Advertisement

“ಕೌಶಲ್ಯ,ಶ್ರಮ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ’

12:56 PM Oct 14, 2017 | Team Udayavani |

ದೊಡ್ಡಬಳ್ಳಾಪುರ: ಇಂದಿನ ಪೀಳಿಗೆ ಸುಲಭದ ಕೆಲಸಗಳನ್ನು ಹುಡುಕುವಲ್ಲಿ ನಿರತರಾಗಿದ್ದು, ಕೈಗೆ ಸಿಕ್ಕ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಉದ್ಯೋಗಕ್ಕೆ ಬೇಕಾದ ಬೇಕಾದ ಕೌಶಲ್ಯ ಹಾಗೂ ಸಾಧನೆ ಶ್ರಮ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದರು.

Advertisement

ನಗರದ ಲಯನ್ಸ್‌ ಕ್ಲಬ್‌ ಬಿಲ್ಡಿಂಗ್‌ನಲ್ಲಿ ಶ್ರೀರಾಮ 9 ಆರೋಗ್ಯ ಸೇವೆಗಳ ಕೇಂದ್ರದ ಸಹಯೋಗದಲ್ಲಿ ಕೇಂದ್ರ ಸರ್ಕಾರದ ನ್ಯಾಷನಲ್‌ ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌, ಸ್ಕಿಲ್‌ ಇಂಡಿಯಾ ಎಜುಕ್ಯಾಂಪ್‌ ಮತ್ತು ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ ವತಿಯಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಪ್ರತಿಯೊಂದು ಕ್ಷೇತ್ರದಲ್ಲಿಯೂ ಉದ್ಯೋಗಾವಕಾಶ: ವಿದ್ಯಾವಂತ ಸಮುದಾಯದಿಂದ ಮಾತ್ರ ದೇಶದ ಅಭಿವೃದ್ಧಿ ಅಲ್ಲ. ಪ್ರಸ್ತುತ ಸಮಾಜದಲ್ಲಿ ಅನೇಕ ವ್ಯಕ್ತಿಗಳು ವಿದ್ಯಾಭ್ಯಾಸವೇ ಇಲ್ಲದೇ, ಅತ್ಯುನ್ನತ ಸ್ಥಾನ ಗಳಿಸಿದ್ದಾರೆ. ರೇಷ್ಮೆ ಉದ್ಯೋಗದಲ್ಲಿ ಕೋಟ್ಯಂತರ ರೂ. ಗಳಿಸುತ್ತಿರುವ ಬೆಳೆಗಾರರಿದ್ದಾರೆ. ಕೇವಲ ವಿದ್ಯಾಭ್ಯಾಸವೇ ಎಲ್ಲಾ ವಿಚಾರಕ್ಕೂ ಮಾನದಂಡವಾಗುವುದಿಲ್ಲ.

ಪರಿಶ್ರಮ ಪ್ರತಿಯೊಂದು ಕೆಲಸಕ್ಕೂ ಅಗತ್ಯ ವಾಗುತ್ತದೆ. ಆಸಕ್ತಿಯಿಂದ ಕಲಿತು, ತಮ್ಮ ಕ್ಷೇತ್ರದಲ್ಲಿ ಪರಿಣಿತಿ ಪಡೆದುಕೊಂಡು ಉನ್ನತ ಕೆಲಸಕ್ಕೆ ಹೋಗಬೇಕಾಗುತ್ತದೆ. ಪ್ರಧಾನಿ ಮೋದಿ ಅವರ ಕೌಶಲ್ಯ ಅಭಿವೃದ್ಧಿ ಯೋಜನೆ ನಿರುದ್ಯೋಗಿಗಳಿಗೆ ವರದಾನವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಉದ್ಯೋಗಾವಕಾಶಗಳು ಲಭ್ಯವಿದೆ. ಆದರೆ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಪಡೆದುಕೊಳ್ಳಬೇಕಾದ ಅಗತ್ಯವಿದ್ದು, ಕೌಶಲ್ಯ ಮೇಳಗಳು ಇದಕ್ಕೆ ಇಂಬು ನೀಡುತ್ತವೆ ಎಂದರು.

