ಬೆಂಗಳೂರು: ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ಸಂಜೆ ತೆರೆ ಬೀಳಲಿದ್ದು, ಮೇ 19ರಂದು ನಡೆಯುವ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಮಧ್ಯೆ, ಉಭಯ ಕ್ಷೇತ್ರಗಳಲ್ಲಿ ಪ್ರಚಾರದ ಕಾವು ಜೋರಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ನಾಯಕರು ಗುರುವಾರ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿ, ಮತದಾರರ ಒಲವು ಗಳಿಸುವ ಯತ್ನ ನಡೆಸಿದರು.
ಮತದಾನಕ್ಕೆ ಸಕಲ ಸಿದ್ಧತೆ: ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಎರಡೂ ಕ್ಷೇತ್ರಗಳ ಮತದಾನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಬಹಿರಂಗ ಪ್ರಚಾರಕ್ಕೆ ಮೇ 17ರ ಸಂಜೆ 6 ಗಂಟೆಗೆ ತೆರೆ ಬೀಳಲಿದ್ದು, ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಹಾಗೂ ಇತರರಿಗೆ ಕ್ಷೇತ್ರ ಬಿಟ್ಟು ತೆರಳುವಂತೆ ಸೂಚನೆ ನೀಡಲಾಗಿದೆ ಎಂದರು.
ಚುನಾವಣೆ ನಡೆಯಲಿರುವ ಎರಡೂ ಕ್ಷೇತ್ರಗಳಲ್ಲಿ ಮತದಾನಕ್ಕೆ ಮೊದಲಿನ ಕೊನೆಯ 48 ಗಂಟೆಗಳಲ್ಲಿ ನೀತಿ ಸಂಹಿತೆ ಜಾರಿ ಇನ್ನಷ್ಟು ಬಿಗಿಗೊಳ್ಳಲಿದೆ. ಈಗಾಗಲೇ ಚಿಂಚೋಳಿ ಮತ್ತು ಕುಂದಗೋಳದಲ್ಲಿ ತಲಾ 15 ಫ್ಲಾಯಿಂಗ್ ಸ್ಕ್ವಾಡ್ ತಂಡಗಳು ಕಾರ್ಯಾಚರಿಸುತ್ತಿವೆ. ಇದಲ್ಲದೇ ಚಿಂಚೋಳಿಯಲ್ಲಿ 30, ಕುಂದಗೋಳದಲ್ಲಿ 18 ರಾಜ್ಯ ವಿಚಕ್ಷಣಾ ತಂಡಗಳು, ಚಿಂಚೋಳಿಯಲ್ಲಿ 22, ಕುಂದಗೋಳದಲ್ಲಿ 18 ಸೆಕ್ಟರ್ ಅಧಿಕಾರಿಗಳು, ಕ್ರಮವಾಗಿ 4 ಮತ್ತು 5 ಅಬಕಾರಿ ತಂಡಗಳು, 4ಮತ್ತು 3 ವಾಣಿಜ್ಯ ತೆರಿಗೆ ತಂಡಗಳನ್ನು ನಿಯೋ ಜಿಸಲಾಗಿದೆ. ಚಿಂಚೋಳಿಯಲ್ಲಿ 10 ಮತ್ತು ಕುಂದಗೋಳದಲ್ಲಿ 6 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸ ಲಾಗಿದೆ. ಎರಡೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ 17ರ ಸಂಜೆ 6 ಗಂಟೆಯಿಂದ ಮೇ 19ರ ಸಂಜೆ 6 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಈ ನಿಷೇಧ ಕ್ಷೇತ್ರದ 5 ಕಿ.ಮೀ ಗಡಿ ಭಾಗದವರೆಗೆ ವಿಸ್ತರಣೆ ಯಾಗಿರುತ್ತದೆ ಎಂದು ಮಾಹಿತಿ ನೀಡಿದರು.
80 ಲಕ್ಷ ಅಕ್ರಮ ಹಣ ಜಪ್ತಿ
ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಮೇ 15ರವರೆಗೆ ಚಿಂಚೋಳಿಯಲ್ಲಿ 6.82 ಲಕ್ಷ ರೂ.ನಗದು, 60 ಸಾವಿರ ರೂ. ಮೌಲ್ಯದ ಅಕ್ರಮ ಮದ್ಯ ಸೇರಿ ಒಟ್ಟು 7.42 ಲಕ್ಷ ರೂ.ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಅಲ್ಲದೇ, ಕುಂದಗೋಳದಲ್ಲಿ 42 ಲಕ್ಷ ರೂ.ನಗದು, 21 ಸಾವಿರ ರೂ.ಮೌಲ್ಯದ ಅಕ್ರಮ ಮದ್ಯ ಸೇರಿ 72.22 ಲಕ್ಷ ರೂ.ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ವಶಪಡಿಸಿಕೊಳ್ಳಲಾದ ಅಕ್ರಮ ಹಣದ ಮೊತ್ತ 79.64 ಲಕ್ಷ ರೂ.ಆಗಿದೆಎಂದು ರಾಜ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದರು.