Advertisement

ಪಂಚಾಯತ್‌ನಿಂದ ಅನಧಿಕೃತ ಅಂಗಡಿಗಳ ತೆರವು ಶುರು

04:56 PM Oct 29, 2017 | Team Udayavani |

ಉಪ್ಪಿನಂಗಡಿ: ಪಟ್ಟಣದ ರಸ್ತೆ ಬದಿಯಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು
ಗ್ರಾ.ಪಂ. ಶನಿವಾರ ಆರಂಭಿಸಿದೆ.

Advertisement

ಪಂಚಾಯತ್‌ನ ಹಲವು ಸಾಮಾನ್ಯ ಸಭೆಯಲ್ಲಿ ಅನಧಿಕೃತ ಅಂಗಡಿಗಳ ತೆರವಿಗೆ ನಿರ್ಣಯ ಕೈಗೊಳ್ಳಲಾಗಿತ್ತು.
ಅದರೂ ನಿರ್ಣಯದ ಅನುಷ್ಠಾನಕ್ಕೆ ಗ್ರಾ.ಪಂ. ಈವರೆಗೆ ಮುಂದಾಗಿರಲಿಲ್ಲ. ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಅವರ ನೇತೃತ್ವದಲ್ಲಿ ಪಂಚಾಯತ್‌ ಅಧಿಕಾರಿ, ಸಿಬಂದಿ ತಂಡ ಪೇಟೆಯಲ್ಲಿರುವ ಅಂಗಡಿಗಳ ಪರವಾನಿಗೆ ಪರಿಶೀಲಿಸಿದರು. ಈ ಸಂದರ್ಭ ಕೆಲವರು ಅಧಿಕೃತ ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದರೂ ಪರವಾನಿಗೆ ನವೀಕರಿಸದಿರುವುದು ಕಂಡು ಬಂತು. ಇವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿ, ಪರವಾನಿಗೆ ನವೀಕರಿಸಿ ಕೊಡಲಾಯಿತು.

ರಸ್ತೆ ಬದಿಯಲ್ಲಿ ತಲೆಯೆತ್ತಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಬೆಳಗ್ಗೆಯೇ ಸೂಚನೆ ನೀಡಲಾಗಿತ್ತು. ಕೆಲವರು ಸೂಚನೆ ಪಾಲಿಸಿ, ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದ್ದರು. ತೆರವಾಗದೇ ಇದ್ದ ಕೆಲವು ಅಂಗಡಿಗಳನ್ನು ಪಂಚಾಯತ್‌ ವತಿಯಿಂದಲೇ ತೆರವುಗೊಳಿಸಲಾಯಿತು. ಕೆಲವು ಅನಧಿಕೃತ ಅಂಗಡಿದಾರರಿಗೆ ಮಧ್ಯಾಹ್ನದ ಬಳಿಕ ಅಂಗಡಿ ತೆರವಿಗೆ ಪಂಚಾಯತ್‌ ಸೂಚಿಸಿದ್ದು, ಅವರಿಗೆ ಶನಿವಾರ ಸಂಜೆಯೊಳಗೆ ಸ್ವಯಂ ಆಗಿ ಅಂಗಡಿ ತೆರವುಗೊಳಿಸಲು ಪಂಚಾಯತ್‌ ಸೂಚಿಸಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಬ್ದುಲ್‌ ಅಸಾಫ್, ಪಂಚಾಯತ್‌ ಆಡಳಿತ ಕೈಗೊಂಡ ನಿರ್ಣಯದಂತೆ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ತೊಂದರೆಯಾಗುವ ಪೇಟೆಯೊಳಗಿನ ಎಲ್ಲ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಶನಿವಾರದಿಂದ ಪಂಚಾಯತ್‌ ಆರಂಭಿಸಿದೆ. ಸೋಮವಾರದಿಂದ ಉಪ್ಪಿನಂಗಡಿ ಪಟ್ಟಣವು ಅನಧಿಕೃತ ಅಂಗಡಿ ಮುಕ್ತ ಪಟ್ಟಣವಾಗಲಿದೆ ಎಂದರು.

ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಮಾತನಾಡಿ, ಪಂಚಾಯತ್‌ನ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇನ್ನು ಒಂದೆರಡು ತಿಂಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಕಟ್ಟಡ ಕೆಡಹುವ ಸಂದರ್ಭ ಅದರಲ್ಲಿ ಬಾಡಿಗೆಗಿದ್ದ ಕೆಲವರಿಗೆ ತಾತ್ಕಾಲಿಕವಾಗಿ ಅಂಗಡಿ ನಿರ್ಮಿಸಿಕೊಳ್ಳಲು ಪಂಚಾಯತ್‌ ಜಾಗ ತೋರಿಸಿದೆ. ಅವರಿಗೆ ಪಂಚಾಯತ್‌ನ  ಹೊಸ ಕಟ್ಟಡ ಆಗುವವರೆಗೆ ಮಾತ್ರ ಅಲ್ಲಿ ಅವಕಾಶ ನೀಡಲಾಗುತ್ತದೆ. ಮತ್ತೆ ಬೇಕಾದರೆ ಪಂಚಾಯತ್‌ನ ಏಲಂನಲ್ಲಿ ಭಾಗವಹಿಸಿ ಅಂಗಡಿ ತೆಗೆದುಕೊಳ್ಳಬಹುದು. ಆದರೆ ಕೆಲವರು ಮಾತ್ರ ಅಲ್ಲಿ ಹೋಗದೇ ಅವರಿಗೆ ಇಷ್ಟ ಬಂದ ಜಾಗದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದರು. ಅಂತಹ ಅಂಗಡಿಗಳನ್ನೂ ಇಂದು ತೆರವುಗೊಳಿಸಲಾಗಿದೆ ಎಂದರು.

Advertisement

ಕಾರ್ಯಾಚರಣೆಯುದ್ದಕ್ಕೂ ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ., ಪಿಡಿಒ ಅಬ್ದುಲ್‌ ಅಸಾಫ್, ಕಾರ್ಯದರ್ಶಿ ಶಾರದಾ, ಸಿಬಂದಿ ಹಾಜರಿದ್ದರು. ಉಪ್ಪಿನಂಗಡಿ ಪೊಲೀಸ್‌ ಠಾಣಾ ಸಿಬಂದಿ ಬೆಳಗ್ಗಿನ ಹೊತ್ತು ಹಾಜರಿದ್ದು, ಬಂದೋಬಸ್ತ್ ಕೈಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next