ಚೆನ್ನೈ: ಪ್ರವಾಸಿ ಇಂಗ್ಲೆಂಡ್ ಕ್ರಿಕೆಟಿಗರಿಗೆ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಕೇವಲ 3 ದಿನಗಳ ಅಭ್ಯಾಸವಷ್ಟೇ ಲಭಿ ಸಲಿದೆ. ಚೆನ್ನೈಗೆ ಆಗಮಿಸಿದ ಬಳಿಕ ಕ್ರಿಕೆಟಿಗರೆಲ್ಲ ಕೋವಿಡ್ ನಿಯಮಾವಳಿ ಯಂತೆ 6 ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾದುದೇ ಇದಕ್ಕೆ ಕಾರಣ.
ಶ್ರೀಲಂಕಾ ಪ್ರವಾಸವನ್ನು ಮುಗಿಸಲಿ ರುವ ಇಂಗ್ಲೆಂಡ್ ತಂಡ ಬುಧವಾರ ಚೆನ್ನೈಗೆ ಆಗಮಿಸಲಿದೆ. ಆಟಗಾರರು, ಸಹಾಯಕ ಸಿಬಂದಿ ಹಾಗೂ ಅಧಿಕಾರಿಗಳೆಲ್ಲ ಇಲ್ಲಿ ಫೆ. ಒಂದರ ತನಕ ಕಟ್ಟುನಿಟ್ಟಿನ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಬಳಿಕ 3 ದಿನವಷ್ಟೇ ಅಭ್ಯಾಸಕ್ಕೆ ಲಭಿಸುತ್ತದೆ.
ಆದರೆ ಶ್ರೀಲಂಕಾ ಸರಣಿಯಲ್ಲಿ ಆಡದ ಬೆನ್ ಸ್ಟೋಕ್ಸ್, ಜೋಫ್ರ ಆರ್ಚರ್ ಮತ್ತು ರೋರಿ ಬರ್ನ್ಸ್ ನೇರವಾಗಿ ಭಾರತಕ್ಕೆ ಬಂದಿಳಿದ ಕಾರಣ ಇವರಿಗೆ 5 ದಿನಗಳ ಅಭ್ಯಾಸ ಸಿಗಲಿದೆ. ಸದ್ಯ ಇವರು ಹೊಟೇಲ್ ಕ್ವಾರಂಟೈನ್‌ನಲ್ಲಿದ್ದಾರೆ.
3 ಕೋವಿಡ್ ಟೆಸ್ಟ್ :
ಈ ನಡುವೆ, 6 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು 3 ಸಲ ಕೊರೊನಾ ಪರೀಕ್ಷೆಗೆ ಒಳಗಾಗಬೇಕಿದೆ. ಆದರೆ ಶ್ರೀಲಂಕಾಕ್ಕೆ ಆಗಮಿಸಿದ ಕೇವಲ 48 ಗಂಟೆಗಳಲ್ಲೇ ಇಂಗ್ಲೆಂಡ್ ಕ್ರಿಕೆಟಿಗರಿಗೆ ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ನಡೆದ ಕೋವಿಡ್ ಪರೀಕ್ಷೆಯಲ್ಲಿ ಮೊಯಿನ್ ಅಲಿ ಅವರ ಫಲಿತಾಂಶವಷ್ಟೇ ಪಾಸಿಟಿವ್ ಬಂದಿತ್ತು. ಚೆನ್ನೈಯಲ್ಲಿ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳು ನಡೆಯಲಿವೆ.