Advertisement

ಲಸಿಕೆ, ಲಸಿಕೆ ಮತ್ತು ಲಸಿಕೆಯೊಂದೇ ಕೋವಿಡ್ ಗೆ ಪರಿಹಾರ

03:47 AM May 17, 2021 | Team Udayavani |

ಹತ್ತಿರಹತ್ತಿರ 140 ಕೋಟಿ ಜನಸಂಖ್ಯೆಯಿರುವ ಭಾರತ ಕೊರೊನಾ ವೈರಸ್‌ ಕೈಗೆ ಸಿಲುಕಿ ಒದ್ದಾಡುತ್ತಿದೆ! ಈ ಒಗಟನ್ನು ಹೇಗೆ ಬಿಡಿಸಬೇಕೆಂದು ತಿಳಿಯದೇ ಸರಕಾರ, ಆಸ್ಪತ್ರೆಗಳು, ಜನರು ಚಿಂತೆಗೊಳಗಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ, ನಾರಾಯಣ ಆಸ್ಪತ್ರೆ ಮುಖ್ಯಸ್ಥ ಡಾ|ದೇವೀಪ್ರಸಾದ್‌ ಶೆಟ್ಟಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಸಂದರ್ಶನದ ಆಯ್ದಭಾಗ ಇಲ್ಲಿದೆ.

Advertisement

ಕೊರೊನಾ ಮೂರನೇ ಅಲೆಯಿಂದ ಪಾರಾಗಲು ಇರುವ ದಾರಿ ಏನು?
ಉ: ಲಸಿಕೆ, ಲಸಿಕೆ ಮತ್ತು ಲಸಿಕೆಯೊಂದೇ ಪರಿಹಾರ. ಅತ್ಯಂತ ಕಡಿಮೆವೆಚ್ಚದಲ್ಲಿ ಸಾಕಾರ ಮಾಡಬಹುದಾದ ಏಕೈಕ ಮಾರ್ಗವೆಂದರೆ ಜನರಿಗೆ ಶೀಘ್ರವಾಗಿ ಲಸಿಕೆ ನೀಡುವುದು ಮಾತ್ರ.

ಪ್ರ: ಸದ್ಯ ಭಾರತದ ಜನಸಂಖ್ಯೆಯ ಶೇ.2ರಿಂದ 3ರಷ್ಟು ಮಂದಿಗೆ ಮಾತ್ರ ಪೂರ್ಣ ಲಸಿಕೆ ನೀಡಲಾಗಿದೆ. ಮೂರನೇ ಅಲೆ ಬರಲು ಕೆಲವೇ ತಿಂಗಳು ಬಾಕಿಯಿರುವಾಗ, ಉಳಿದ ದೊಡ್ಡ ಜನಸಂಖ್ಯೆಗೆ ಅಷ್ಟು ಕಡಿಮೆ ಅವಧಿಯಲ್ಲಿ ಲಸಿಕೆ ನೀಡಲು ಹೇಗೆ ಸಾಧ್ಯ?
ಉ: ನಮ್ಮದು ಭಾರೀ ಜನಸಂಖ್ಯೆಯ ರಾಷ್ಟ್ರ. ನಮ್ಮಲ್ಲಿ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಒಂದು ದಿನ ದೇಶದಲ್ಲಿ ಲಾಕ್‌ಡೌನ್‌ ಹೇರಿದರೆ 10,000 ಕೋಟಿ ರೂ. ನಷ್ಟವಾಗುತ್ತದೆ. ಸದ್ಯ ನಾವು ಲಸಿಕೆ ಹಾಕ ಬೇಕಿರುವುದು ಕೇವಲ 51 ಕೋಟಿ ಮಂದಿಗೆ ಮಾತ್ರ. ಇದಕ್ಕೆ ಖರ್ಚಾಗುವುದು 70,000 ಕೋಟಿ ರೂ. ಮಾತ್ರ. 200 ಲಕ್ಷ ಕೋಟಿ ರೂ. ಜಿಡಿಪಿ ಹೊಂದಿರುವ ಭಾರತದಂತಹ ದೇಶಕ್ಕೆ ಇದೊಂದು ಮೊತ್ತವೇ ಅಲ್ಲ.

ನಾವು ಲಸಿಕೆ ಉತ್ಪಾದಿಸುವ ಬೃಹತ್‌ ಕಂಪೆನಿ ಗಳಿಗೆ 10,000 ಕೋಟಿ ರೂ. ಮುಂಗಡ ನೀಡಿದರೆ, ಅವು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡು­ತ್ತವೆ. ನಾವು ಆರಾಮಾಗಿ ಎರಡು-ಮೂರು ತಿಂಗಳಲ್ಲಿ 51 ಕೋಟಿ ಮಂದಿಗೆ ಲಸಿಕೆ ಹಾಕಿಸಬಹುದು.

ಪ್ರ: ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾ­ಗುವ ಸಾಧ್ಯತೆ ಇದೆ ಎನ್ನುತ್ತಾರೆ. ಇದನ್ನು ಹೇಗೆ ನಿಭಾಯಿಸಬಹುದು?
ಉ: ಎರಡನೇ ಅಲೆಯಲ್ಲಿ ಸೋಂಕಿಗೊಳಗಾಗು­ತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಮುಂದೆ ಮುಂದೆ ಹೆಚ್ಚೆಚ್ಚು ಪ್ರೌಢರು ಒಂದೋ ಲಸಿಕೆ ಹಾಕಿಸಿಕೊಳ್ಳ­ಬೇಕು ಅಥವಾ ಸೋಂಕಿ ಗೊಳಗಾಗಬೇಕು ಎನ್ನುವ ಸ್ಥಿತಿಯಿದೆ. ಹೀಗಿರು ವಾಗ ಕೊರೊನಾದ ಮುಂದಿನ ನಿಲ್ದಾಣ ಯಾವುದು? 18 ವರ್ಷದೊಳಗಿನ ಮಕ್ಕಳು ಲಸಿಕೆ ವ್ಯಾಪ್ತಿಯಲ್ಲಿಲ್ಲ. ಸದ್ಯ ಅವರೇ ದುರ್ಬಲ ಗುಂಪು. ಅದಕ್ಕಾಗಿ ತತ್‌ಕ್ಷಣ ಕ್ರಮ ತೆಗೆದು­ಕೊಳ್ಳಬೇಕು. ಮಕ್ಕಳನ್ನು ಐಸಿಯುಯೊಳಗೆ ಕೂಡಿಹಾಕಿ­ಕೊಳ್ಳು ವುದು ಕಷ್ಟ. ಅಪ್ಪ ಅಮ್ಮ ಜತೆಗೆ ಇರಲೇಬೇಕಾಗುತ್ತದೆ. ಅವರಿಗೇ ಲಸಿಕೆ ಸಿಕ್ಕಿಲ್ಲದಿದ್ದರೆ? ಯುವ ಪೋಷಕರಿಗೆ ತತ್‌ಕ್ಷಣ ಲಸಿಕೆ ವ್ಯವಸ್ಥೆ ಮಾಡದಿದ್ದರೆ ಅಪಾಯ ಖಚಿತ.

