Advertisement

ಸಂಚಾರಕ್ಕೆ  ತೆರೆದುಕೊಂಡಿತು ಮುರ ರೈಲ್ವೇ ಮೇಲ್ಸೇತುವೆ

10:57 AM Jun 24, 2018 | Team Udayavani |

ನೆಹರೂನಗರ: ಎರಡು ವರ್ಷಗಳ ಕಾಮಗಾರಿ ಬಳಿಕ ಮುರ ರೈಲ್ವೇ ಮೇಲ್ಸೇತುವೆ ಸಂಚಾರಕ್ಕೆ ತೆರೆದುಕೊಂಡಿದೆ. ಅಧಿಕೃತ ಉದ್ಘಾಟನೆ ಇಲ್ಲದ ಕಾರಣ ವಾಹನಗಳ ಸಂಚಾರ ಪ್ರಾರಂಭಗೊಂಡಿದೆ. ಒಟ್ಟು 2.25 ಕೋಟಿ ರೂ. ವೆಚ್ಚದಲ್ಲಿ ಮುರ ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆದಿದೆ. ಮೊದಲಿದ್ದ ದಾರಿಯನ್ನು ಮುಚ್ಚಿ, ಬಳಿಯಲ್ಲೇ ಬೃಹತ್‌ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಮೊದಲು ಇಲ್ಲಿ ಗೇಟ್‌ ಹಾಕಲಾಗಿದ್ದು, ಓರ್ವ ಸಿಬಂದಿಯನ್ನು ನೇಮಕ ಮಾಡಲಾಗಿತ್ತು. ಇದೀಗ ಗೇಟ್‌ ಮುಚ್ಚಿದ್ದು, ಸಿಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು ವಾಹನ ಸಂಚಾರಕ್ಕೆ ಮುರ ರೈಲ್ವೇ ಮೇಲ್ಸೇತುವೆ ಮುಕ್ತವಾಗಿದ್ದು, ಗೇಟ್‌ನ ಅಗತ್ಯವೇ ಇಲ್ಲ.

Advertisement

ಆರು ಮೇಲ್ಸೇತುವೆ
ಪುತ್ತೂರು ಆಸುಪಾಸಿಗೆ ಒಟ್ಟು 6 ಮೇಲ್ಸೇತುವೆಯನ್ನು ಮಂಜೂರು ಮಾಡಿ ರೈಲ್ವೇ ಇಲಾಖೆ ಆದೇಶ ಹೊರಡಿಸಿತ್ತು. ಇದರಲ್ಲಿ ಕೋಡಿಂಬಾಳ, ಎಡಮಂಗಲ, ಮುರ, ಕಲ್ಲಡ್ಕ, ಅಮ್ಟೂರು, ಸುಂಕದಕಟ್ಟೆ ಮೇಲ್ಸೇತುವೆಗಳು ಸೇರಿವೆ. ಇದರಲ್ಲಿ ಪುತ್ತೂರಿನ ಮುರ ರೈಲ್ವೇ ಮೇಲ್ಸೇತುವೆಗೆ 2 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಈ 2 ಕೋಟಿ ರೂ. ಅನುದಾನ ಕಾಮಗಾರಿಗೆ ಸಾಕಾಗಲಿಲ್ಲ. ಈಗಿನ ಲೆಕ್ಕಾಚಾರದಲ್ಲಿ ಒಟ್ಟು 2.25 ಕೋಟಿ ರೂ. ಬಳಕೆ ಆಗಿದೆ.

ಎಪಿಎಂಸಿ ರಸ್ತೆ ಹಾಗೂ ವಿವೇಕಾನಂದ ಕಾಲೇಜು ರಸ್ತೆ ರೈಲ್ವೇ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಹಲವು ಬಾರಿ ಬೇಡಿಕೆ ಮುಂದಿಡಲಾಗಿತ್ತು. ಆದರೆ ಈ ಎರಡೂ ಕಾಮಗಾರಿಗಳಿಗೆ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಇದರ ಬದಲಾಗಿ ಮುರ ರೈಲ್ವೇ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಮುರ ರೈಲ್ವೇ ಮೇಲ್ಸೇತುವೆ ತೀರಾ ಅಗತ್ಯವೇ ಆಗಿದೆ.

ಅನುಕೂಲ
ಮಾಣಿ- ಮೈಸೂರು ಹೆದ್ದಾರಿಯ ಮುರದಿಂದ ಕೆದಿಲ ಮಾರ್ಗವಾಗಿ ಸಾಗಿದರೆ ಮಾಣಿ- ಉಪ್ಪಿನಂಗಡಿ ನಡುವಿನ ಗಡಿಯಾರ ಬಳಿ ತಲುಪಬಹುದು. ಮಾಣಿ- ಮೈಸೂರು ರಸ್ತೆಯಲ್ಲಿ ತುರ್ತು ಅವಘಡ ಸಂಭವಿಸಿದ ಸಂದರ್ಭ, ಈ ರಸ್ತೆಯನ್ನು ಬದಲಿಗೆ ಬಳಸಿಕೊಳ್ಳಬಹುದು. ಬೊಳುವಾರು ಮಾರ್ಗವಾಗಿ ಅಥವಾ ಮಾಣಿ ಮಾರ್ಗವಾಗಿ ಸುತ್ತು ಬಳಸಿ ಸಾಗುವುದನ್ನು ತಪ್ಪಿಸಲು ಮುರ- ಕೆದಿಲ ಮಾರ್ಗವಾಗಿ ಸಾಗಿದರೆ ಸುಲಭ ಹಾಗೂ ಹತ್ತಿರದ ದಾರಿ. ಮಾತ್ರವಲ್ಲ ಕಡೇಶಿವಾಲಯ ಭಾಗಕ್ಕೆ ಹೋಗುವವರು ಮುರ- ಕೆದಿಲ ಮಾರ್ಗವನ್ನೇ ಬಳಸಿಕೊಳ್ಳುತ್ತಾರೆ. ಕೆಲ ವರ್ಷಗಳ ಮೊದಲು ಈ ಮಾರ್ಗವಾಗಿ ಬಸ್‌ ಸಂಚಾರವೂ ಇತ್ತು. ಆದರೆ ಈ ಪ್ರದೇಶ ಅಭಿವೃದ್ಧಿಗೆ ತೆರೆದುಕೊಳ್ಳದ ಕಾರಣ, ಬಸ್‌ ಸಂಚಾರ ಕ್ರಮೇಣ ಸ್ಥಗಿತಗೊಂಡಿತು. ಇದೀಗ ಮುರದಲ್ಲಿ ರೈಲ್ವೇ ಮೇಲ್ಸೇತುವೆ ಸಂಚಾರಕ್ಕೆ ತೆರೆದುಕೊಂಡಿದೆ. ಈ ಭಾಗದ ಅಭಿವೃದ್ಧಿಗೆ ರೈಲ್ವೇ ಮೇಲ್ಸೇತುವೆ ಪೂರಕ ಆಗುವ ಲಕ್ಷಣಗಳು ಇದೆ. 

ಹೀಗಿದೆ ಕಾಮಗಾರಿ
ಮುರ ರೈಲ್ವೇ ಗೇಟ್‌ ಬಳಿಯಲ್ಲೇ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಗೇಟ್‌ ಬಲಬದಿಯ ಗುಡ್ಡೆಯನ್ನು ಇನ್ನಷ್ಟು ಎತ್ತರಿಸಿ, ಕಾಮಗಾರಿ ನಡೆಸಲಾಗಿದೆ. ಮುರ ಹೆದ್ದಾರಿ ಬದಿಯಲ್ಲಿ ಹಾಗೂ ರೈಲ್ವೇ ಹಳಿ ಬದಿಯಲ್ಲಿ ಕಾಂಕ್ರೀಟ್‌ ಗೋಡೆ ಕಟ್ಟಲಾಗಿದೆ. ಇದರ ನಡುವೆ ಮಣ್ಣು ಹಾಕಲಾಗಿದೆ. ಮಣ್ಣು ಕುಸಿಯದಂತೆ ಕಲ್ಲು ಹಾಸಲಾಗಿದೆ. ಮೇಲ್ಭಾಗದಲ್ಲಿ ಸೇತುವೆ ನಿರ್ಮಿಸಿದ್ದು, ಇಲ್ಲಿಂದ ವಾಹನ ಸಾಗಬೇಕು.

Advertisement

ಇನಷ್ಟು ಕಾಮಗಾರಿ
ಮೇಲ್ಸೇತುವೆ ತುಂಬಾ ಎತ್ತರದಲ್ಲಿ ನಿರ್ಮಾಣಗೊಂಡಿದೆ. ಇದರ ಒಂದು ಬದಿಯಲ್ಲಿ (ಹೆದ್ದಾರಿ) ದೊಡ್ಡ ಪ್ರಪಾತದಂತೆ ಭಾಸವಾಗುತ್ತಿದೆ. ಇಲ್ಲಿ ಅಪಾಯ ಸಂಭವಿಸಬಾರದು ಎಂಬ ದೃಷ್ಟಿಯಿಂದ ಒಂದಷ್ಟು ಕಂಬಗಳನ್ನು ನೆಡಲಾಗಿದೆ. ಆದರೆ ಈ ಕಂಬಗಳು ಅದೆಷ್ಟು ಸುರಕ್ಷಿತವೋ ಗೊತ್ತಿಲ್ಲ. ಇದರ ಜತೆಗೆ ನೆಟ್‌ ಅಳವಡಿಸಿದರೆ ಉತ್ತಮ ಎನ್ನುತ್ತಾರೆ ಸ್ಥಳೀಯರು.

 ಸರಳ ಉದ್ಘಾಟನೆ
ಮುರ ರೈಲ್ವೇ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಉದ್ಘಾಟನೆಗಾಗಿ ಕಾರ್ಯಕ್ರಮ ಮಾಡುವುದರಿಂದ ಹಣ ವೇಸ್ಟ್‌. ಆದ್ದರಿಂದ ಯಾವುದೇ ಕಾರ್ಯಕ್ರಮ ಮಾಡದೇ, ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. 2.25 ಕೋಟಿ ರೂ.ನಲ್ಲಿ ಮುರ ರೈಲ್ವೇ ಮೇಲ್ಸೇತುವೆ ನಿರ್ಮಾಣಗೊಂಡಿದೆ.
 - ಪಿ.ಕೆ. ನಾಯ್ಡು, ಪುತ್ತೂರು ರೈಲ್ವೇ ಸೆಕ್ಷನ್‌
    ಎಂಜಿನಿಯರ್‌

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next