Advertisement

ಕೇಂದ್ರೀಯ ವಿದ್ಯಾಲಯದಲ್ಲಿ ಓಪನ್‌ ಜಿಮ್‌! ದೇಶಾದ್ಯಂತ 310 ವಿದ್ಯಾಕೇಂದ್ರಗಳಲ್ಲಿ ಸೌಲಭ್ಯ

01:28 PM Nov 16, 2020 | sudhir |

ಹುಬ್ಬಳ್ಳಿ: ಕೇಂದ್ರೀಯ ವಿದ್ಯಾಲಯ ಸಂಘಟನೆಯ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ಆರೋಗ್ಯ ವೃದ್ಧಿಗೂ ಒತ್ತು ನೀಡಲಾಗುತ್ತಿದ್ದು, ಆ ನಿಟ್ಟಿನಲ್ಲಿ ಶಾಲೆಗಳ ಆವರಣದಲ್ಲಿ ಓಪನ್‌ ಜಿಮ್‌ ಉಪಕರಣಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಇಲ್ಲಿನ ರಾಜನಗರದ ಕೇಂದ್ರೀಯ ವಿದ್ಯಾಲಯ ನಂ.1 ಸೇರಿದಂತೆ ರಾಜ್ಯದ ಬೆಂಗಳೂರು ಪ್ರಾದೇಶಿಕ ವಿಭಾಗದ 15 ಶಾಲೆಗಳಲ್ಲಿ ಓಪನ್‌ ಜಿಮ್‌ ಉಪಕರಣಗಳನ್ನು ಅಳವಡಿಸಲಾಗಿದೆ.

Advertisement

ಜಿಮ್‌ ಉಪಕರಣಗಳನ್ನು ಪೂರೈಸಲು ಮತ್ತು ಅಳವಡಿಸಲು ಮಹಾರಾಷ್ಟ್ರದ ನಾಶಿಕ್‌ನ ಮೇ| ಸ್ಯಾನ್‌ಸನ್‌ ಇಂಡಸ್ಟ್ರೀಸ್‌ ಪ್ರೈವೇಟ್‌ ಕಂಪನಿಗೆ ಗುತ್ತಿಗೆ ನೀಡಿದ್ದು, ಕಂಪನಿ ಅಂದಾಜು 18.87 ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಒಟ್ಟು 310 ಕೇಂದ್ರೀಯ ವಿದ್ಯಾಲಯಗಳಲ್ಲಿ ಓಪನ್‌ ಜಿಮ್‌ ಅಳವಡಿಸಲಾಗುತ್ತಿದೆ. ಗುತ್ತಿಗೆ ಪಡೆದ ಒಂದು ವರ್ಷದೊಳಗೆ ಇವುಗಳನ್ನು ಅಳವಡಿಸಬೇಕೆಂಬ ಷರತ್ತು ವಿಧಿಸಲಾಗಿದೆ.

ಕೇಂದ್ರೀಯ ವಿದ್ಯಾಲಯಗಳ ಆವರಣದ ಗಾರ್ಡನ್‌ಗೆ ಮೀಸಲಿಟ್ಟ ಜಾಗದಲ್ಲಿ ಟ್ರಿಸಿಪ್ಸ್‌ ಪುಲ್ಲರ್‌, ಕ್ರಾಸ್‌ ಟ್ರೇನರ್‌/ಎಲ್ಲಿಪ್ಟಿಕಲ್‌ ಎಕ್ಸಸೈಜರ್‌, ಬ್ಯಾಕ್‌ ಎಕ್ಸ್‌ಟೆನ್ಶನ್‌, ಸಿಟ್‌ ಅಪ್‌ ಬೋರ್ಡ್‌ ಡಬಲ್‌, ಡಬಲ್‌ ಟ್ರಿಸ್ಟರ್‌, ಚೆಸ್ಟ್‌ ಪ್ರಸ್‌ ಕಮ್‌ ಸೀಟೆಡ್‌ ಪುಲ್ಲರ್‌, ರೋವರ್‌, ಲೆಗ್‌ ಪ್ರಸ್‌ನ ಗುಣಮಟ್ಟದ ಓಪನ್‌ ಜಿಮ್‌ ಉಪಕರಣಗಳನ್ನು ಅಳವಡಿಸಲಾಗಿದೆ. ಕೋವಿಡ್‌-19ರ ಸಂದರ್ಭದಲ್ಲೂ ಕಂಪನಿ ಬಹುತೇಕ ಶಾಲೆಗಳಲ್ಲಿ ಓಪನ್‌ ಜಿಮ್‌ ಉಪಕರಣಗಳನ್ನು ಅಳವಡಿಸಿದ್ದು, ಕೆಲ ಶಾಲೆಗಳಲ್ಲಿ ಅಳವಡಿಕೆ ಕಾರ್ಯ ನಡೆದಿದೆ.

ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಒಟ್ಟು ಮೂರು ಕೇಂದ್ರೀಯ ವಿದ್ಯಾಲಯಗಳಿದ್ದು, ಹುಬ್ಬಳ್ಳಿಯ ರಾಜನಗರದಲ್ಲಿ ಕೆವಿ ನಂ.1 ಮತ್ತು ಗದಗ ರಸ್ತೆಯಲ್ಲಿ ಕೆವಿ ನಂ.2 ಹಾಗೂ ಧಾರವಾಡದ ರಾಜೀವಗಾಂಧಿ ನಗರದಲ್ಲಿ ಇದೆ. ಹುಬ್ಬಳ್ಳಿ ರಾಜನಗರದ ಕೆವಿ ನಂ.1ವಿದ್ಯಾಲಯ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌ (ಕೆಎಸ್‌ಸಿಎ) ಮೈದಾನ ಬಳಿಯೇ ಇದ್ದು, ಈ ಶಾಲೆ 1965ರಲ್ಲಿಯೇ ಆರಂಭವಾಗಿದೆ. ಆಧುನಿಕ ಸೌಲಭ್ಯಗಳೊಂದಿಗೆ ವಿಶಾಲವಾದ ಕಟ್ಟಡ ಮತ್ತು ಆಟದ ಮೈದಾನ, ಗಾರ್ಡನ್‌ ಹೊಂದಿದೆ. ಇಲ್ಲಿ 1ರಿಂದ 10+2 ತರಗತಿವರೆಗೆ 1400ಕ್ಕೂ ಅಧಿಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ರಾಜ್ಯದ ಎಲ್ಲೆಲ್ಲಿ ಅಳವಡಿಕೆ?
ಕೇಂದ್ರೀಯ ವಿದ್ಯಾಲಯ ಸಂಘಟನೆಯ ಪ್ರಾದೇಶಿಕ ಕಚೇರಿ ಬೆಂಗಳೂರು ವ್ಯಾಪ್ತಿಯ ಬೆಂಗಳೂರಿನ ಎಎಸ್‌ಸಿ ಸೆಂಟರ್‌
(ದಕ್ಷಿಣ), ಜಾಲಹಳ್ಳಿ ನಂ. 2 (ಎಎಫ್‌ ಎಸ್‌), ಜಾಲಹಳ್ಳಿ (ಪೂರ್ವ), ಯಲಹಂಕ- ಸಿಆರ್‌ಪಿಎಫ್‌, ಹೆಬ್ಟಾಳ, ಎಂಇಜಿ ಮತ್ತು
ಸೆಂಟರ್‌, ಮೈಸೂರು (ಸಿದ್ಧಾರ್ಥನಗರ), ಬೆಳಗಾವಿ ನಂ. 2 (ಕ್ಯಾಂಟೀನ್‌), ಹಾಸನ (ಬಿ. ಕಾಟೇಹಳ್ಳಿ), ಹುಬ್ಬಳ್ಳಿ ನಂ.1 (ರಾಜನಗರ), ಕಾರವಾರ (ಅರ್ಗಾ), ಮಂಗಳೂರು ನಂ. 1 (ಪಣಂಬೂರ), ಶಿವಮೊಗ್ಗ (ಸಂತೇಕಡೂರ), ರಾಯಚೂರು (ಆಶಾಪುರ ರಸ್ತೆ), ಬಾಗಲಕೋಟೆ (ನವನಗರ) ಸೇರಿ ಒಟ್ಟು 15 ಶಾಲೆಗಳಲ್ಲಿ ಓಪನ್‌ ಜಿಮ್‌ ಉಪಕರಣಗಳನ್ನು ಅಳವಡಿಸಲಾಗಿದೆ.

Advertisement

– ಶಿವ ಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next