Advertisement

Chhattisgarh: ಬಹಿರಂಗ ಪ್ರಚಾರಕ್ಕೆ ತೆರೆ- ನಾಳೆ ಮೊದಲ ಹಂತದ ಮತದಾನ

01:04 AM Nov 06, 2023 | Team Udayavani |

ಹೊಸದಿಲ್ಲಿ: ಕೊನೇ ಕ್ಷಣದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಅಂಟಿಕೊಂಡ ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಕಳಂಕ, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ನಂಥ ಘಟಾನು ಘಟಿಗಳ ಪ್ರಚಾರ, ಹಲವು ಘೋಷಣೆಗಳುಳ್ಳ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆಯ ಮೂಲಕ ಛತ್ತೀಸ್‌ಗಢವು ಮೊದಲ ಹಂತದ ಮತದಾನಕ್ಕೆ ಮುಂದಡಿ ಯಿಟ್ಟಿದೆ. ಇದೇ ಮಂಗಳವಾರ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ರವಿವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.

Advertisement

ಮಹಾದೇವ್‌ ಆ್ಯಪ್‌, ಧಾರ್ಮಿಕ ಮತಾಂತರ, ಭ್ರಷ್ಟಾ ಚಾರ, ಕಾನೂನು-ಸುವ್ಯವಸ್ಥೆ ಸಮಸ್ಯೆಯನ್ನೇ ಮುಂದಿಟ್ಟು ಕೊಂಡು ಬಿಜೆಪಿ ಪ್ರಚಾರ ನಡೆಸಿದರೆ, ರೈತರು, ಮಹಿಳೆಯರು, ಬುಡಕಟ್ಟು ಜನರು, ದಲಿತ ರಿಗಾಗಿ ಬಘೇಲ್‌ ಸರಕಾರ ಕೈಗೊಂಡ ಕಲ್ಯಾಣ ಯೋಜನೆ ಗಳ ಹೆಸರಲ್ಲಿ ಕಾಂಗ್ರೆಸ್‌ ಪ್ರಚಾರ ನಡೆಸಿದೆ. ಮಂಗಳ ವಾರ ಮತದಾನ ನಡೆಯಲಿರುವ 20 ಸೀಟು ಗಳ ಪೈಕಿ ಬಹುತೇಕ ಕ್ಷೇತ್ರಗಳು ನಕ್ಸಲ್‌ ಪೀಡಿತ ಪ್ರದೇಶ ಗಳಲ್ಲೇ ಬರುತ್ತವೆ. ಹೀಗಾಗಿ ಎಲ್ಲೆಲ್ಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು, ಸಿಬಂದಿ ಯನ್ನು, ಇವಿಎಂಗಳನ್ನು ಹೆಲಿಕಾಪ್ಟರ್‌ ಮೂಲಕ ಆಯಾ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಗಿದೆ.

ದುಬಾೖಗೆ ಹೋಗುವಂತೆ ಬಘೇಲ್‌ ಸಲಹೆ: ಸಿಎಂ ಭೂಪೇಶ್‌ ಬಘೇಲ್‌ ಅವರೇ ನನ್ನನ್ನು ದುಬಾೖಗೆ ಹೋಗುವಂತೆ ಸಲಹೆ ನೀಡಿದ್ದರು ಎಂದು ಮಹದೇವ ಆ್ಯಪ್‌ ಪ್ರಕರಣದ ಆರೋಪಿ ಶುಭಮ್‌ ಸೋನಿ ಆರೋಪಿಸಿದ್ದಾನೆ. ರವಿವಾರ ದುಬಾೖಯಿಂದಲೇ ವೀಡಿಯೋ ಸಂದೇಶ ರವಾನಿಸಿರುವ ಆತ, ಬಘೇಲ್‌ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದ್ದಾನೆ.

