Advertisement

ತೈಲ ಪೂರೈಕೆ ಹೆಚ್ಚಿಸುವಲ್ಲಿ ಒಮ್ಮತಕ್ಕೆ ಬರದ ಒಪೆಕ್‌ ದೇಶಗಳು: ಮತ್ತಷ್ಟು ತುಟ್ಟಿ ಸಾಧ್ಯತೆ

06:35 PM Jul 06, 2021 | Team Udayavani |

ನವ ದೆಹಲಿ: ತೈಲ ಪೂರೈಕೆಯನ್ನು ಹೆಚ್ಚಿಸುವ ಸಂಬಂಧ ಸೋಮವಾರ ನಡೆದ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳು (ಒಪೆಕ್‌) ಮತ್ತು ಮಿತ್ರರಾಷ್ಟ್ರಗಳ ಒಕ್ಕೂಟದ ಸಭೆಯು ವಿಫ‌ಲವಾಗಿದ್ದು, ಇಡೀ ತೈಲ ಮಾರುಕಟ್ಟೆಯನ್ನೇ ಅನಿಶ್ಚಿತತೆಗೆ ದೂಡಿದೆ. ಆಗಸ್ಟ್‌ ವೇಳೆಗೆ ತೈಲ ಉತ್ಪಾದನೆ ಹೆಚ್ಚಿ ಸರಬರಾಜು ಕೂಡ ಹೆಚ್ಚಾಗುತ್ತದೆ ಎಂಬ ಭಾರತ ಸೇರಿದಂತೆ ಬಹುತೇಕ ದೇಶಗಳ ನಿರೀಕ್ಷೆಯು ಸುಳ್ಳಾಗಿದೆ. ಈ ಬೆಳವಣಿಗೆಯು ತೈಲ ದರವನ್ನು ಇನ್ನಷ್ಟು ಹೆಚ್ಚಳವಾಗುವಂತೆ ಮಾಡಲಿದ್ದು, ಗ್ರಾಹಕರ ಜೇಬು ಸುಡುವುದು ಖಚಿತವಾಗಿದೆ.

Advertisement

ಬಹುತೇಕ ರಾಷ್ಟ್ರಗಳಲ್ಲಿ ಕೊರೊನಾ ಲಾಕ್‌ಡೌನ್‌ ತೆರವಾದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ತೈಲದ ಬೇಡಿಕೆ ಹೆಚ್ಚಾಗುತ್ತಿದೆ. ಎಲ್ಲ ದೇಶಗಳಿಗೂ ಹೆಚ್ಚಿನ ತೈಲದ ಅಗತ್ಯವಿರುವ ಕಾರಣ, ಒಪೆಕ್‌+ ರಾಷ್ಟ್ರಗಳು ತೈಲದ ಸರಬರಾಜು ಹೆಚ್ಚಿಸಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ. ಕಳೆದ ವರ್ಷದ ಲಾಕ್‌ಡೌನ್‌ ವೇಳೆ ತೈಲದ ಬೇಡಿಕೆ ಗಣನೀಯವಾಗಿ ಕುಸಿದ ಕಾರಣ ಒಪೆಕ್‌ ರಾಷ್ಟ್ರಗಳು ಉತ್ಪಾದನೆಯನ್ನೂ ತಗ್ಗಿಸಿದ್ದವು. ಈಗ ಉತ್ಪಾದನೆ, ಮಾರಾಟ ಹೆಚ್ಚಳಕ್ಕೆ ಆಗ್ರಹ ಕೇಳಿಬಂದರೂ ಒಪೆಕ್‌ನ ಮಿತ್ರರಾಷ್ಟ್ರಗಳ ನಡುವಿನ ಒಗ್ಗಟ್ಟಿನ ಕೊರತೆಯು ಎಲ್ಲವನ್ನೂ ತಲೆಕೆಳಗಾಗಿಸಿದೆ.

ಇದನ್ನೂ ಓದಿ :ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್..!

ದರ ಹೆಚ್ಚಳ ಭೀತಿ:
ಒಪೆಕ್‌ ಸಭೆ ವಿಫ‌ಲವಾದ ಬೆನ್ನಲ್ಲೇ ತೈಲ ಬೆಲೆ ಗಗನಕ್ಕೇರುವುದು ಖಚಿತವಾಗಿದೆ. ಸೆಪ್ಟೆಂಬರ್‌ ವೇಳೆಗೆ ಬ್ರೆಂಟ್‌ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ತಲುಪುವ ಭೀತಿಯಿದೆ. ಪ್ರಸ್ತುತ ಬ್ರೆಂಟ್‌ ಕಚ್ಚಾ ತೈಲದರ ಬ್ಯಾರೆಲ್‌ಗೆ 76.5 ಡಾಲರ್‌ ನಷ್ಟಿದೆ. ಒಪೆಕ್‌ನಲ್ಲಿ ಒಟ್ಟು 14 ಸದಸ್ಯ ರಾಷ್ಟ್ರಗಳಿದ್ದು, ಜಗತ್ತಿನ ಒಟ್ಟಾರೆ ತೈಲ ನಿಕ್ಷೇಪಗಳ ಪೈಕಿ ಶೇ.80ರಷ್ಟು ಇಲ್ಲಿವೆ.

ಭಾರತದ ಮೇಲೇನು ಪರಿಣಾಮ?
ಆಗಸ್ಟ್‌ನಲ್ಲಿ ತೈಲ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಯುಎಇ ಮತ್ತು ಒಪೆಕ್‌+ ದೇಶಗಳು ಒಪ್ಪಂದಕ್ಕೆ ಬಂದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಇಲ್ಲದಿದ್ದರೆ, ಭಾರತದಲ್ಲಿ ಸದ್ಯಕ್ಕಂತೂ ತೈಲದರ ಇಳಿಕೆಯಾಗುವ ಸಾಧ್ಯತೆ ಕ್ಷೀಣಿಸುತ್ತದೆ. ಈಗಾಗಲೇ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 100 ರೂ. ದಾಟಿ ಸಾರ್ವಕಾಲಿಕ ದಾಖಲೆ ಬರೆದಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ತೈಲ ದರ ಇನ್ನಷ್ಟು ಹೆಚ್ಚಳವಾಗಲಿದೆ. ಪರಿಣಾಮ ಇತರೆ ವಸ್ತುಗಳ ದರವೂ ಹೆಚ್ಚಳವಾಗಿ ಜನರಿಗೆ ಮತ್ತಷ್ಟು ಹೊರೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next