ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕಾದರೆ ಏನು ಮಾಡಬೇಕು ಎಂಬುದರ ಬಗ್ಗೆ ರಾಜ್ಯ ಕಾರ್ಯಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಬಸವರಾಜ ಹೊರಟ್ಟಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಉತ್ತರಪ್ರದೇಶ ಚುನಾವಣೆ ಫಲಿತಾಂಶ ನಂತರ ಕರ್ನಾಟಕ ವಿವಿ ರಾಜ್ಯಶಾಸ್ತ್ರ ವಿಭಾಗದ ಕೆಲ ಸ್ನೇಹಿತರು, ಶಿಕ್ಷಕ ಸಮುದಾಯ ನನ್ನೊಂದಿಗೆ ಸಮಾಲೋಚನೆ ನಡೆಸಿ ಜೆಡಿಎಸ್ ಪಕ್ಷದ ನಿಲುವು ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಉತ್ತರಿಸಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೇವಲ ರೋಡ್ ಶೋ ಮಾಡಿದರೆ ಸಾಲದು ಅದರಿಂದ ಪಕ್ಷಕ್ಕೆ ಲಾಭ ದೊರೆಯುವುದಿಲ್ಲ. ಹೀಗಾಗಿ, ಚುನಾವಣೆ ಯಾವ ಟಾರ್ಗೆಟ್ ಮೇಲೆ ಎದುರಿಸುತ್ತೀರಿ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.
18 ವರ್ಷದಿಂದ 30 ವರ್ಷದ ಯುವಕರಿಗೆ ಪಕ್ಷದಿಂದ ಯಾವ ಯೋಜನೆ ಸಿದ್ಧಗೊಳಿಸುತ್ತೀರಿ? ನಿರುದ್ಯೋಗ ನಿವಾರಣೆ ಮಾಡಲು ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳುತ್ತೀರಿ? ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಯಾವ ಯೋಜನೆ ರೂಪಿಸುತ್ತೀರಿ? ವಿದ್ಯಾರ್ಥಿ ಸಮುದಾಯ ಹಾಗೂ ಮಹಿಳಾ ಸಮುದಾಯಕ್ಕೆ ಪಕ್ಷದ ಸಂದೇಶವೇನು?ಎಂಬ ಪ್ರಶ್ನೆಗಳನ್ನು ಪಕ್ಷದ ನಾಯಕರ ಮುಂದಿಟ್ಟಿದ್ದಾರೆ.
ಪ್ರಜ್ಞಾವಂತರ ಜತೆ ಸಂವಾದ ನಡೆಸಿದಾಗ ಜೆಡಿಎಸ್‌ಗೆ ಮತ ಹಾಕುವವರು ಇದ್ದಾರೆ, ಆದರೆ, ಮತ ಹಾಕಿಸಿಕೊಳ್ಳುವವರು ಆ ನಿಟ್ಟಿನಲ್ಲಿ ಸರಿಯಾದ ರಣತಂತ್ರ ರೂಪಿಸುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಪಕ್ಷ ಇನ್ನು ಸದೃಢವಾಗಿಲ್ಲ. ಜನತಾಪರಿವಾರದಲ್ಲಿದ್ದರು ಕಾಂಗ್ರೆಸ್, ಬಿಜೆಪಿಗೆ ಹೋಗಿದ್ದು ಮತ್ತೆ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ.
ಆವರನ್ನು ಸಂಪರ್ಕಿಸುವ ಕೆಲಸ ಆಗಬೇಕಿದೆ. ಅದೇ ರೀತಿ ಹೈದರಾಬಾದ್ ಕರ್ನಾಟಕ ಭಾಗದಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈಗಿನಿಂದಲೇ ಮುಂದಿನ ಚುನಾವಣಗೆ ಸಿದ್ಧತೆ ಕೈಗೊಳ್ಳಿ. ರಾಜ್ಯದ ಪ್ರತಿ ತಾಲೂಕು ಮತ್ತು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂಬುದನ್ನೂ ಚರ್ಚೆ ಸಂದರ್ಭದಲ್ಲಿ ಹೇಳಲಾಯಿತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.