5ನೇ ಪಟ್ಟಿ: ರಾಜಸ್ಥಾನ ಚುನಾವಣೆಗೆ 15 ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ರಾಹುಲ್‌ ವಿರುದ್ಧ ವಾಗ್ಧಾಳಿ: ಒಬಿಸಿ ನಾಯಕನನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇವೆ ಎಂಬ ಬಿಜೆಪಿ ಘೋಷಣೆ ಬಗ್ಗೆ ವ್ಯಂಗ್ಯವಾಡುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಹಿಂದುಳಿದ ಸಮುದಾಯಕ್ಕೆ ಅವ ಮಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ ಆರೋಪಿಸಿದ್ದಾರೆ. “ತೆಲಂಗಾಣದಲ್ಲಿ ಕನಿಷ್ಠ ಮತ ಪಡೆ ಯುವ ಬಿಜೆಪಿಗೆ ಇದು ಸಾಧ್ಯವೇ’ ಎಂದು ರಾಹುಲ್‌ ಪ್ರಶ್ನಿಸಿದ್ದರು. ಇದನ್ನು ಪ್ರಸ್ತಾವಿಸಿ ರಾಹುಲ್‌ ವಿರುದ್ಧ ಕಿಡಿಕಾರಿದ ರೆಡ್ಡಿ, “ರಾಜ್ಯದ ಜನಸಂಖ್ಯೆಯ ಶೇ.55ರಷ್ಟಿರುವ ಹಿಂದುಳಿದ ವರ್ಗಗಳು ಒಂದಾದರೆ ಯಾವುದೂ ಅಸಾಧ್ಯವಲ್ಲ’ ಎಂದಿದ್ದಾರೆ.

Advertisement

ಒಂದೇ ದಿನ 3 ರಾಜ್ಯಗಳಲ್ಲಿ ಮೋದಿ ಪ್ರಚಾರ
ಚುನಾವಣೆಯ ಹೊಸ್ತಿಲಲ್ಲಿರುವ ಛತ್ತೀಸ್‌ಗಢ ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಮಧ್ಯ ಪ್ರದೇಶದ ಸಿಯೋನಿ ಮತ್ತು ಖಾಂಡ್ವಾದಲ್ಲಿ ಸಾರ್ವಜನಿಕ ಸಭೆ ನಡೆಸಿ ಮಾತನಾಡುತ್ತಾ ಕರ್ನಾಟಕದ ಬಗ್ಗೆ ಪ್ರಸ್ತಾವಿಸಿದ ಅವರು, “ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅದಕ್ಕೆ ಜನರು ಅದನ್ನು ಮೂಲೆಗುಂಪು ಮಾಡಿದರು. ಹೀಗಾಗಿ ಈಗ ಆ ಪಕ್ಷವು ರಾಜ್ಯಗಳತ್ತ ಕಣ್ಣು ನೆಟ್ಟಿದೆ. ಅಕಸ್ಮಾತಾಗಿ ಯಾವುದಾದರೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಿದರೂ, ರಾಜ್ಯವನ್ನು ಲೂಟಿ ಮಾಡಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆಯೇ ಸ್ಪರ್ಧೆ ಏರ್ಪಡುತ್ತದೆ.

ಕರ್ನಾಟಕದಲ್ಲಿ ನೀವು ದಿನಾ ಇಂಥ ಸುದ್ದಿಗಳನ್ನು ಕೇಳಿರುತ್ತೀರಿ’ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಮುಂದಿನ ಲೋಕಸಭೆ ಚುನಾವಣೆಗೆ ಮಧ್ಯಪ್ರದೇಶವನ್ನು ದೇಣಿಗೆ ಉತ್ಪತ್ತಿ ಮಾಡುವ ಎಟಿಎಂನಂತೆ ಬಳಸಲು ಮುಂದಾಗಿದೆ ಎಂದೂ ಆರೋಪಿಸಿದ್ದಾರೆ. ಇದೇ ವೇಳೆ, ಛತ್ತೀಸ್‌ಗಢದಲ್ಲೂ ರ್ಯಾಲಿ ನಡೆಸಿದ ಮೋದಿ, ಅನಂತರ ಡೊಂಗಾರ್‌ಗಢ‌ಕ್ಕೆ ತೆರಳಿ ಜೈನ ಸಂತ ಆಚಾರ್ಯ ವಿದ್ಯಾಸಾಗರ್‌ ಮಹರಾಜ್‌ ಅವರನ್ನು ಭೇಟಿಯಾದರು. ಮಾ ಬಮಲೇಶ್ವರಿ ದೇಗುಲದಲ್ಲಿ ಪೂಜೆಯನ್ನೂ ಸಲ್ಲಿಸಿದರು. ಮಿಜೋರಾಂನ ಮತದಾರರಿಗೆ ವರ್ಚುವಲ್‌ ಸಂದೇಶವನ್ನೂ ಮೋದಿ ಕಳುಹಿಸಿದ್ದಾರೆ.