ಮನೆಗೆ ಆರ್ಥಿಕವಾಗಿ ಬೆನ್ನೆಲುಬುಗಳಾಗಿ: ಶ್ರೀರಾಮ ಆಸ್ಪತ್ರೆ ನಿರ್ದೇಶಕ ಡಾ.ಎಚ್‌. ಜಿ.ವಿಜಯಕುಮಾರ್‌ ಮಾತನಾಡಿ, ಆಧುನಿಕ ಜಗತ್ತು ಕಾಲಕಾಲಕ್ಕೆ ಬದಲಾಗುತ್ತಾ ಹೋದಂತೆ ಪ್ರಸ್ತುತ ಪೀಳಿಗೆಯ ಜನರಿಗೆ ಕೌಶಲ್ಯ ಅತ್ಯಗತ್ಯವಾಗಿವೆ. ವಿವಿಧ ಕ್ಷೇತ್ರಗಳಲ್ಲಿನ ಕೌಶಲ್ಯಗಳನ್ನು ಕೇಂದ್ರ ಸರ್ಕಾರ ತರಬೇತಿ ನೀಡುತ್ತಿರುವುದು ಅತ್ಯಂತ ಉಪಯುಕ್ತವಾಗಿದೆ. ಹಿಂದೆ ಯಾವುದೇ ಕೌಶಲ್ಯಗಳಿಲ್ಲದೇ ಮಾಡುತ್ತಿದ್ದ ಕೆಲಸಗಳು ಅನಾಹುತಗಳಿಗೆ ಎಡೆ ಮಾಡಿಕೊಡುತ್ತಿದ್ದವು. ಆದರೆ ಪ್ರಸ್ತುತ ಸರ್ಕಾರದ ವತಿಯಿಂದ ಒದಗಿಸುತ್ತಿರುವ ಕೌಶಲ್ಯ ತರಬೇತಿಯಿಂದಾಗಿ ಸಮಾಜಕ್ಕೆ ಸಾಕಷ್ಟು ಉಪಯುಕ್ತವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ನಿರುದ್ಯೋಗಿಗಳಾಗದೆ, ಮನೆಗೆ ಆರ್ಥಿಕವಾಗಿ ಬೆನ್ನೆಲುಬುಗಳಾಗಬೇಕು ಎಂದರು.

Advertisement

ಮೊಬೈಲ್‌ಗೆ ಅಂಟಿಕೊಂಡು ಮೌಲ್ಯಮರೆ: ಶಿಕ್ಷಕ ಡಾ.ಹುಲಿಕಲ್‌ ನಟರಾಜ್‌ ಮಾತನಾಡಿ, ಸಮಾಜದಲ್ಲಿ ಪ್ರತಿಯೊಂದಕ್ಕೂ ಹಣ ಅಗತ್ಯವಾಗಿದೆ. ಯುವಕರು ಹಣ ಸಂಪಾದನೆಯ ಒತ್ತಡದಲ್ಲಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಮೊಬೈಲ್‌ಗ‌ಳಿಗೆ ಅಂಟಿ ಕೊಂಡು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಯುವ ಪೀಳಿಗೆ ಸಮಾಜಕ್ಕೆ ಏನು ಕೊಡುಗೆ ನೀಡುತ್ತಿದ್ದೇನೆ ಎನ್ನುವುದರ ಕಡೆ ಗಮನ ನೀಡಬೇಕು ಎಂದು ಹೇಳಿದರು.

ಸ್ಕಿಲ್‌ ಡೆವಲಪ್‌ಮೆಂಟ್‌ ಕಾರ್ಯಕ್ರಮದ ರಾಜ್ಯ ಮುಖ್ಯಸ್ಥೆ ಸುಮತಿ, ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ತರಬೇತಿ ಪಡೆದಿದ್ದಾರೆ. ಕೇವಲ ಪ್ರಮಾಣ ಪತ್ರಕ್ಕಾಗಿ ತರಬೇತಿ ಪಡೆಯದೆ, ಕೌಶಲ್ಯ ಪಡೆದಿದ್ದಾರೆ. ಉತ್ತಮ ಫ‌ಲಿತಾಂಶ ಗಳಿಸಿಕೊಂಡು ಇದೀಗ ಉತ್ತಮ ಉದ್ಯೋಗ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜನರಲ್‌ ಡ್ನೂಟಿ ಅಸಿಸ್ಟೆಂಟ್‌ ಹಾಗೂ ಹೋಮ್‌ ಹೆಲ್ತ್‌ ಏಯ್ಡ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸ್ಕಿಲ್‌ ಡೆವಲೆಪ್‌ ಮೆಂಟ್‌ ಯೋಜನೆ ಅಧ್ಯಕ್ಷ ಕೀರ್ತಿ ವೆಂಕಟ್‌, ಇಂದ್ರಜಿತ್‌ ಮುಖರ್ಜಿ, ಲಯನ್‌ ಶಿವಣ್ಣ, ಶಿಕ್ಷಕ ರಾಮಮೂರ್ತಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next