Advertisement

ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ಧೂರಿ ತೆರೆ

12:00 PM Mar 02, 2018 | Team Udayavani |

ಬೆಂಗಳೂರು: ಸತತ ಏಳು ದಿನಗಳ ಕಾಲ ಕನ್ನಡ ಸೇರಿದಂತೆ ದೇಶ-ವಿದೇಶಗಳ ಇನ್ನೂರಕ್ಕೂ ಹೆಚ್ಚು ಮೌಲ್ಯಯುತ ಸಿನಿಮಾಗಳ ಪ್ರದರ್ಶನಕ್ಕೆ ಸಾಕ್ಷಿಯಾದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ ಅದ್ಧೂರಿ ತೆರೆ ಬಿದ್ದಿತು. 

Advertisement

ಜೊತೆಗೆ ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರಿಗೆ “ಜೀವಮಾನ ಸಾಧನೆ’ ಪ್ರಶಸ್ತಿ ಪ್ರದಾನ ಮತ್ತು ಕನ್ನಡದ ಏಳು ಚಲನಚಿತ್ರಗಳು ಸೇರಿದಂತೆ ಭಾರತೀಯ ಹಾಗೂ ಏಷ್ಯಾದ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ ಪ್ರದಾನದೊಂದಿಗೆ ಸಿನಿಮೋತ್ಸವ ಸಮಾರೋಪಗೊಂಡಿತು.

ಬೆಂಗಳೂರಿನ 11 ಚಿತ್ರಮಂದಿರಗಳಲ್ಲಿ ನಡೆದ ಈ ಸಿನಿಮೋತ್ಸವದಲ್ಲಿ ಪ್ರತಿದಿನ ನಾಲ್ಕು ಸಾವಿರ ಜನರಂತೆ ಏಳು ದಿನಗಳಲ್ಲಿ ಒಟ್ಟು 3ಲಕ್ಷ ಮಂದಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಚಿತ್ರೋತ್ಸವದಲ್ಲಿ ನಡೆದ “ಮಾಸ್ಟರ್‌ ಕ್ಲಾಸ್‌’ನಲ್ಲಿ ಚಿತ್ರೋದ್ಯಮದ ವಿವಿಧ ಕ್ಷೇತ್ರಗಳ ದೇಶ-ವಿದೇಶಗಳ ತಜ್ಞರು ವಿಷಯಗಳನ್ನು ಮಂಡಿಸಿದರು.

200 ಸಿನಿಮಾಗಳ ಪೈಕಿ 80 ಕನ್ನಡ, 60 ಭಾರತೀಯ ಮತ್ತು 50 ಏಷಿಯನ್‌ ಸಿನಿಮಾಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಪ್ರಥಮ ಹಂತಕ್ಕೆ ಕನ್ನಡದ 12, ಭಾರತೀಯ 12 ಮತ್ತು 12 ಏಷಿಯನ್‌ ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಒಟ್ಟು 11 ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯಿತು. 

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಮೇಯರ್‌ ಸಂಪತ್‌ರಾಜ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು, ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್‌ಕುಮಾರ್‌ ಪಾಂಡೆ, ಆಯುಕ್ತ ಡಾ. ಪಿ.ಎಸ್‌. ಹರ್ಷ ಇತರರು ಇದ್ದರು. 

Advertisement

ಜೀವನ ರೂಪಿಸುವ ಮಾಧ್ಯಮ: ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಿ, ಸಿನಿಮಾ ಎಂದರೆ ಮನರಂಜನೆಯಲ್ಲ, ಅದೊಂದು ಜೀವನ ರೂಪಿಸಿಕೊಳ್ಳುವ ಮಾಧ್ಯಮ. ಯಾವ ರಾಜ್ಯದಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ಸಿಗುತ್ತದೆ. ಆ ರಾಜ್ಯ ಚಾರಿತ್ರ್ಯದಲ್ಲೂ ಉನ್ನತ ಸ್ಥಾನದಲ್ಲಿರುತ್ತದೆ. ಜನರಿಗೆ ಮತ್ತು ಸಮಾಜಕ್ಕೆ ಉಪಯುಕ್ತವಾಗುವಂತಹ ಮೌಲಿಕ ಚಿತ್ರಗಳ ನಿರ್ಮಾಣ ಹೆಚ್ಚಾಗಬೇಕು ಎಂದರು.

ಗುಣಮಟ್ಟ ಮುಖ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ವರ್ಷದಲ್ಲಿ ಎಷ್ಟು ಚಲನಚಿತ್ರಗಳು ನಿರ್ಮಿಸಲಾಯಿತು ಅನ್ನುವುದು ಮುಖ್ಯ ಅಲ್ಲ. ಅದರಲ್ಲಿ ಒಳ್ಳೆಯ ಗುಣಮಟ್ಟದ ಚಿತ್ರಗಳು ಎಷ್ಟು ಅನ್ನುವುದು ಮುಖ್ಯ.ಕನ್ನಡ ಚಲನಚಿತ್ರ ರಂಗ ಹಾಗೂ ಕನ್ನಡ ಭಾಷೆ ಬೆಳೆಯಬೇಕು. ನಮ್ಮ ಸಿನಿಮಾಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಬೇಕು ಅನ್ನುವುದು ನನ್ನ ಆಸೆ ಎಂದರು. 

