Advertisement

ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ತೆರೆ

10:46 PM Oct 10, 2019 | Team Udayavani |

ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಬನ್ನಿ ಕಡಿಯುವ ಮೂಲಕ ಬುಧವಾರ ಮುಂಜಾನೆ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ತೆರೆ ಎಳೆಯಲಾಯಿತು.

Advertisement

ಮಂಗಳವಾರ ರಾತ್ರಿ ದಟ್ಟ ಮಂಜು ಕವಿದ ವಾತಾವರಣದ ನಡುವೆಯೇ ಹತ್ತು ದೇಗುಲಗಳಿಂದ ಹೊರಟ ಚಲನವಲನಗಳ ನ್ನೊಳಗೊಂಡ ಮಂಟಪಗಳು ಮಡಿಕೇರಿಯ ರಾಜಬೀದಿಯಲ್ಲಿ ಸಾಗಿ ಬರುವ ಮೂಲಕ ದಸರಾ ಜನೋತ್ಸವದ ಅಂತಿಮ ದಿನಕ್ಕೆ ಮೆರಗನ್ನು ನೀಡಿದವು. ಚುಮುಚುಮು ಚಳಿಯ ನಡುವೆಯೇ ಸಾವಿರಾರು ಮಂದಿ ಕಣ್ತುಂಬಿಕೊಂಡರು. ಡಿಜೆ, ಬ್ಯಾಂಡ್‌, ವಾಲಗದ ನಾದಕ್ಕೆ ಕುಣಿದು ಕುಪ್ಪಳಿಸುವುದರೊಂದಿಗೆ ಮಡಿಕೇರಿ ದಸರಾದ ಸವಿಯನ್ನು ಅನುಭವಿಸಿತು.

ಶೋಭಾಯಾತ್ರೆಯಲ್ಲಿ ದಂಡಿನ ಮಾರಿಯಮ್ಮ ದೇವಾಲಯದ ಮಂಟಪ ಪ್ರಥಮ ಸ್ಥಾನ ಪಡೆದರೆ, ಕುಂದುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪ ದ್ವಿತೀಯ ಹಾಗೂ ಕೋಟೆ ಮಹಾಗಣಪತಿ ದಸರಾ ಸಮಿತಿಯ ಮಂಟಪ ತೃತೀಯ ಬಹುಮಾನ ಪಡೆಯಿತು. ದಂಡಿನ ಮಾರಿಯಮ್ಮ ದೇವಾಲಯ: ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಹಾಗೂ ಈ ಬಾರಿ ದಶಮಂಟಪ ಸಮಿತಿಯ ಜವಾಬ್ದಾರಿ ಹೊತ್ತಿದ್ದ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ನರಸಿಂಹನಿಂದ ಹಿರಣ್ಯ ಕಶಿಪುವಿನ ವಧೆ ಕಥಾ ಸಾರಾಂಶವನ್ನು ಹೊಂದಿರುವ ಎಂಟು ಚಲನಶೀಲ ಕಲಾಕೃತಿಗಳನ್ನು ಮಂಟಪದಲ್ಲಿ ಅಳವಡಿಸಿತ್ತು. ಎರಡು ಟ್ರ್ಯಾಕ್ಟರ್‌ಗಳಲ್ಲಿ ಅಳವಡಿಸಲಾಗಿದ್ದ ಕಲಾಕೃತಿಗಳಿಗೆ ದಿಂಡಿಗಲ್‌ನ ಎಂ.ಪಿ. ಲೈಟಿಂಗ್ಸ್‌ನವರು ದೀಪಾಲಂಕಾರ ಮಾಡಿದ್ದರು. ಹುದಬೂರಿನ ಕಲಾವಿದ ಮಹದೇವಪ್ಪ ಆ್ಯಂಡ್‌ ಸನ್ಸ್‌ ಅವರ ಕೈಚಳಕದಿಂದ ತಯಾರಾದ ಕಲಾಕೃತಿಗಳಿಗೆ ಮಡಿಕೇರಿಯ ಸುಬ್ರಮಣಿ ಮತ್ತು ತಂಡ ಪ್ಲಾಟ್‌ಫಾರಂ ಒದಗಿಸಿದರೆ, ಟ್ರ್ಯಾಕ್ಟರ್‌ ಸೆಟ್ಟಿಂಗ್ಸ್‌ನ್ನು ಮಡಿಕೇರಿ ಆರಾಧನ ಆರ್ಟ್ಸ್ನ ಆನಂದ್‌ ತಂಡ ಮತ್ತು ಕಲಾಕೃತಿಗಳ ಚಲನವಲವನ್ನು ದಿನೇಶ್‌ ನಾಯರ್‌ ಮತ್ತು ತಂಡ ನಿರ್ವಹಿಸಿತು. ಪೂಕೋಡ್‌ನ‌ ಜಾಲಿ ತಂಡದ ವಾದ್ಯಗೋಷ್ಠಿ, ಮಡಿಕೇರಿಯ ಸ್ಕಂದ ಡೆಕೋರೇಟರ್ನ ಅನಿಲ್‌ ಮತ್ತು ತಂಡದವರು ಧ್ವನಿವರ್ಧಕ ಫೈರ್‌ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್‌ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ನಿರ್ಮಿಸಲಾಗಿತ್ತು.

ಕೋಟೆ ಮಹಾ ಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರನಾದ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಿತ್ತು. ಮಡಿಕೇರಿಯ ನಜೀರ್‌ ಪೂಜಾ ಪೈಟಿಂಗ್ಸ್‌ ಬೋರ್ಡ್‌ ಅಳವಡಿಸಿದ್ದು, ಕಥಾ ನಿರ್ವಹಣೆಯನ್ನು ಆರ್‌.ಬಿ. ರವಿ ನಿರ್ವಹಿಸಿದರು. ಲೋಕೇಶ್‌ ಫ್ಯೂಚರ್‌ ಈವೆಂಟ್ಸ್‌ ಸ್ಟುಡಿಯೋ ಸೆಟ್ಟಿಂಗ್ಸ್‌ ಮತ್ತು ಸೌಂಡ್ಸ್‌ ಒದಗಿಸಿತ್ತು. 23 ಕಲಾಕೃತಿಗಳ ಚಲನ-ವಲನ ವ್ಯವಸ್ಥೆಯನ್ನು ಮಡಿಕೇರಿಯ ಹೊನ್ನಪ್ಪ ಮತ್ತು ಸುರೇಶ್‌, ಸಿದ್ದಪ್ಪಾಜಿ ಕ್ರಿಯೇಷನ್ಸ್‌ ನಿರ್ವಹಿಸಿತು. ಪ್ರಥಮ ಸ್ಥಾನ ಪಡೆದ ಮಂಟಪಕ್ಕೆ 20 ಗ್ರಾಂ ಚಿನ್ನ, ದ್ವಿತೀಯ ಸ್ಥಾನ ಪಡೆಯುವ ಮಂಟಪಕ್ಕೆ 14 ಗ್ರಾಂ ಚಿನ್ನ, ತೃತೀಯ ಸ್ಥಾನ ಪಡೆಯುವ ಮಂಟಪಕ್ಕೆ 10ಗ್ರಾಂ ಚಿನ್ನ ಹಾಗೂ ಉಳಿದ ಮಂಟಪಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next