗಳನ್ನು ತೆರೆದಿರುವ ಮಾಜಿ ಸಚಿವ ಸಂತೋಷ್‌ ಲಾಡ್‌, ಇದೀಗ ನಗರದ ಎಪಿಎಂಸಿ ಬಳಿ ಮತ್ತು ಸಂಡೂರಿನಲ್ಲಿ 9,10ನೇ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿ ಬಡ ಜನರಿಗೆ ಉಚಿತ ಊಟ ವಿತರಿಸುವ ಮೂಲಕ ಮಂಗಳವಾರ ಚಾಲನೆ ನೀಡಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌.ಲಾಡ್‌ ಫೌಂಡೇಷನ್‌ ವತಿಯಿಂದ ಕಲಘಟಗಿ, ಅಳ್ನಾವರದಲ್ಲಿ ಉಚಿತ ಕ್ಯಾಂಟೀನ್‌ ಗಳನ್ನು ಆರಂಭಿಸಲಾಗಿತ್ತು. ಬಳಿಕ ಕೂಡ್ಲಿಗಿ, ಹರಪನಹಳ್ಳಿಯಲ್ಲೂ ತೆರೆಯಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನವಾದ ಆ.12ರಂದು ಬಳ್ಳಾರಿಯ ವಿಮ್ಸ್‌, ತಾಲೂಕು ಕಚೇರಿ ಬಳಿ ಉಚಿತ ಕ್ಯಾಂಟೀನ್‌ನ್ನು ಆರಂಭಿಸಲಾಗಿತ್ತು.

ಇದೀಗ ಬಳ್ಳಾರಿ ನಗರದಲ್ಲಿ ಮೂರನೇ ಕ್ಯಾಂಟೀನ್‌, ಸಂಡೂರಿನಲ್ಲೊಂದು ಕ್ಯಾಂಟೀನ್‌ಗಳನ್ನು ತೆರೆಯಲಾಗಿದ್ದು, ಈವರೆಗೆ ಸುಮಾರು 10 ಲಕ್ಷ ಜನರಿಗೆ ಉಚಿತವಾಗಿ ಊಟ ವಿತರಿಸಲಾಗಿದೆ. ಕಾಲೇಜು ಹುಡುಗರು ಸಹ ಕ್ಯಾಂಟೀನ್‌ ಗಳಿಗೆ ಬಂದು ಊಟ ಸೇವಿಸುತ್ತಿರುವುದು ಕ್ಯಾಂಟೀನ್‌ ತೆರೆದಿದ್ದಕ್ಕೆ ಸಾರ್ಥಕವೆನಿಸಿದೆ ಎಂದು ತಿಳಿಸಿದರು.

ಕಲಘಟಗಿಯಿಂದ ಮರುಜೀವ: ಕ್ಷೇತ್ರ ಕಳೆದುಕೊಂಡಾಗ ಕಲಘಟಗಿ ಕ್ಷೇತ್ರದ ಜನರು ನನ್ನನ್ನು ಎರಡು ಬಾರಿ ಗೆಲ್ಲಿಸುವ ಮೂಲಕ ರಾಜಕೀಯವಾಗಿ ಮರು ಜೀವ ನೀಡಿದ್ದಾರೆ. ಅದನ್ನು ಎಂದಿಗೂ ಮರೆಯುವ ಸಾಧ್ಯವಿಲ್ಲ. ಹಾಗಾಗಿ ಈ ಬಾರಿಯೂ ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ. ಅದಕ್ಕಾಗಿ ತಿಂಗಳಲ್ಲಿ 15 ದಿನ ಕ್ಷೇತ್ರದಲ್ಲೇ ಉಳಿಯುತ್ತಿದ್ದೇನೆ. ರಾಹುಲ್‌ಗಾಂಧಿ , ಪ್ರಿಯಾಂಕಾಗಾಂಧಿ , ಸೋನಿಯಾ ಗಾಂ ಧಿ ಹೆಸರಲ್ಲಿ ಮೂರು ವೈದ್ಯಕೀಯ ಸಂಚಾರಿ ಕ್ಲಿನಿಕ್‌
ಗಳನ್ನು ಆರಂಭಿಸಲಾಗಿದೆ.