ನಗದು ದೇಣಿಗೆ: ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ, ವಿಧಾನಸೌಧದ ಮುಂದೆ ಹಾದು ಹೋದಾಗಲೆಲ್ಲ, ಯಾಕೆ ಇಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಪ್ರಶ್ನೆ ನನಗೆ ಕಾಡುತ್ತಿತ್ತು. ಇದೇ ಮೊದಲ ಬಾರಿಗೆ ವಿಧಾನಸೌಧದ ಒಳಗೆ ಬಂದಿದ್ದೇನೆ. ಪ್ರಶಸ್ತಿ ಜೊತೆಗೆ ಸಿಕ್ಕ 10 ಲಕ್ಷ ರೂ. ಹಣವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್‌ ಬಾಬು ಅವರು ಶಿಫಾರಸು ಮಾಡುವ ಸಂಸ್ಥೆಗೆ ದೇಣಿಗೆಯಾಗಿ ಕೊಡುತ್ತೇನೆ ಎಂದರು.

“ಅಂತರರಾಷ್ಟ್ರೀಯ ಸಿನಿಮೋತ್ಸವ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಮತ್ತು ಖ್ಯಾತಿ ಪಡೆಯುತ್ತಿದೆ. ಮುಂದೊಂದು ದಿನ ಇದು “ಕಾನ್ಸ್‌ ಸಿನಿಮೋತ್ಸವ’ಕ್ಕೆ ಸಾರಿಸಾಟಿಯಾಗಲಿದೆ. ಈ ಬಾರಿ ನಿಗದಿಪಡಿಸಿದ ಚಿತ್ರಮಂದಿರಗಳು ಸಾಕಾಗಿಲ್ಲ. ಮುಂದಿನ ವರ್ಷ ಮಂತ್ರಿಮಾಲ್‌, ಕೋರಮಂಗಲದಲ್ಲೂ ಚಿತ್ರಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕಾಗಬಹುದು.’
-ರಾಜೇಂದ್ರಸಿಂಗ್‌ ಬಾಬು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ.

ಪ್ರಶಸ್ತಿ ಪಡೆದ ಚಲನಚಿತ್ರಗಳು
ಮೊದಲ ಅತ್ಯುತ್ತಮ ಚಿತ್ರ- ರಿಸರ್ವೇಶನ್‌. ನಿರ್ದೇಶಕ-ನಿಖೀಲ್‌ ಮಂಜು
-ಎರಡನೇ ಅತ್ಯುತ್ತಮ ಚಿತ್ರ-ಮೂಡಲ ಸೀಮೆಯಲ್ಲಿ. ನಿರ್ದೇಶಕ-ಕೆ. ಶಿವರುದ್ರಯ್ಯ
-ಮೂರನೇ ಅತ್ಯುತ್ತಮ ಚಿತ್ರ-ಅಲ್ಲಮ. ನಿರ್ದೇಶಕ-ಟಿ.ಎಸ್‌. ನಾಗಾಭರಣ.

ಅತ್ಯುತ್ತಮ ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳು
-ಮೊದಲ ಅತ್ಯುತ್ತ ಚಿತ್ರ-ರಾಜಕುಮಾರ. ನಿರ್ದೇಶಕ-ಸಂತೋಷ ಆನಂದರಾಮ
-ಎರಡನೇ ಅತ್ಯುತ್ತಮ ಚಿತ್ರ-ಭರ್ಜರಿ. ನಿರ್ದೇಶಕ-ಚೇತನ್‌ಕುಮಾರ್‌
-ಮೂರನೇ ಅತ್ಯುತ್ತಮ ಚಿತ್ರ-ಒಂದು ಮೊಟ್ಟೆಯ ಕತೆ. ನಿರ್ದೇಶಕ-ರಾಜ್‌ ಬಿ. ಶೆಟ್ಟಿ.

ಇಂಟರ್‌ನ್ಯಾಷನಲ್‌ ಜ್ಯೂರಿ ಆವಾರ್ಡ್‌ ಪಡೆದ ಕನ್ನಡ ಚಿತ್ರ
-ಚಿತ್ರ-ಬೇಟಿ. ನಿರ್ದೇಶಕ-ಪಿ. ಶೇಷಾದ್ರಿ
-ಭಾರತೀಯ ಸ್ಪರ್ಧೆ- ಚಿತ್ರಭಾರತಿ ಅವಾರ್ಡ್‌

ಅತ್ಯುತ್ತಮ ಭಾರತೀಯ ಚಿತ್ರ-ಮಯೂರಾಕ್ಷಿ (ಬೆಂಗಾಲಿ)
ನಿರ್ದೇಶಕ ಅತನು ಘೋಷ್‌
ಸ್ಪೇಷಲ್‌ ಜ್ಯೂರಿ ಆವಾರ್ಡ್‌
-ಚಿತ್ರ-ಈಶು.
-ನಿರ್ದೇಶಕ- ಉತ್ಪಲ್‌ ಬೋರ್‌ಪೂಜಾರಿ

ಪಿ.ಕೆ. ನಾಯರ್‌ ಸ್ಮಾರಕ ಪ್ರಶಸ್ತಿ
ಚಿತ್ರ- ಟು ಲೆಟ್‌
ನಿರ್ದೇಶಕ-ಚೇಝಿಯಾನ್‌ ರಾ

ಬೆಸ್ಟ್‌ ಏಷಿಯನ್‌ ಆವಾರ್ಡ್‌
ಚಿತ್ರ-ಎಕ್ಸ್‌ಕ್ಯಾವೆಟರ್‌
ನಿರ್ದೇಶಕ-ಜು ಹ್ಯೂಂಗ್‌ ಲಿ

Advertisement

Udayavani is now on Telegram. Click here to join our channel and stay updated with the latest news.

Next