ಹಾಸನ: ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ 2021-22ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿ ಯೋಜನೆಗಳ ನಿರೀಕ್ಷೆಯನ್ನು ಕಡೆಗಣಿಸಿದಂತೆ ಹಾಸನ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಯೋಜನೆಗಳನ್ನೂ ನಿರ್ಲಕ್ಷ್ಯ ಮಾಡಲಾಗಿದೆ. ಹಾಸನ -ಬೇಲೂರು- ಚಿಕ್ಕಮಗಳೂರು ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇವಲ ಒಂದು ಸಾವಿರ ರೂ. ಅನ್ನು ಮಾತ್ರ ನಿಗದಿಪಡಿಸಿದ್ದಾರೆ.
ಆದರೆ, ದೇಶದ ರೈಲ್ವೆ ಬ್ರಾಡ್‌ಗೇಜ್ ಮಾರ್ಗಗಳೆಲ್ಲವನ್ನೂ 2023ರೊಳಗೆ ವಿದ್ಯುದ್ದೀಕರಣಗೊಳಿಸ ಬೇಕೆಂಬ ನಿರ್ಧಾರದ ಹಿನ್ನಲೆಯಲ್ಲಿ ಜಿಲ್ಲೆಯನ್ನು ಸಂಪರ್ಕಿಸುವ ಎರಡು ರೈಲು ಮಾರ್ಗಗಳ ವಿದ್ಯುದ್ದೀಕರಣಕ್ಕೆ 2021 -22ನೇ ಸಾಲಿಗೆ 162 ಕೋಟಿ ರೂ. ಅನುದಾನ ನಿಗದಿಪಡಿಸಿದ್ದಾರೆ.
ಇದನ್ನೂ ಓದಿ:ನಡು ರಸೆಯಲ್ಲೇ ಕಂಬವಿದ್ದರೂ ರಸ್ತೆ ಕಾಮಗಾರಿ ನಡೆಯುತ್ತೆ !
ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೆ ಮಲೆನಾಡು ನಗರಿ ಚಿಕ್ಕಮಗಳೂರು ನೇರ ರೈಲು ಸಂಪರ್ಕ ಪಡೆಯುವ ಮಹತ್ವದ ರೈಲು ಮಾರ್ಗ ಚಿಕ್ಕಮಗಳೂರು – ಬೇಲೂರು – ಹಾಸನ ಮಾರ್ಗಕ್ಕೆ ಮಂಜೂರಾತಿ ದೊರತು ಮೂರ್‍ನಾಲ್ಕು ವರ್ಷಗಳು ಕಳೆದರೂ ನಿರ್ಮಾಣ ಕಾಮಗಾರಿಗೆ ಅನುದಾನ ಮಾತ್ರ ಮಂಜೂರಾಗುತ್ತಿಲ್ಲ. ಈಗಾಗಲೇ ಚಿಕ್ಕಮಗಳೂರು – ಬೇಲೂರು ನಡುವೆ ಭೂ ಸ್ವಾಧೀನ ಪೂರ್ಣಗೊಂಡಿದೆ. ಹಾಸನ – ಬೇಲೂರು ನಡುವೆ ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಆದರೂ, ಬಜೆಟ್‌ನಲ್ಲಿ ಅನುದಾನ ನಿಗದಿಯಾಗಿಲ್ಲ. ಕಳೆದ ವರ್ಷ ಈ ಮಾರ್ಗಕ್ಕೆ ಒಂದು ಲಕ್ಷ ರೂ. ಸಾಂಕೇತಿಕವಾಗಿ ನಿಗದಿಯಾಗಿತ್ತು. ಈ ವರ್ಷ ಕೇವಲ ಒಂದು ಸಾವಿರ ರೂ. ಮಾತ್ರ ನಿಗದಿಯಾಗಿದೆ.
ಬೆಂಗಳೂರು (ಚಿಕ್ಕಬಾಣಾವರ) – ಹಾಸನ ನಡುವಿನ ಹೊಸ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿ ನಾಲ್ಕು ವರ್ಷಗಳಾಗುತ್ತಿದ್ದು, ಈ ಮಾರ್ಗದ ವಿದ್ಯುದೀಕರಣಕ್ಕೆ 50.6 ಕೋಟಿ ರೂ. ನಿಗದಿಪಡಿಸಲಾಗಿದೆ. ಮೈಸೂರು – ಹಾಸನ – ಮಂಗಳೂರು ನಡುವಿನ 347 ಕಿ.ಮೀ. ವಿದ್ಯುದೀಕರಣಕ್ಕೆ 112 ಕೋಟಿ ರೂ. ಅನ್ನು ನಿಗದಿಪಡಿಸಿದ್ದಾರೆ. ಅಂದರೆ ಹಾಸನ ಜಿಲ್ಲೆಯನ್ನು ಸಂಪರ್ಕಿಸುವ ಎರಡು ಮಾರ್ಗಗಳ ವಿದ್ಯುದ್ದೀ ಕರಣಕ್ಕೆ ಒಟ್ಟು 162.6 ಕೋಟಿ ರೂ. ಹೊರತುಪಡಿಸಿದರೆ ಕೇಂದ್ರ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಕೇಂದ್ರ ಬಜೆಟ್‌ನಲ್ಲಿ ಬೇರ್ಯಾವ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಘೋಷಣೆಯಾಗಿಲ್ಲ.
ಹಾಸನದಲ್ಲಿ ಐಐಟಿ ಸ್ಥಾಪನೆಗಾಗಿ 1000 ಎಕರೆ ಭೂ ಸ್ವಾಧೀನವಾಗಿ ಒಂದು ದಶಕ ಕಳೆದಿದೆ. ಆದರೆ, ಐಐಟಿ ಮಂಜೂರಾಗಿಲ್ಲ. ಹಾಸನ ವಿಮಾನ ನಿಲ್ದಾಣದ 6 ದಶಕಗಳ ಕನಸು ಇನ್ನೂ ನನಸಾಗುವ ಲಕ್ಷಣಗಳಿಲ್ಲ. ಹಾಸನ – ಬೇಲೂರು- ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾಣವೂ ಈಗ ನನೆಗುದಿಗೆ ಬೀಳುವ ಯೋಜನೆಗಳ ಪಟ್ಟಿಗೆ ಸೇರುವ ಲಕ್ಷಣಗಳು ಗೋಚರಿಸುತ್ತಿವೆ.
ರಾಜ್ಯಕ್ಕೆ 2574 ಕೋಟಿ ರೂ.: ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ಒಟ್ಟು 2,574 ಕೋಟಿ ರೂ. ನಿಗದಿಯಾಗಿದ್ದು, ತುಮಕೂರು – ದಾವಣಗೆರೆ ನೂತನ ರೈಲು ಮಾರ್ಗದ ನಿರ್ಮಾಣಕ್ಕೆ 150 ಕೋಟಿ ರೂ., ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ನೂತನ ರೈಲು ಮಾರ್ಗಕ್ಕೆ 100 ಕೋಟಿ ರೂ., ಶಿವಮೊಗ್ಗ ಜಿಲ್ಲೆ ತಾಳಗುಪ್ಪ ರೈಲು ನಿಲ್ದಾಣದ ಟರ್ಮಿನಲ್ ನಿರ್ಮಾಣಕ್ಕೆ 20 ಕೋಟಿ ರೂ. ಅನ್ನು ಕೇಂದ್ರ ಅರ್ಥ ಸಚಿವರು ನಿಗದಿಪಡಿಸಿದ್ದಾರೆ.
ನಂಜುಂಡೇಗೌಡ. ಎನ್