Advertisement

5 ವರ್ಷದಲ್ಲಿ ಕರ್ನಾಟಕ ಬಾಲ್ಯವಿವಾಹ ಮುಕ್ತ

03:45 AM Jan 22, 2017 | Harsha Rao |

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕವನ್ನು ಬಾಲ್ಯವಿವಾಹ ಮುಕ್ತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Advertisement

ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ಬಾಲ್ಯ ವಿವಾಹ ತಡೆಗಟ್ಟಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದೇಶದಲ್ಲೇ  ಮೊದಲ ಬಾರಿಗೆ ಹಾಗೂ ವಿನೂತನವಾಗಿ ವಿನ್ಯಾಸಗೊಳಿಸಿರುವ “ಕರೆ’ ವೆಬ್ಸೈಟ್ಗೆ ಚಾಲನೆ ನೀಡಿ ಮತ್ತು ಬಾಲ್ಯ ವಿವಾಹ ತಡೆ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಜನರಲ್ಲಿ ಜಾಗೃತಿಯಿಲ್ಲದ ಕಾರಣ ಮತ್ತು ಆರ್ಥಿಕ, ಸಾಮಾಜಿಕ ಕಾರಣಗಳಿಂದಾಗಿ ಇನ್ನೂ ಅದು ನಡೆಯುತ್ತಿದೆ. ಎಷ್ಟೇ ಕಾನೂನು ತಂದರೂ ಜಾಗೃತಿ ಮೂಡುವವರೆಗೆ ಅದನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಿಲ್ಲ. ಹೀಗಾಗಿ, ನಿರಂತರ ಜಾಗೃತಿ ಆಂದೋಲನ ಕೈಗೊಳ್ಳುವ ಮೂಲಕ ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯವಾಗಿ ಮಾಡಬೇಕು ಎಂದರು.

ಸಮಾಜದ ಆಸ್ತಿಯಾಗಿರುವ ಮಕ್ಕಳು ದೇಶದ ಮುಂದಿನ ಪ್ರಜೆಗಳು. ಅವರ ಹಕ್ಕುಗಳ ರಕ್ಷಣೆ ಸರ್ಕಾರದ ಜವಾಬ್ದಾರಿ.
ಮೊದಲಿನಿಂದಲೂ ನಡೆಯುತ್ತಿರುವ ಬಾಲ್ಯವಿವಾಹವನ್ನು ತಡೆಗಟ್ಟಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದು,
ಇದರ ಪರಿಣಾಮ 2005ರ ವೇಳೆಗೆ ಶೇ. 41.2ರಷ್ಟಿದ್ದ ಬಾಲ್ಯ ವಿವಾಹ ಪ್ರಮಾಣ ಈಗ ಶೇ.23.2ಕ್ಕೆ ಇಳಿದಿದೆ ಎಂದು
ಹೇಳಿದರು.

ಬಾಲ್ಯ ವಿವಾಹ ತಡೆಗಟ್ಟುವ ಕುರಿತಂತೆ ನ್ಯಾ.ಶಿವರಾಜ ಪಾಟೀಲ್  ಅವರು ನೀಡಿರುವ ವರದಿಯನ್ನು ಸರ್ಕಾರ ಬಹುತೇಕ ಜಾರಿಗೆ ತಂದಿದೆ. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸುವವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವುದು ಸೇರಿ ಬಾಲ್ಯ ವಿವಾಹ ಕಾಯ್ದೆಯನ್ನು ನಿಷೇಧಿಸುವ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಕೇಂದ್ರ ಒಪ್ಪಿಗೆ ನೀಡಿದ ಕೂಡಲೇ ಕಾಯ್ದೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

Advertisement

ಉಮಾಶ್ರೀ ಅವರದ್ದೂ ಬಾಲ್ಯ ವಿವಾಹ!
ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರತ್ತ ನೋಡಿ ನಿಮ್ಮದೂ ಬಾಲ್ಯವಿವಾಹವಲ್ಲ.ತಪ್ಪು ನಿಮ್ಮದಲ್ಲ ನಿಮ್ಮ ತಂದೆ ತಾಯಿಯದ್ದು ಎಂದರು. ಈದಕ್ಕೆ ಉಮಾಶ್ರೀ ಅವರು ತಲೆಯಲ್ಲಾಡಿಸಿದರು. 

ಮೂಲಸೌಕರ್ಯ ಖಾತೆ ಸಚಿವ ರೋಷನ್‌ ಬೇಗ್‌, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ, ಶಾಸಕ ಎನ್‌.ಎ.ಹ್ಯಾರಿಸ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next