Advertisement

ಹೆಸರಿಗೆ ಮಾತ್ರ “ಆದರ್ಶ’ರೈಲ್ವೆ ನಿಲ್ದಾಣ

01:19 PM Nov 27, 2017 | Team Udayavani |

ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣವನ್ನು ಆದರ್ಶ ರೈಲ್ವೆ ನಿಲ್ದಾಣವಾಗಿ ಘೋಷಿಸಿ, ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದರೂ ಇಂದಿಗೂ ಪ್ಲಾಟ್‌ ಫಾರಂ ಅವ್ಯವಸ್ಥೆ, ಶೌಚಾಲಯ ಮೊದಲಾಗಿ ಮೂಲಸೌಕರ್ಯಗಳಿಂದ ವಂಚಿತವಾಗಿದೆ.

Advertisement

ರೈಲ್ವೆ ನಿಲ್ದಾಣ ನವೀಕರಣವಾಗುವ ಮುನ್ನ ಎಲ್ಲಾ ರೈಲುಗಳು ರೈಲ್ವೆ ನಿಲ್ದಾಣದ ಮುಖ್ಯಪ್ಲಾಟ್‌ಫಾರಂನ ಸಮೀಪದ ಟ್ರ್ಯಾಕ್‌ ಮೇಲೆ ಬಂದು ನಿಲ್ಲುತ್ತಿದ್ದವು. ಇದರಿಂದ ಪ್ರಯಾಣಿಕರು ಹತ್ತಲು ಹಾಗೂ ಇಳಿಯಲು ಅನುಕೂಲವಾಗುತ್ತಿತ್ತು. ಆದರೆ ಈಗ ಮುಖ್ಯ ಪ್ಲಾಟ್‌ ಫಾರಂನ ಬಳಿಯ ಟ್ರ್ಯಾಕ್‌ ಮೇಲೆ ಟೆಸ್ಟಿಂಗ್‌ ಎಂಜಿನ್‌ ಮೊದಲಾಗಿ ಬೇರೆ ಉದ್ದೇಶಗಳಿಗೆ ಬಳಕೆ ಆಗುತ್ತಿದ್ದು, ರೈಲುಗಳು ಇಲ್ಲಿ ಬರುವುದೇ ಅಪರೂಪವಾಗಿದೆ. ಇನ್ನು 2ನೇ ಪ್ಲಾಟ್‌ಫಾರಂನ ಟ್ರ್ಯಾಕ್‌ ಮೇಲೆ ರೈಲು ಬರುವ ಸಮಯವನ್ನು ವಿಳಂಬವಾಗಿ ತಿಳಿಸಲಾಗುತ್ತದೆ. ಕೆಲವು ಬಾರಿ ರೈಲ್ವೆ ಅಧಿಕಾರಿಗಳಿಗೆ ಯಾವ ಪ್ಲಾಟ್‌ಫಾರಂನ ಟ್ರ್ಯಾಕ್‌ ಮೇಲೆ ರೈಲು ಬರುತ್ತದೆ ಎನ್ನುವುದು ಸ್ಪಷ್ಟವಾಗಿರುವುದಿಲ್ಲ. ಈ ಪ್ಲಾಟ್‌ಫಾರಂಗೆ ಬರಲು ಮೆಟ್ಟಿಲುಗಳು ಹತ್ತಿ ಬರಲು ವೃದ್ಧರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಇದರಿಂದಾಗಿ 1ನೇ ಪ್ಲಾಟ್‌ಫಾರಂನ ರೈಲ್ವೆ ಟ್ರ್ಯಾಕ್‌ ಮೇಲೆ ನಡೆದುಕೊಂಡು ಹೋಗಿ ಕಟ್ಟೆ ಹತ್ತುವ ಪರಿಸ್ಥಿತಿ ಬಂದೊದಗಿದ್ದು, ಪ್ರಯಾಣಿಕರು ನಿತ್ಯ ಯಾತನೆ ಪಡುವಂತಾಗಿದೆ. ಈ ನಿಟ್ಟಿನಲ್ಲಿ ಆದಷ್ಟೂ ನಿಲ್ದಾಣದ ಸಮೀಪದ ಪ್ಲಾಟ್‌ ಫಾರಂನ ಸಮೀಪದ ಟ್ರ್ಯಾಕ್‌ ಮೇಲೆ ರೈಲುಗಳು ನಿಲ್ಲುವ ವ್ಯವಸ್ಥೆ ಮಾಡಿದರೆ ಅನುಕೂಲ ಎನ್ನುವುದು ಪ್ರಯಾಣಿಕರ ಒತ್ತಾಯ.

