ಶಹಾಬಾದ: ಬಯಲು ಶೌಚದಿಂದ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸಲು ಹಾಗೂ ಸ್ವತ್ಛ ಪರಿಸರ ನಿರ್ಮಾಣಕ್ಕಾಗಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸಿ ಎಂದು ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಂತ್ರಜ್ಞ ಕೌಸರ್ ನಿಯಾಜ್ ಅಹ್ಮದ್ ಹೇಳಿದರು.
ನಗರದ ಎಸ್‌ಎಸ್ ಮರಗೋಳ ಮಹಾವಿದ್ಯಾಲಯ ಹಾಗೂ ಕಲಬುರಗಿ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯದ ಅವಶ್ಯಕತೆ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಜನರ ಜನಕಲ್ಯಾಣಕ್ಕಾಗಿ ವಿವಿಧ ಯೋಜನೆಗಳ ಮೂಲಕ ಗ್ರಾಮದಲ್ಲಿನ ಪ್ರತಿಯೊಬ್ಬರು ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಬೇಕು. ಸಮಾಜದ ಪ್ರತಿ ಕುಟುಂಬ ಆರೋಗ್ಯವಂತರಾಗಿ ಬದುಕಲು ಸುತ್ತಲಿನ ಪರಿಸರ ಅತ್ಯಂತ ಪ್ರಮುಖವಾಗಿದ್ದು, ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು. ಮಹಾತ್ಮ ಗಾಂಧೀಜಿ ಕನಸು ನನಸಾಗಬೇಕಾದರೆ ಎಲ್ಲರು ಸ್ವತ್ಛ ಭಾರತ ಅಭಿಯಾನದಲ್ಲಿ ಮುಕ್ತ ಮನಸ್ಸಿನಿಂದ ಭಾಗವಹಿಸಿದಾಗ ಮಾತ್ರ ಗ್ರಾಮಗಳ ಉದ್ಧಾರವಾಗುತ್ತವೆ. ಬಯಲು ಶೌಚಾಲಯದಿಂದ ಅನೇಕ ರೋಗಗಳು ಹರಡುತ್ತವೆ. ಆದ್ದರಿಂದ ಬಯಲು ಶೌಚ ಮುಕ್ತ ಭಾರತವಾದಾಗ ಮಾತ್ರ ಜನರು ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರದ ಕಚೇರಿ ಅಧೀಕ್ಷಕ ಮೋಹನಕುಮಾರ ಗಾಯಕವಾಡ್, ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಅಮರೇಶ ಇಟಗಿಕರ್, ವಿಜಯಲಕ್ಷ್ಮೀ , ಸುಮಂಗಲಾ, ರಾಜಶೇಖರ ಚಳಗೇರಿ, ಶರಣಪ್ಪ ಕವಡೆ, ಶಿವಶಂಕರ ಹಿರೇಮಠ, ಗುರುಲಿಂಗಪ್ಪ ತುಂಗಳ ಇದ್ದರು. ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಎಸ್.ಎಂ. ಕೋಟನೂರ್ ಅಧ್ಯಕ್ಷತೆ ವಹಿಸಿದ್ದರು.