ತುಮಕೂರು: ಅಧಿಕಾರ ದುರುಪಯೋಗ,ಆಪರೇಷನ್ ಕಮಲದಿಂದ ಕೆಲವು ಗ್ರಾಪಂಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿರಬಹುದು, ಆದರೆ ಕ್ಷೇತ್ರದಲ್ಲಿ ಬಂದಿರುವ ಮತಗಳಲ್ಲಿ ಜೆಡಿಎಸ್ 15 ಸಾವಿರ ಮತಗಳ ಅಂತರದಲ್ಲಿ ಮುಂದೇ ಇದೆ ಎಂದು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತ್ ಕುಮಾರ್ ತಿಳಿಸಿದರು.
ಸೋಮವಾರ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರು ಗ್ರಾಮಾಂತರ ಕ್ಷೇತ್ರದ ಪ್ರಮುಖ ಗ್ರಾಪಂಗಳಾದ ಹೆಗ್ಗೆರೆ, ಗೂಳೂರು, ನಾಗವಲ್ಲಿ, ತಿಮ್ಮರಾಜನಹಳ್ಳಿ, ಹೊನಸಗೆರೆ ಗ್ರಾಪಂ ಜೆಡಿಎಸ್ ಬೆಂಬಲಿಗರ ವಶಕ್ಕೆ ಬಂದಿವೆ ಎಂದು ಹೇಳಿದರು.
ಸೆಳೆದಿದ್ದಾರೆ: ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಕ್ಷೇತ್ರದ 35 ಗ್ರಾಪಂಗಳ 5 ಕ್ಷೇತ್ರಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಜೆಡಿಎಸ್ ಪಕ್ಷದವರಾಗಿದ್ದು 10 ಗ್ರಾಪಂಗಳಲ್ಲಿ ಉಪಾಧ್ಯಕ್ಷರಾಗಿದ್ದಾರೆ, 6 ಪಂಚಾಯ್ತಿಗಳಲ್ಲಿ ಸಮಾನಾಂತರವಾಗಿ ಇದ್ದೆವು. ಅಲ್ಲಿ ಆಪರೇಷನ್ ಕಮಲ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮತ್ತು ಸಚಿವ ಗೋಪಾಲಯ್ಯ ಅವರಿಂದ ಒತ್ತಡ ಹಾಕಿಸಿ ತಮ್ಮತ್ತ ಸೆಳೆದು ಕೊಂಡು ಅಧಿಕಾರ ಹಿಡಿದಿದ್ದಾರೆಂದರು.
ದೂಳಿಪಟ ಮಾಡಲು ಆಗಲ್ಲ: ಕೆಲವು ಕಡೆ ಅಧಿಕಾರ ದುರುಪಯೋಗಪಡಿಸಿಕೊಂಡು ಮೀಸಲಾತಿ ವ್ಯತ್ಯಾಸವಾಗಿ ನಮ್ಮ ಕೈ ತಪ್ಪಿದೆ. ಆದರೆ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಗರಿಗೆ ಬಂದಿರುವ ಮತ ಗಮನಿಸುವುದಾದರೆ ಬಿಜೆಪಿಗಿಂತ 15 ಸಾವಿರ ಹೆಚ್ಚು ಮತ ಜೆಡಿಎಸ್ ಬೆಂಬಲಿಗರಿಗೆ ಬಂದಿವೆ ಎಂದು ಹೇಳಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ಮಾಡಿರುವ ಜನಪರ ಕೆಲಸಗಳು ಜನರಿಗೆ ತಿಳಿದಿವೆ. ಮತದಾರರು ಜೆಡಿಎಸ್ ಪರ ಇದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ. ಜೆಡಿಎಸ್ ಎಂದೂ ದೂಳಿಪಟ ವಾಗುವುದಿಲ್ಲ. ಹಾಗೆ ಮಾಡಲೂ ಸಾಧ್ಯವಿಲ್ಲ ಎಂದರು. ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಿ, ಗ್ರಾಪಂ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅಭಿವೃದ್ಧಿ ಸಾಧಿಸುವಂತೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಸಂಬಂಧಿಸಿದ ಗ್ರಾಪಂ ಅಧ್ಯಕ್ಷರಿಗೆ ಕಿವಿಮಾತು ಹೇಳಿದ್ದಾರೆ ಎಂದರು.
ಇದನ್ನೂ ಓದಿ :ಅಂಬೇಡ್ಕರ್ ಭವನ ನನ್ನ ಅಭಿಲಾಷೆ: ಶಾಸಕ
ತಾಪಂ, ಜಿಪಂ ಚುನಾವಣೆಗೆ ಸಿದ್ಧ:ಕ್ಷೇತ್ರದ ಜೆಡಿಎಸ್ ಮುಖಂಡರೆಲ್ಲರೂ ಸಂಘಟಿತವಾಗಿ ಹೋರಾಡಿ ಮುಂಬರುವ ಜಿಪಂ, ತಾಪಂನಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಪಡೆಯುವಂತೆ ಮಾಡಬೇಕಿದೆ ಎಂದು ನಮ್ಮ ಶಾಸಕರಾದ ಡಿ.ಸಿ.ಗೌರಿಶಂಕರ್ ಕರೆ ನೀಡಿದ್ದಾರೆ. ಅದರಂತೆ ನಾವು ಚುನಾವಣೆಗೆ ಸಿದ್ಧರಾಗಿದ್ದೇವೆಂದರು.