ಆನೇಕಲ್: ಪ್ರತಿಯೊಬ್ಬರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವತ್ಛತೆ ಕಾಪಾಡಿಕೊಂಡರೆ ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಜಿಲ್ಲಾ ರಾಷ್ಟ್ರೀಯ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಟಿ.ಕೆ. ಸುನಂದಾ ತಿಳಿಸಿದರು.
ಅಗತ್ಯ ಕ್ರಮಕೈಗೊಳ್ಳಿ: ತಾಲೂಕಿನ ಚಂದಾಪುರದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಹಾಗೂ ಆನೇಕಲ್ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಸೊಳ್ಳೆಗಳು ತಮ್ಮ ವಂಶಾಭಿವೃದ್ಧಿಯಾಗದಂತೆ ಜನರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸಾರ್ವಜನಿಕರ ಪಾತ್ರ ಮಹತ್ವದ್ದು: ಆರೋಗ್ಯ ಸಹಾಯಕರು ಮತ್ತು ಆಶಾ ಕಾಯಕರ್ತೆಯರು ಮನೆ-ಮನೆಗೆ ಭೇಟಿ ನೀಡುವ ಸಂಧರ್ಭದಲ್ಲಿ ಸಾರ್ವಜನಿಕರ ಸಂಪೂರ್ಣ ಆರೋಗ್ಯದ ಮಾಹಿತಿಯನ್ನು, ಸಂಗ್ರಹಿಸಿ ಮಲೇರಿಯಾ ರೋಗದ ಲಕ್ಷಣಗಳು ಕಂಡರೆ ಕೂಡಲೇ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಹಾಗೂ ಹೊರ ಜಿಲ್ಲೆಗಳಿಂದ ಬಂದ ಕೂಲಿ ಕಾರ್ಮಿಕರು ಮಲೇರಿಯಾ ಪರೀಕ್ಷೆಗೊಳಪಡಿಸಬೇಕು. ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟ ಬೇಕಾದರೆ ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಸೊಳ್ಳೆ ಪರದೆ ಬಳಸಿ: ಆನೇಕಲ್ ತಾಲೂಕು ಆರೋಗ್ಯ ಅಧಿಕಾರಿ ಡಾ.ಜ್ಞಾನ ಪ್ರಕಾಶ್ ಮಾತನಾಡಿ, ಮಲೇರಿಯಾ ಕಾಯಿಲೆ ಪ್ರಕರಣಗಳು ಹರಡದಂತೆ ಆರೋಗ್ಯ ಇಲಾಖೆ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕರಿಸಿ, ನಿಮ್ಮ ಮನೆ ಸುತ್ತಮುತ್ತ ನೈರ್ಮಲ್ಯ ಕಾಪಾಡಿಕೊಂಡು ಲಾರ್ವಾಗಳನ್ನು ನಾಶ ಪಡಿಸಬೇಕು.
ಮನೆಯ ತೊಟ್ಟಿಗಳು, ತ್ಯಾಜ್ಯ ವಸ್ತುಗಳಾದ ಎಳನೀರು ಚಿಪ್ಪು, ಬಾಟಲಿ ಟೈರ್, ಮಡಿಕೆ ಮುಂತಾದವುಗಳನ್ನು ವಿಲೇವಾರಿ ಮಾಡಬೇಕು. ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆಗಳನ್ನು ಬಳಕೆ ಮಾಡುವುದರಿಂದ ಮಲೇರಿಯಾ ಕಾಯಿಲೆ ತಡೆಗಟ್ಟಬಹುದು ಎಂದು ಹೇಳಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಚಂದಾಪುರ ಪುರಸಭ ಸದಸ್ಯರು ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಚಂದಾಪುರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸುವ ಮೂಲಕ ಜನರಲ್ಲಿ ಮಲೇರಿಯಾ ಬಗ್ಗೆ ಅರಿವು ಮೂಡಿಸಲಾಯಿತು.
ವೈದ್ಯರಾದ ಸೀಮಾ, ಡಾ.ರಾಜು ಮತ್ತು ಚಂದಾಪುರ ಪುರಸಭೆ ಸದಸ್ಯರು, ಆಶಾ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.