Advertisement

ಭಾರತ ನಿಮ್ಮನ್ನು ಎಂದಿಗೂ  ಮರೆಯದು

10:47 PM Dec 09, 2021 | Team Udayavani |

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ದೇಶದ ಮೂರು ಸಶಸ್ತ್ರ ಪಡೆಗಳ ಮೊದಲ ಮುಖ್ಯಸ್ಥ ಜ| ಬಿಪಿನ್‌ ರಾವತ್‌, ಅವರ ಪತ್ಮಿ ಮಧುಲಿಕಾ ರಾವತ್‌ ಮತ್ತು ಇತರ 11 ಮಂದಿ ಸಿಬಂದಿ ಮೃತಪಟ್ಟಿದ್ದರು. ದೇಶಕ್ಕಾಗಿ ತಮ್ಮ ಜೀವ ಅರ್ಪಿಸಿದ ಇವರ  ಕೊಡುಗೆಗಳ ಕುರಿತ ವಿವರ ಇಲ್ಲಿದೆ… 

Advertisement

ಮಧುಲಿಕಾ ರಾವತ್‌ :

ಜ| ಬಿಪಿನ್‌ ರಾವತ್‌ ಅವರ ಪತ್ನಿಯಾಗಿರುವ ಮಧುಲಿಕಾ ರಾವತ್‌ ಅವರು, ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಧ್ಯಪ್ರದೇಶದ ರಾಜಮನೆತನವೊಂದಕ್ಕೆ ಸೇರಿರುವ ಇವರು, ಕುನ್ವಾರ್‌ ಮೃಗೇಂದ್ರ ಸಿಂಗ್‌ ಅವರ ಪುತ್ರಿ. ಕೋಟಾ¾ ಕ್ಷೇತ್ರದಲ್ಲಿ ಕುನ್ವಾರ್‌ ಎರಡು ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಮಧುಲಿಕಾ ಅವರು ದಿಲ್ಲಿ ವಿವಿಯಲ್ಲಿ ಸೈಕಾಲಜಿಯಲ್ಲಿ ಪದವಿ ಮುಗಿಸಿದ್ದು, 1986ರಲ್ಲಿ ಜ|ರಾವತ್‌ ಅವರನ್ನು ವಿವಾಹವಾಗಿದ್ದರು. ಇವರಿಗೆ ಕೃತಿಕಾ ಮತ್ತು ತಾರಿಣಿ ಎಂಬ ಮಕ್ಕಳೂ ಇದ್ದಾರೆ. ಮಧುಲಿಕಾ ಅವರು ಸೇನಾ ಮಡದಿಯರ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆಯಾಗಿದ್ದರು. ಅಲ್ಲದೆ ಹಲವಾರು ಸಾಮಾಜಿಕ ಸೇವಾ ಸಂಸ್ಥೆಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದರು.

ಬ್ರಿಗೇಡಿಯರ್‌ ಎಲ್‌ಎಸ್‌ ಲಿಡ್ಡರ್‌ :

ಹರಿಯಾಣದ ಪಂಚಕುಲದವರಾದ ಬ್ರಿಗೇಡಿಯರ್‌ ಎಲ್‌ಎಸ್‌ ಲಿಡ್ಡರ್‌ ಅವರು ಸಿಡಿಎಸ್‌ ಜ| ರಾವತ್‌ ಅವರ ರಕ್ಷಣ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಉಗ್ರವಾದ ವಿರುದ್ಧದ ಕಾರ್ಯಾಚರಣೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದ ಇವರು, ಕಝಕಿಸ್ಥಾನದಲ್ಲಿ ಭಾರತದ ರಕ್ಷಣ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯದಲ್ಲೇ ಬ್ರಿಗೇಡಿಯರ್‌ ಎಲ್‌ಎಸ್‌ ಲಿಡ್ಡರ್‌ ಅವರಿಗೆ ಭಡ್ತಿ ಸಿಗುವುದರಲ್ಲಿತ್ತು. ಈಗಾಗಲೇ ಇದಕ್ಕೆ ಬೇಕಾದ ಪ್ರಕ್ರಿಯೆಗಳು ಮುಗಿದಿದ್ದವು. ಇವರು ಪತ್ನಿ ಗೀತಿಕಾ ಮತ್ತು ಪುತ್ರಿ 16 ವರ್ಷದ ಆಶನಾ ಅವರನ್ನು ಅಗಲಿದ್ದಾರೆ.  ಅಂದ ಹಾಗೆ, ಇವರು ಕೇಂದ್ರದ ಮಾಜಿ ಸಚಿವ ರಾಜವರ್ಧನ್‌ ರಾಥೋರ್‌ ಅವರ ಸಹಪಾಠಿ. ಇವರಿಬ್ಬರು ಎನ್‌ಡಿಎಯಲ್ಲಿ ಒಟ್ಟಿಗೇ ಕಲಿತಿದ್ದರು.

Advertisement

ಲೆಫ್ಟಿನೆಂಟ್‌ ಕರ್ನಲ್‌  ಹರ್ಜಿಂದರ್‌ ಸಿಂಗ್‌ :

ರಾವತ್‌ ಅವರ 11ನೇ ಗೋರ್ಖಾ ರೈಫ‌ಲ್ಸ್‌ನವರೇ ಆದ ಲೆ| ಕ.ಹರ್ಜಿಂ ದರ್‌ ಸಿಂಗ್‌ ಸಿಡಿಎಸ್‌ ಅವರಿಗೆ ಸ್ಟಾಫ್ ಆಫೀಸರ್‌ ಆಗಿದ್ದರು. ಜತೆಗಿನ ಅಧಿಕಾರಿಗಳು ಇವರನ್ನು ನೆನಪಿಸಿಕೊಳ್ಳುವುದೇ ಸದಾ ಮಂದಹಾಸ ಮೊಗದ ಅಧಿಕಾರಿ ಎಂದು. ಮೂಲತಃ ಉತ್ತರ ಪ್ರದೇಶದ ಲಕ್ನೋದವರಾದ ಇವರು, ಸಿಯಾಚಿನ್‌ ಗ್ಲೆàಸಿಯರ್‌ ಸೇರಿದಂತೆ ಪ್ರಮುಖ ಆಪರೇಶನ್‌ಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಂದ ಹಾಗೆ ಇವರು ವಿವಾಹವಾಗಿರುವುದು ಕಾರ್ಕಳದ ಪ್ರಫ‌ುಲ್ಲಾ ಅವರನ್ನು.

ಜೆಡಬ್ಲ್ಯುಒ ಪ್ರದೀಪ್‌ ಎ.  :

ಕೇರಳದ ತೃಶೂರ್‌ ಜಿಲ್ಲೆಯವರಾದ ಪ್ರದೀಪ್‌ ಅರಕ್ಕಲ್‌ ಕ್ಯಾಪ್ಟರ್‌ನ ಚೀಫ್ ಎಂಜಿನಿಯರ್‌ ಆಗಿದ್ದರು. ಹಾಗೆಯೇ ಐಎಎಫ್ನಲ್ಲಿ ಜೂನಿಯರ್‌ ವಾರಂಟ್‌ ಎಂಜಿನಿಯರ್‌ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಛತ್ತೀಸ್‌ಗಡದಲ್ಲಿನ ನಕ್ಸಲ್‌ ವಿಗ್ರಹ ಕಾರ್ಯಾಚರಣೆಯಲ್ಲೂ ಪ್ರದೀಪ್‌ ಎ ಭಾಗಿಯಾಗಿದ್ದರು. ಅಷ್ಟೇ ಅಲ್ಲ, 2018ರ ಕೇರಳ ಪ್ರವಾಹವೂ ಸೇರಿದಂತೆ ಹಲವಾರು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಳೆದ 19 ವರ್ಷಗಳಿಂದ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ಪತ್ನಿ, 7 ವರ್ಷದ ಮಗ ಮತ್ತು 2 ವರ್ಷದ ಮಗಳನ್ನು ಅಗಲಿದ್ದಾರೆ.

ಹವಾಲ್ದಾರ್‌  ಸತ್ಪಾಲ್‌ ಸಿಂಗ್‌ :

ಡಾರ್ಜಲಿಂಗ್‌ ಮೂಲದವರಾದ ಇವರು ಜ| ಬಿಪಿನ್‌ ರಾವತ್‌ ಅವರಿಗೆ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿದ್ದರು. 41 ವರ್ಷದ ಇವರು ಗೋರ್ಖಾ ರೈಫ‌ಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಇವರ ಪುತ್ರ ಕೂಡ ಸೇನೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

ಲ್ಯಾನ್ಸ್‌ ನಾಯಕ್‌ ವಿವೇಕ್‌ಕುಮಾರ್‌ :

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವರಾದ ವಿವೇಕ್‌ ಕುಮಾರ್‌, ಜ|ರಾವತ್‌ ಅವರಿಗೆ ಪ್ರಿನ್ಸಿಪಲ್‌ ಸ್ಟಾಫ್ ಆಫೀಸರ್‌ ಆಗಿದ್ದರು. ಕಳೆದ ನಾಲ್ಕು ತಿಂಗಳುಗಳ ಹಿಂದೆ ತಮ್ಮ ಗ್ರಾಮಕ್ಕೆ ಬಂದಿದ್ದ ಇವರು, ಒಂದೂವರೆ ತಿಂಗಳು ರಜೆ ಮೇಲೆ ಇದ್ದರು. ಜತೆಗೆ ತಮ್ಮ ಪುತ್ರನ ಒಂದು ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಅಂದುಕೊಂಡಿದ್ದರು. ಎರಡು ವರ್ಷದ ಹಿಂದಷ್ಟೇ ಇವರಿಗೆ ವಿವಾಹವಾಗಿದ್ದು, ಪುತ್ರನಿಗೆ ಈಗಿನ್ನೂ ಎರಡು ತಿಂಗಳು.

ನಾಯಕ್‌ ಗುರುಸೇವಕ್‌ ಸಿಂಗ್‌ :

ಪಂಜಾಬ್‌ನ ದೋಡೆ ಗ್ರಾಮದವಾರದ ನಾಯಕ್‌ ಗುರುಸೇವಕ್‌ ಸಿಂಗ್‌, 9 ಪ್ಯಾರಾ ವಿಶೇಷ ದಳಕ್ಕೆ ಸೇರಿದವರಾಗಿದ್ದರು. ಇವರು ಸಿಡಿಎಸ್‌ ಅವರಿಗೆ ಕಳೆದ ಮೂರು ವರ್ಷಗಳಿಂದ ಪ್ರಿನ್ಸಿಪಲ್‌ ಸ್ಟಾಫ್ ಆಫೀಸರ್‌ ಆಗಿದ್ದರು. ಇವರು ಪತ್ನಿ ಜಸಿøàತ್‌ ಕೌರ್‌, 9 ಮತ್ತು 7 ವರ್ಷದ ಇಬ್ಬರು ಪತ್ರಿಯರು ಮತ್ತು 3 ವರ್ಷದ ಒಬ್ಬ ಪುತ್ರನನ್ನು ಅಗಲಿದ್ದಾರೆ.

ನಾಯಕ್‌ ಜಿತೇಂದ್ರ ಕುಮಾರ್‌ :

ಮಧ್ಯಪ್ರದೇಶದ ಸೆಹೋರ್‌ ಜಿಲ್ಲೆ ಯ ಧಾಮಾಂಡ ಗ್ರಾಮದ ನಾಯಕ್‌ ಜಿತೇಂದ್ರ ಕುಮಾರ್‌, 3ನೇ ಪ್ಯಾರಾ ವಿಶೇಷ ಪಡೆಗೆ ಸೇರಿ ದವರಾಗಿದ್ದಾರೆ.

ಜ| ರಾವತ್‌ ಅವರಿಗೆ ಪಿಎಸ್‌ಒ ಆಗಿದ್ದ ಇವರು, ಕಳೆದ 8 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಮತ್ತು ನಾಲ್ಕು ವರ್ಷದ ಮಗಳು ಹಾಗೂ ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ.

ವಿಂಗ್‌ ಕಮಾಂಡರ್‌ ಪೃಥ್ವಿ ಸಿಂಗ್‌ ಚೌಹಾಣ್‌  :

ಬುಧವಾರ ಅಪಘಾತಕ್ಕೀಡಾದ ಎಂ-17ವಿ5 ಹೆಲಿಕಾಪ್ಟರ್‌ ಅನ್ನು ಚಲಾಯಿಸುತ್ತಿದ್ದ ಪೈಲಟ್‌ ವಿಂಗ್‌ ಕಮಾಂಡರ್‌ ಪೃಥ್ವಿ ಸಿಂಗ್‌ ಚೌಹಾಣ್‌. ಇವರು ತಮಿಳುನಾಡಿನ ಸೂಲೂರಿನ 109 ಹೆಲಿಕಾಪ್ಟರ್‌ ಯುನೈಟೆಡ್‌ನಲ್ಲಿ ಕಮಾಂಡಿಂಗ್‌ ಆಫೀಸರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಧ್ಯಪ್ರದೇಶದ ರೇವಾದಲ್ಲಿರುವ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಇವರು, 2000ನೇ ಇಸವಿಯಲ್ಲಿ ವಾಯುಸೇನೆ ಸೇರಿದ್ದರು. ಇವರು ಪತ್ನಿ, 12 ವರ್ಷದ ಪುತ್ರಿ ಮತ್ತು 9 ವರ್ಷದ ಮಗನನ್ನು ಬಿಟ್ಟು ಹೋಗಿದ್ದಾರೆ.

ಲ್ಯಾನ್ಸ್‌ ನಾಯಕ್‌  ಸಾಯಿತೇಜ  :

27 ವರ್ಷದ ಲ್ಯಾನ್ಸ್‌ ನಾಯಕ್‌ ಬಿ ಸಾಯಿ ತೇಜ ಆಂಧ್ರಪ್ರದೇಶ ದ ಚಿತ್ತೂರು ಜಿಲ್ಲೆಯ ಕುರುಬಲಕೋಟಾ ಗ್ರಾಮದವರು. 2013 ರಲ್ಲಿ ಸೇನೆ ಸೇರಿದ್ದ ಇವರು, ಜ| ರಾವತ್‌ ಅವರ ಭದ್ರತಾ ಸಿಬಂದಿಯಾಗಿದ್ದರು. ಇವರಷ್ಟೇ ಅಲ್ಲ, ಸಹೋದರ ಮಹೇಶ್‌ ಕೂಡ ಸೇನೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪತ್ನಿ ಮತ್ತು 3 ಹಾಗೂ 1 ವರ್ಷದ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಜೆಡಬ್ಲ್ಯುಒ ರಾಣಾ ಪ್ರತಾಪ್‌ ದಾಸ್‌ :

ಒಡಿಶಾದ ತಾಲ್ಚಾರ್‌ನ ಜೂನಿಯರ್‌ ವಾರಂಟ್‌ ಅಧಿಕಾರಿಯಾಗಿರುವ ರಾಣಾ ಪ್ರತಾಪ್‌ ದಾಸ್‌, ಕಳೆದ 12 ವರ್ಷಗಳಿಂದ ವಾಯುಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ವೈದ್ಯೆಯಾಗಿರುವ ಪತ್ನಿ ಮತ್ತು ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ.

ಸ್ಕ್ವಾಡ್ರನ್‌ ಲೀಡರ್‌ ಕುಲ್ದೀಪ್‌ ಸಿಂಗ್‌ ರಾವ್‌ :

2013ರಲ್ಲಿ ವಾಯುಸೇನೆ ಸೇರಿದ್ದ ಕುಲ್ದೀಪ್‌ ಸಿಂಗ್‌, ರಾಜಸ್ಥಾನದ ಝುಂಝುಹು ಜಿಲ್ಲೆಯವರು. ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನ ಸಹಪೈಲಟ್‌ ಆಗಿದ್ದರು. 40 ವರ್ಷದ ಕುಲ್ದೀಪ್‌ ಸಿಂಗ್‌, ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು. ಇವರಿಗೆ ಒಬ್ಬ ಪುತ್ರನಿದ್ದಾನೆ.  ಇವರ ತಂದೆ ನೌಕಾದಳದ ನಿವೃತ್ತ ಅಧಿಕಾರಿ. ಇವರ ಸಹೋದರಿ ಅಭಿತಾ ಭಾರತೀಯ ಕರಾವಳಿ ಭದ್ರತಾ ಪಡೆಯಲ್ಲಿ ಡೆಪ್ಯುಟಿ ಕಮಾಂಡರ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next