ಕಲಬುರಗಿ: ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರು ಊಟ, ವಸತಿ ಇಲ್ಲದೇ ಬಳಲುವುದನ್ನು ತಪ್ಪಿಸಲು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ತೆರೆಯಬೇಕೆಂದು ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್-19 ಸೋಂಕು ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಯಾರೂ ಊಟ ಇಲ್ಲದೇ ಹಸಿವಿನಿಂದ ಬಳಲಬಾರದು. ಯಾರೇ ಬಂದರೂ ಇಂದಿನಿಂದಲೇ ವಸತಿ ನಿಲಯಗಳಲ್ಲಿ ಊಟದ ವ್ಯವಸ್ಥೆ ಮಾಡಿ ಎಂದು ನಿರ್ದೇಶಕ ನೀಡಿದರು.
ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ 14,800 ಕ್ವಿಂಟಾಲ್ ಅಕ್ಕಿ, ಉಪ್ಪಿಟ್ಟು ರವೆ, ಇಡ್ಲಿ ರವೆ, ಎಣ್ಣೆ ಅಗತ್ಯ ದಿನಸಿ ಇದೆ. ತರಕಾರಿ ಮಾತ್ರ ಖರೀದಿಸಬೇಕಾಗುತ್ತದೆ. ತಕ್ಷಣವೇ ತರಕಾರಿ ಖರೀದಿಸಿ ಎಲ್ಲಿ ಅವಶ್ಯ ಇದೆಯೋ ಅಲ್ಲಿ ವಸತಿ ನಿಲಯಗಳನ್ನು ಆರಂಭಿಸಿ ಅವಶ್ಯಕತೆ ಇರುವವರಿಗೆ ವ್ಯವಸ್ಥೆ ಕಲ್ಪಿಸಬೇಕೆಂದರು.
ಅಲ್ಲದೇ, ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವವರಿಗೆ ಬೆಡ್ ಶೀಟ್, ಟವೆಲ್, ಸಾಬೂನು ಖರೀದಿಸಿ ಕೊಡಿ. ಅವರು ಊಟ ಮಾಡಿ ಮತ್ತೆ ಹೊರಗಡೆ ಓಡಾಡುವಂತಿಲ್ಲ. ವಸತಿ ನಿಲಯದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಅವರಿಗೆ ನೀಡಲಾದ ಬೆಡ್ ಶೀಟ್, ಟವೆಲ್ ವಾಪಸ್ ಪಡೆಯಬೇಡಿ ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
1,200 ರೂ. ಕಿಟ್: ಲಾಕ್ ಡೌನ್ ನಿಂದ ಹಡಪದ ಸಮಾಜದವರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಕ್ಷೌರಿಕ ಅಂಗಡಿಗಳು ಬಂದ್ ಆಗಿರುವುದರಿಂದ ಅವರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಅಡುಗೆ ದಿನಸಿಯ 1,200 ರೂ. ಮೊತ್ತದ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗೆ ಡಿಸಿಂ ಕಾರಜೋಳ ಸೂಚಿಸಿದರು.