ಒಬ್ಬ ಎಂಬಿಬಿಎಸ್‌ ವೈದ್ಯರು, ಸ್ಟಾಫ್‌ ನರ್ಸ್‌, ತಾಂತ್ರಿಕ ಸಿಬ್ಬಂದಿ ಇರಲಿದ್ದು, ಕೋವಿಡ್‌, ಬಿಪಿ, ಪ್ರಗ್ನೆನ್ಸಿ ಸೇರಿ ಎಲ್ಲ ವಿಧದ ಪರೀಕ್ಷೆಗಳನ್ನು ಸಹ ಅಲ್ಲೇ ಮಾಡಲಾಗುತ್ತದೆ. ಪ್ರತಿದಿನ 15 ಹಳ್ಳಿಗಳಂತೆ, ಈಗಾಗಲೇ 50 ಹಳ್ಳಿಗಳಲ್ಲಿ ತಪಾಸಣೆ ನಡೆಸಿದ್ದು, ಔಷಧಗಳನ್ನು ಸಹ ಉಚಿತವಾಗಿ ವಿತರಿಸಲಾಗುತ್ತದೆ ಎಂದವರು ವಿವರಿಸಿದರು.

Advertisement

ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ನನಗಿಲ್ಲ. ಪಕ್ಷದಿಂದಲೂ ಅಂಥ ಸೂಚನೆ ಬರಲ್ಲ ಎಂದು ಭಾವಿಸಿರುವೆ. ಅಂತಿಮ ಕ್ಷಣದಲ್ಲಿ ಪಕ್ಷದ ನಿರ್ಣಯಕ್ಕೆ ಬದ್ಧವಾಗಿರುವೆ ಎಂದ ಅವರು, ನಾನು ನಗರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಜನರ ಆಕಾಂಕ್ಷೆಯೂ ತಪ್ಪಲ್ಲ ಎಂದರು. ಎಸ್‌ ಫೌಂಡೇಷನ್‌ನನ್ನು ನನ್ನ ಸ್ನೇಹಿತರು ಆರಂಭಿಸಿದ್ದಾರೆ. ನನ್ನ ಸ್ವಂತ ಹಣದಲ್ಲೇ ಕ್ಯಾಂಟೀನ್‌ ತೆರೆದು, ಉಚಿತ ಊಟ ವಿತರಿಸಲಾಗುತ್ತಿದೆ ಹೊರತು ಸಿಎಸ್‌ಆರ್‌ ಹಣದಿಂದಲ್ಲ. ಮುಂದಿನ ದಿನಗಳಲ್ಲಿ ಸ್ನೇಹಿತರು, ಹಿತೈಷಿಗಳು ಸಹಕಾರ ನೀಡಿದಲ್ಲಿ ಕ್ಯಾಂಟೀನ್‌ ಗಳನ್ನು ಇನ್ನಷ್ಟು ಮುಂದುವರೆಲಾಗುವುದು ಎಂದರು.

ಗ್ರಾಮೀಣ ಕ್ರೀಡಾಕೂಟ ಆಯೋಜನೆ: ಎಸ್‌.ಲಾಡ್‌ ಫೌಂಡೇಷನ್‌ ವತಿಯಿಂದ ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಒಲಂಪಿಕ್‌ ಮಾದರಿಯಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸುವ ಕುರಿತು ಚಿಂತನೆಯಿದ್ದು, ಮುಂದಿನ ವರ್ಷ ಮಾರ್ಚ್‌ ತಿಂಗಳೊಳಗಾಗಿ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಹಾನಗಲ್‌ ವಿಧಾನಸಭೆ ಉಪಚುನಾವಣೆಯಲ್ಲಿ ಅಡೂರು ಜಿಪಂ ಕ್ಷೇತ್ರದ ಜವಾಬ್ದಾರಿ ನನಗೆ ನೀಡಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್‌ ಮಾನೆಯವರು ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಕಾಂಗ್ರೆಸ್‌ ಅಭಿವೃದ್ಧಿ, ಮಾಜಿ ಸಿಎಂ ಸಿದ್ದರಾಮಯ್ಯ ಅವ ಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದೇವೆ. ಬಿಜೆಪಿಯವರು ಕೇವಲ ಹಣವನ್ನು ಮುಂದಿಕೊಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದು, ಮತ ಕೇಳಲು ಅವರಿಗೆ ಮುಖವಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ್‌ ಮಾನೆಯವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ನಗರದ ಸುಧಾ ವೃತ್ತದಿಂದ ಕಾಂಗ್ರೆಸ್‌ ಕಾರ್ಯಕರ್ತರು ಬೈಕ್‌ ರ್ಯಾಲಿ ನಡೆಸಿದರು. ಈ ವೇಳೆ ಜಿಲ್ಲಾಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್‌, ಪಾಲಿಕೆ ಸದಸ್ಯರಾದ ಮುಲ್ಲಂಗಿ ನಂದೀಶ್‌, ಪೇರಂ ವಿವೇಕ್‌, ಮುಖಂಡರಾದ ಹೊನ್ನಪ್ಪ, ಮಾಜಿ ಮೇಯರ್‌ ವೆಂಕಟರಮಣ, ಸಿದ್ದು ಹಳ್ಳೆಗೌಡ, ಸಿದ್ಧಾರ್ಥಗೌಡ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next