ಶೌಚಾಲಯ ಹಾಗೂ ಕುಡಿಯುವ ನೀರಿನ ಅವ್ಯವಸ್ಥೆ : ರೈಲ್ವೆ ನಿಲ್ದಾಣವನ್ನು ಆದರ್ಶ ರೇಲ್ವೆ ನಿಲ್ದಾಣವಾಗಿದ್ದರೂ ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಪಾವತಿಸಿ ಉಪಯೋಗಿ ಸುವ ಶೌಚಾಲಯ ನಿರ್ಮಿಸಲಾಗಿದ್ದರೂ ಇದು ಯಾವಾಗಲೂ ಬೀಗ ಹಾಕಿರುತ್ತದೆ. ಕನಿಷ್ಠ ರೈಲಿಗಾಗಿ ಕಾಯುವ ಪ್ರಯಾಣಿಕರಿಗೆ ಶೌಚಾಲಯ ವ್ಯವಸ್ಥೆ ಮಾಡಬೇಕೆಂಬ ಅರಿವು
ರೈಲ್ವೆ ಇಲಾಖೆಗೆ ಇಲ್ಲ. ಮಹಿಳೆಯರು ಹಾಗೂ ವೃದ್ಧರು ಶೌಚಾಲಯಕ್ಕಾಗಿ ರೈಲಿಗಾಗಿಯೇ ಕಾಯಬೇಕಾದ ಸ್ಥಿತಿ ಬಂದೊದಗಿದೆ ಎಂದು ಪ್ರಯಾಣಿಕ ಮುನಿರಾಜು ದೂರುತ್ತಾರೆ.

ನಿಲ್ದಾಣಕ್ಕೆ ಬೀದಿ ದೀಪಗಳಿಲ್ಲ. ರೇಲ್ವೆ ನಿಲ್ದಾಣಕ್ಕೆ ಹೋಗುವ ಖಾಸ್‌ಬಾಗ್‌ ರೇಲ್ವೆ ಸೇತುವೆ ಪಕ್ಕದ ರಸ್ತೆಯಲ್ಲಿ ಬೀದಿ
ದೀಪಗಳಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ರಾತ್ರಿ ವೇಳೆ ರೇಲ್ವೆ ನಿಲ್ದಾಣದಲ್ಲಿ ಇಳಿದು ಬೇರೆ ಕಡೆಗೆ ಹೋಗುವ ನೂರಾರು ಪ್ರಯಾಣಿಕರು ಇದೇ ಮಾರ್ಗದಲ್ಲಿಯೇ ಹೋಗಬೇಕಿದ್ದು, ಕತ್ತಲಾಗುತ್ತಿದ್ದಂತೆ
ಈ ರಸ್ತೆ ಬಿಕೋ ಎನ್ನುತ್ತಿರುತ್ತದೆ. ಈ ಹಿಂದೆ ಪ್ಲಾಟ್‌ಫಾರಂನ ದೀಪಗಳು ಸಣ್ಣದಾಗಿ ಬೆಳಕು ನೀಡುತ್ತಿದ್ದವು. ಈಗ ಅವೂ
ಇಲ್ಲದಂತಾಗಿವೆ. ಇದೇ ಮಾರ್ಗದಲ್ಲಿ ರೇಲ್ವೆ ನಿಲ್ದಾಣಕ್ಕೆ ಹೋಗುವ ದ್ವಾರ ಬಾಗಿಲಿನಲ್ಲಿ ಎಟಿಎಂ ಇದೆ. ಇಲ್ಲಿ ಹಣ ಪಡೆದು ಕತ್ತಲಲ್ಲಿ ನಡೆದು ಬರಲು ಜನ ಭಯಭೀತ ರಾಗುತ್ತಿದ್ದಾರೆ. ಇಲ್ಲಿಯೇ ವಾಹನಗಳಿಗೆ ಪಾರ್ಕಿಂಗ್‌ ಇದೆ. ಆದರೆ ಜನ ನಡೆದಾಡಲು ಬೀದಿ ದೀಪಗಳಿಲ್ಲ. ರಸ್ತೆಬದಿಯಲ್ಲಿ ಗಡಗಂಟಿಗಳು ಬೆಳೆದಿದ್ದು. ಆ ವೇಳೆಯಲ್ಲಿ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು ಕತ್ತಲಿನಲ್ಲಿಯೇ ಬರಬೇಕಾಗಿದ್ದು, ಯಾವುದೇ ಅಚಾತುರ್ಯಗಳಾಗುವ ಸಂಭವವಿದೆ.

ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಇಲ್ಲ: ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ ಸಮೀಪದಲ್ಲೆ ಅಪರೆಲ್‌ ಪಾರ್ಕ್‌ ಇದೆ. ಸುಮಾರು ಇನ್ನೂರಕ್ಕೂ ಹೆಚ್ಚು ಕೈಗಾರಿಕೆಗಳು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿವೆ. ಕೈಗಾರಿಕಾ ಪ್ರದೇಶ ಸೇರಿದಂತೆ ಉದ್ಯೋಗಕ್ಕಾಗಿ ಪ್ರತಿದಿನ ಸಾವಿರಾರು ಜನರು ದೊಡ್ಡಬಳ್ಳಾಪುರಕ್ಕೆ ಬಂದು ಹೋಗುತ್ತಿದ್ದಾರೆ. 

Advertisement

ದೊಡ್ಡಬಳ್ಳಾಪುರ ರೇಷ್ಮೆ ಉದ್ಯಮದಲ್ಲಿ ದೇಶದಲ್ಲೆ ಹೆಸರು ಮಾಡಿದೆ. ದೊಡ್ಡಬಳ್ಳಾಪುರ ಮಾರ್ಗವಾಗಿ ರಾಷ್ಟ್ರೀಯ
ಹೆದ್ದಾರಿ ಇದೆ. ಕೆಲವೇ ಕಿ.ಮೀ ಗಳಲ್ಲಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಧಾರ್ಮಿಕ ಕೇಂದ್ರಗಳು, ವ್ಯಾಪಾರ ವಹಿ ವಾಟು, ಕೈಗಾರಿಕೆ ಅಲ್ಲದೇ ಶೈಕ್ಷಣಿಕ ಸಂಸ್ಥೆ ಗಳಿಗೂ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದಾರೆ. ಇವರೆಲ್ಲರಿಗೂ ದೊಡ್ಡ ಬಳ್ಳಾಪುರದಲ್ಲಿ ಎಕ್ಸ್‌ಪ್ರಸ್‌ ರೈಲುಗಳ ನಿಲುಗಡೆಯಿಂದ ಹೆಚ್ಚಿನ ಸಹಾಯವಾಗಲಿದ್ದು, ನಿಲ್ದಾಣದಲ್ಲಿ ಹಲವಾರು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಮಾಡಲು ಕೋರಲಾಗಿತ್ತು.

ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ ಮೂಲಕ ಹೋಗುವ ಪ್ರಶಾಂತಿ ಎಕ್ಸ್‌ಪ್ರೆಸ್‌, ಬೆಂಗಳೂರು-ಬೀದರ್‌ ಎಕ್ಸ್‌ಪ್ರೆಸ್‌,
ಸೋಲಾಪುರ ಎಕ್ಸ್‌ಪ್ರೆಸ್‌, ಯಶವಂತಪುರ- ಮಚಲೀಪಟ್ಟಣ ಎಕ್ಸ್‌ ಪ್ರಸ್‌, ಮೈಸೂರು- ಶಿರಡಿ ಎಕ್ಸ್‌ಪ್ರೆಸ್‌, ಕುರ್ಲಾ ಎಕ್ಸ್‌ಪ್ರೆಸ್‌ ಇವುಗಳ ನಿಲುಗಡೆ ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಈ ರೈಲುಗಳ ನಿಲುಗಡೆಗಳ ಜೊತೆಗೆ ಚೆನ್ಹೆ„-ಶಿರಡಿ ಎಕ್ಸ್‌ಪ್ರೆಸ್‌, ನಾಗರಕೊಯಿಲ್‌ ಮುಂಬೈ ಎಕ್ಸ್‌ಪ್ರೆಸ್‌, ರಾಜಕೋಟ್‌ ಎಕ್ಸ್‌
ಪ್ರಸ್‌ ಮತ್ತು ವಿವೇಕ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣ ನಿಲುಗಡೆ ನೀಡಿದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಪ್ರಯಾಣಿಕ ರಾದ ಚಂದ್ರಶೇಖರ್‌ ಆಗ್ರಹಿಸಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರು ನಲ್ಲಿಯಲ್ಲಿ ಬಂದರೂ ಇದು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ. ರೈಲ್ವೆ
ನಿಲ್ದಾಣಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಬೇಕೆಂಬ ನಿಯಮವಿದ್ದರೂ ಇಲ್ಲಿ ಪಾಲನೆಯಾಗುತ್ತಿಲ್ಲ. ಹೀಗಾಗಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು.
●ಸುಮಾ, ಪ್ರಯಾಣಿಕರು

ಡಿ.ಶ್ರೀಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next