ದೇಶದಲ್ಲಿ ರಾಮರಾಜ್ಯಕ್ಕೆ ದಿನಗಣನೆ
ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣವು ದೇಶದಲ್ಲಿ ರಾಮರಾಜ್ಯಕ್ಕೆ ಮುನ್ನುಡಿ ಬರೆಯಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ ಹೇಳಿದ್ದಾರೆ. ಛತ್ತೀಸ್‌ಗಢದ ಕೊಂಟಾದಲ್ಲಿ ರವಿವಾರ ರ್ಯಾಲಿ ನಡೆಸಿ ಮಾತನಾಡುತ್ತಾ, ರಾಮರಾಜ್ಯದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ತಾರತಮ್ಯವಿರುವುದಿಲ್ಲ. ಪ್ರಧಾನಿ ಮೋದಿಯವರು ದೇಶದಲ್ಲಿ ರಾಮರಾಜ್ಯದ ಅಡಿಪಾಯ ಹಾಕಿದ್ದಾರೆ ಎಂದಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ ವಿರುದ್ಧ ವಾಕ್‌ಪ್ರಹಾರ ನಡೆಸಿದ ಯೋಗಿ, ಭೂಪೇಶ್‌ ಬಘೇಲ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಲವ್‌ ಜೆಹಾದ್‌ ಮತ್ತು ಧಾರ್ಮಿಕ ಮತಾಂತರಕ್ಕೆ ಉತ್ತೇಜನ ನೀಡುತ್ತಿದೆ ಎಂದೂ ಆರೋಪಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಲವ್‌ ಜೆಹಾದ್‌, ಗೋವು ಕಳ್ಳಸಾಗಣೆ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಕೈ ಪ್ರಣಾಳಿಕೆಯಲ್ಲಿ ಜಾತಿಗಣತಿ, ಸಾಲ ಮನ್ನಾ
ಛತ್ತೀಸ್‌ಗಢದಲ್ಲಿ ರವಿವಾರ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. “ಭರೋಸಾ ಕಾ ಘೋಷಣ ಪತ್ರ’ ಎಂಬ ಶೀರ್ಷಿಕೆಯ ಪ್ರಣಾಳಿಕೆಯಲ್ಲಿ, ಜಾತಿಗಣತಿ, ರೈತರ ಸಾಲ ಮನ್ನಾ, ಕ್ವಿಂಟಾಲ್‌ಗೆ 3,200 ರೂ.ಗಳಂತೆ ಭತ್ತ ಖರೀದಿ, ಎಕ್ರೆಗೆ 20 ಕ್ವಿಂಟಾಲ್‌ ಭತ್ತ ಖರೀದಿ, ಕೆಜಿಯಿಂದ ಪಿಜಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಕಡಿಮೆ ಬೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಮತ್ತಿತರ ಆಶ್ವಾಸನೆಗಳನ್ನು ನೀಡಲಾಗಿದೆ.

ಸಕ್ಕರೆ ಎಷ್ಟು ಹಾಕಲಿ?
ಛತ್ತೀಸ್‌ಗಢದ ಬಸ್ತಾರ್‌ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಕೇಂದ್ರ ಸಚಿವೆ ಸ್ಮತಿ ಇರಾನಿ ತಾವೇ ಸ್ವತಃ ಚಹಾ ತಯಾರಿಸಿ, ಪಕ್ಷದ ಕಾರ್ಯಕರ್ತರಿಗೆ ಹಂಚಿದ್ದಾರೆ. ಅಷ್ಟೊಂದು ಸದಸ್ಯರಿಗೆ ಚಹಾ ತಯಾರಿಸುವ ವೇಳೆ ಸ್ಮತಿ ಅವರು, “ಸಕ್ಕರೆ ಎಷ್ಟು ಹಾಕಲಿ’ ಎಂದು ಪಕ್ಕದಲ್ಲಿದ್ದವರಿಗೆ ಕೇಳುತ್ತಿರುವ ವೀಡಿಯೋ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next