Advertisement

ಮೋದಿ ಅಶ್ವಮೇಧ ಕುದುರೆ ಕಟ್ಟಿಹಾಕಲು ಗೌಡರಿಂದ ಮಾತ್ರ ಸಾಧ್ಯ

06:05 AM Jan 18, 2019 | |

ಬೆಂಗಳೂರು: ನರೇಂದ್ರ ಮೋದಿ ಅಧಿಕಾರದ ಅಶ್ವಮೇಧ ಕುದುರೆ ಕಟ್ಟಿಹಾಕಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ಗುರುವಾರ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ನರೇಂದ್ರಮೋದಿ ಎದುರಿಸುವ ಶಕ್ತಿ ದೇವೇಗೌಡರಿಗಿದೆ. ನೀವು ದೇವೇಗೌಡರಿಗೆ ಶಕ್ತಿ ತುಂಬಿ ಎಂದು ತಿಳಿಸಿದರು.

Advertisement

ದೇಶದಲ್ಲಿ ಅಲ್ಪಸಂಖ್ಯಾತರು ಅಭದ್ರತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಭದ್ರತೆ ಒದಗಿಸಬೇಕಾದರೆ ಜಾತ್ಯತೀತ ಶಕ್ತಿಗಳ ಸರ್ಕಾರವು ಅಧಿಕಾರಕ್ಕೆ ಬರಬೇಕು. ಬಿಜೆಪಿಯೇತರ ಶಕ್ತಿಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಈಗಾಗಲೇ ದೇವೇಗೌಡರು ಮಾಡುತ್ತಿದ್ದಾರೆ ಎಂದರು.

ಬಿಜೆಪಿಯವರು ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೇ, ರಾಜ್ಯಪಾಲರ ಆಡಳಿತ ರಚನೆಯಾಗಲಿದೆ ಎಂದು ಬಿಂಬಿಸಲಾಯಿತು. ಸಮಾವೇಶಕ್ಕೆ ಬರುತ್ತೇನೆಯೇ ಎಂಬ ಆತಂಕವು ಇತ್ತು. ಆದರೆ, ಬಿಜೆಪಿ ತಂತ್ರ ಫ‌ಲಿಸಲಿಲ್ಲ ಎಂದು ತಿಳಿಸಿದರು.

ಅಲ್ಪಸಂಖ್ಯಾತರ ವಿರೋಧಿಯಲ್ಲ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾತನಾಡಿ, ಜೆಡಿಎಸ್‌ ಅಲ್ಪಸಂಖ್ಯಾತರ ವಿರೋಧಿಯಲ್ಲ. ಆದರೆ, ಕೆಲವೊಂದು ವಿದ್ಯಮಾನಗಳಿಂದ ಅಲ್ಪಸಂಖ್ಯಾತರು ನಮ್ಮಿಂದ ದೂರವಾಗಿದ್ದಾರೆ. ನಾವು ಬಿಜೆಪಿ ಜತೆ ಹೋಗಿದ್ದೆವು ಎಂಬ ಬೇಸರ ನಿಮಗಿದೆ. ಆದರೆ, ನಮ್ಮ ಮೇಲೆ ವಿಶ್ವಾಸವಿಡಿ ಎಂದು ಹೇಳಿದರು.

ಸಂವಿಧಾನವೆಂಬ ಅಸ್ತ್ರವನ್ನು ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬ ಪ್ರಜ್ಞೆ ದೇಶವನ್ನು ಆಳುವವರಿಗೆ ಇರಬೇಕು. ಒಂದು ಕೋಮಿನವರಿಗೆ ಆದ್ಯತೆ ನೀಡಿ ಅವರ ರಕ್ಷಣೆಗಷ್ಟೇ ನಿಲ್ಲಬಾರದು. ನಾನು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಬಳಿಕ ಆ ಹುದ್ದೆಗೆ ಯಾರು ಎಂಬ ಪ್ರಶ್ನೆ ಮೂಡಿದೆ. ಉತ್ತಮ ನಾಯಕತ್ವ ಗುಣವುಳ್ಳ ಯಾವುದೇ ವ್ಯಕ್ತಿ ಪ್ರಧಾನಿ ಹುದ್ದೆ ಆಲಂಕರಿಸಬಹುದು.

Advertisement

ಅದಕ್ಕಾಗಿ ಚಿಂತಿಸುವ ಅಗತ್ಯ ಇಲ್ಲ. ಮೊದಲು ದೇಶಕ್ಕೆ ಒದಗಿರುವ ಗಂಡಾಂತರವನ್ನು ತಪ್ಪಿಸಬೇಕು ಎಂದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನೀಶ್‌ ಅಲಿ, ಮಹಾಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ಸಚಿವರಾದ ಪುಟ್ಟರಾಜು, ಮನಗೊಳಿ, ತಮ್ಮಣ್ಣ ಇತರರಿದ್ದರು.

ಕಾಂಗ್ರೆಸ್‌ಗೆ ಗೌಡರ ಟಾಂಗ್‌: ವಿಧಾನಸಭೆ ಚುನಾವಣೆ ವೇಳೆ “ಜೆಡಿಎಸ್‌ ಪಕ್ಷ ಬಿಜೆಪಿಯ ಬಿ ಟೀಮ್‌’ ಎಂದು ಆರೋಪ ಮಾಡಿದವರು ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಹೋರಾಡಿದವರೇ ಫ‌ಲಿತಾಂಶದ ಬಳಿಕ ದೆಹಲಿಗೆ ಬಂದು ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರು,’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು. ಜೆಡಿಎಸ್‌ ಬಿಜೆಪಿಯ ಬಿ ಟೀಮ್‌ ಎಂಬ ಆರೋಪ ಮಾಡಿದ್ದರಿಂದ ವ್ಯತಿರಿಕ್ತ ಫ‌ಲಿತಾಂಶ ಬಂತು. ಜೆಡಿಎಸ್‌ ಎಂದಿಗೂ “ಎ’ ಟೀಮ್‌. ರಾಜ್ಯದ ಜನತೆಯ ಟೀಮ್‌ಎಂದು ತಿಳಿಸಿದರು.

ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ: ಅಲ್ಪಸಂಖ್ಯಾತರ ಯುವ ಸಮೂಹದಲ್ಲಿ ಅಭದ್ರತೆ ಕಾಡುತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ ಕಡೆಯಿಂದ ಅಲ್ಪಸಂಖ್ಯಾತರರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ನೋವಿದೆ. ಆದಷ್ಟು ಬೇಗ ಅದಕ್ಕೆ ನ್ಯಾಯ ಒದಗಿಸಿಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಒಳಗೊಂಡಂತೆ ಜೆಡಿಎಸ್‌ನ ಎಲ್ಲಾ ನಾಯಕರು ಬಿಜೆಪಿ ಜತೆ ಹೋಗುತ್ತದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಾವು ಶೇ.100ಕ್ಕೆ 100ರಷ್ಟು ಜಾತ್ಯತೀತರು. ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ನಮಗೆ ಬದ್ಧತೆ ಇದೆ. ನಮ್ಮನ್ನು ನಂಬಿ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next