Advertisement

ಪ್ರ: ಈ ವರ್ಷಾಂತ್ಯಕ್ಕೆ 200 ಕೋಟಿ ಲಸಿಕೆ ಸಿಗುತ್ತದೆ ಎಂದು ಸರಕಾರ ಹೇಳುತ್ತದೆ. ಅದು ಬಹಳ ತಡ ಆಗುವುದಿಲ್ಲವೇ?
ಉ: ನಾನು ಲಸಿಕೆಯ ವೆಚ್ಚದ ಬಗ್ಗೆ ಚಿಂತಿಸು­ತ್ತಿದ್ದೇನೆ. ಸದ್ಯ ಖಾಸಗಿ ಆಸ್ಪತ್ರೆ ಯಲ್ಲಿ ದಂಪತಿ 2 ಡೋಸ್‌ ಲಸಿಕೆ ತೆಗೆದು­ ಕೊಳ್ಳಬೇಕೆಂದರೆ 6,000 ರೂ. ಖರ್ಚಾ ಗುತ್ತದೆ. ಇನ್ನು ಕುಟುಂಬದಲ್ಲಿ ಇತರ ಸದಸ್ಯರೂ ಇರುತ್ತಾರೆ. ಈ ದುಬಾರಿ ಮೊತ್ತವನ್ನು ಬಹುತೇಕರಿಗೆ ಭರಿಸಲು ಸಾಧ್ಯವಿಲ್ಲ. ಸದ್ಯ ಉದ್ಯೋಗಿ­ಗಳು ವಿವಿಧ ಕಾರಣಗಳಿಂದ ಆದಾಯ ಕಳೆದುಕೊಂಡು ಪರದಾಡುತ್ತಿದ್ದಾರೆ. ಆದ್ದರಿಂದ ಸರಕಾರ ತತ್‌ಕ್ಷಣ ಮುಂದೆ ಬಂದು ಮುಂಗಡ ಹಣ ನೀಡಿ ವೇಗ­ವಾಗಿ ಲಸಿಕೆ ಸಿಗುವಂತೆ ಏರ್ಪಾಡು ಮಾಡಬೇಕು.

ಪ್ರ: ಲಸಿಕೆಯ ಕೊರತೆಯ ಜತೆಗೆ ಭಾರತದಲ್ಲಿ ವೈದ್ಯರು, ದಾದಿಯರ ಕೊರತೆಯೂ ಇದೆ. ಇದಕ್ಕೇನು ಪರಿಹಾರ?
ಉ: ಸದ್ಯ ಭಾರತದಲ್ಲಿ 1.5 ಲಕ್ಷ ತರಬೇತಾದ ವೈದ್ಯರು ಆಸ್ಪತ್ರೆಗಳಿಗೆ ಹೋಗದೆ ನೀಟ್‌ ಪರೀಕ್ಷೆ ಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಕೊರೊನಾ ಚಟುವಟಿಕೆಯಲ್ಲಿ ಕನಿಷ್ಠ 3 ತಿಂಗಳು ತೊಡಗಿಕೊಂಡರೆ ಶೇ.15ರಷ್ಟು ಪ್ರೋತ್ಸಾಹಾಂಕ ನೀಡುತ್ತೇವೆಂದು ಹುರಿದುಂಬಿಸಬೇಕು. ಈಗಿನ ಮಟ್ಟಿಗೆ ವೈದ್ಯರಿಗೆ ದುಡ್ಡು ಮಹತ್ವದ್ದಲ್ಲ. ಇನ್ನು ವಿದೇಶಗಳಲ್ಲಿ ಎಂಬಿಬಿಎಸ್‌ ಪಡೆದು, ಇಲ್ಲಿ ಪ್ರವೇಶ ಪರೀಕ್ಷೆಗೆ ಸಿದ್ಧವಾಗುತ್ತಿರುವ 80,000 ಮಂದಿ ವೈದ್ಯರಿದ್ದಾರೆ. ಅವರಿಗೂ ಪ್ರೋತ್ಸಾಹಾಂಕ ಕೊಟ್ಟು ಸೇರಿಸಿಕೊಳ್ಳಬೇಕು. ಲಕ್ಷಾಂತರ ದಾದಿಯರು ನರ್ಸಿಂಗ್‌ ಪದವಿ ಪೂರೈಸಿ, ಕೆಲಸ ಮಾಡದೇ ಉಳಿದುಕೊಂಡಿದ್ದಾರೆ. ಅವರನ್ನೂ ನಮ್ಮೊಂದಿಗೆ ಸೇರಿಸಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next