ಬೆಳ್ತಂಗಡಿ: ವ್ಯಕ್ತಿಯನ್ನು ಸಮಾಜಕ್ಕೆ ಶಕ್ತಿಯಾಗಿ ಬೆಳೆಸಿದ ಕೀರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಲ್ಲುತ್ತದೆ. ಸಮಾಜದ ಪ್ರತಿಯೊಬ್ಬ ಪ್ರಜೆಯನ್ನು ಜವಾಬ್ದಾರಿಯುತ ನಾಗರಿ ಕನನ್ನಾಗಿಸುವಲ್ಲಿ ಸರಕಾರಕ್ಕಿಂತಲೂ ಉನ್ನತ ಕೆಲಸ ಮಾಡುತ್ತಿರುವ ಡಾ| ಹೆಗ್ಗಡೆ ಚಿಂತನೆಯ ಯೋಜನೆ ವಿಶ್ವವ್ಯಾಪಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ಗೊಬ್ಬರ ಖಾತೆ ಸಚಿವ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ಕಚೇರಿ “ಧರ್ಮಶ್ರೀ’ಯ ನೂತನ ವಿಸ್ತೃತ ಕಟ್ಟಡ ಉದ್ಘಾಟಿಸಿ, ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ತ್ಯಾಜ್ಯ ಸಂಗ್ರಹಣಾ ಬುಟ್ಟಿ ವಿತರಣೆ: ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಾಂಕೇತಿಕವಾಗಿ ಶ್ರದ್ಧಾಕೇಂದ್ರಗಳಿಗೆ ತ್ಯಾಜ್ಯ ಸಂಗ್ರಹಣಾ ಬುಟ್ಟಿ ವಿತರಿಸಿದರು. ಬಳಿಕ ಮಾತನಾಡಿ, ಸರಕಾರದ ಜನಮಂಗಳ ಕಾರ್ಯಗಳಿಗೆ ಹೆಗ್ಗಡೆಯವರೇ ಪ್ರೇರಕ ಶಕ್ತಿಯಾಗಿದ್ದಾರೆ.
ಧರ್ಮ ಸ್ಥಳದ ಮಾದರಿಯಲ್ಲೆ ಏ.26ರಂದು ರಾಜ್ಯದ 110 ದೇವಸ್ಥಾನಗಳಲ್ಲಿ ಸರಕಾರದ ವತಿಯಿಂದ ಸಾಮೂಹಿಕ ವಿವಾಹ ನಡೆಸಲಾಗುವುದು. ಯಾವುದಾದರೂ ಒಂದು ದೇವಸ್ಥಾನದ ಸಾಮೂಹಿಕ ವಿವಾಹಕ್ಕೆ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಬಂದು ಆಶೀರ್ವದಿಸಬೇಕು ಎಂದು ಆಮಂತ್ರಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ರಾಜ್ಯದೆಲ್ಲೆಡೆ 1,500 ಮಂದಿ ಸೇವಾ ಪ್ರತಿನಿಧಿಗಳು ಸೇವೆ ಮಾಡಿ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜನಮಂಗಳ ಕಾರ್ಯಕ್ರಮದಡಿ ದಿವ್ಯಾಂಗರಿಗೆ ಶಾಸಕ ಹರೀಶ್ ಪೂಂಜ ಸಲಕರಣೆಗಳನ್ನು ವಿತರಿಸಿದರು.
ಇದೇ ವೇಳೆ, ಧರ್ಮಸ್ಥಳ ವಲಯದ 9 ಒಕ್ಕೂಟಗಳ ಪದಗ್ರಹಣ ಸಮಾರಂಭ ನಡೆಯಿತು. ಕಟ್ಟಡ ನಿರ್ಮಾಣದ ರೂವಾರಿ ಡಿ.ಹರ್ಷೇಂದ್ರ ಕುಮಾರ್, ವಾಸ್ತು ಶಿಲ್ಪಿ ಬ್ರಹ್ಮೇ ಮತ್ತು ಗೋಪಾಲ ಮೆನನ್ ಅವರನ್ನು ಗೌರವಿಸಲಾಯಿತು. ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ ಶಿರ್ತಾಡಿ ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು.
ನೂತನ ಜಲಾಭಿಷೇಕ ಯೋಜನೆಯಡಿ ರಾಜ್ಯದಲ್ಲಿ ದೇವಸ್ಥಾನಗಳ ಬಳಿ ಇರುವ ಕೆರೆಗಳನ್ನು (ಪುಷ್ಕರಣಿ) ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಶುಚೀಕರಣಗೊಳಿಸಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವ.