Advertisement

ಚಕ್ರ ಬಡ್ಡಿ ಮನ್ನಾ ? ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ನಿರ್ಧಾರ

01:56 AM Oct 04, 2020 | mahesh |

ಹೊಸದಿಲ್ಲಿ: ಲಾಕ್‌ಡೌನ್‌ ಅವಧಿಯಲ್ಲಿ ಮೊರಟೋರಿಯಂ (ಸಾಲ ಕಂತು ವಿಸ್ತರಣೆ) ಸೌಲಭ್ಯ ಪಡೆದಿದ್ದ ಸಾಲ ಗ್ರಾಹಕರಿಗೆ ಕೇಂದ್ರ ಸರಕಾರ ನೆಮ್ಮದಿ ನೀಡಿದೆ. ಅವರ ಸಾಲದ ಮೇಲಿನ “ಚಕ್ರಬಡ್ಡಿ’ಯನ್ನು ಮನ್ನಾ ಮಾಡುವುದಾಗಿ ಹೇಳಿದೆ. ಆದರೆ 2 ಕೋಟಿ ರೂ.ಗಳ ವರೆಗೆ ಸಾಲ ಪಡೆದವರಿಗೆ ಮಾತ್ರ ಈ ಸೌಲಭ್ಯ ಅನ್ವಯಿಸಲಿದೆ ಎಂದೂ ತಿಳಿಸಿದೆ.

Advertisement

ಈ ಸಂಬಂಧ ಶುಕ್ರವಾರವೇ ಕೇಂದ್ರ ಹಣಕಾಸು ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿದೆ. ನಾವು ಗ್ರಾಹಕರಿಗೆ ಹೊರೆಯಾಗದಂತೆ ಮತ್ತು ಬ್ಯಾಂಕ್‌ಗಳಿಗೂ ನಷ್ಟವಾಗದಂತೆ ಒಂದು ಸೂತ್ರ ರೂಪಿಸಿದ್ದೇವೆ. ಅದರಂತೆ ಗ್ರಾಹಕರ ಮೇಲೆ ಹಾಕಲಾಗಿರುವ ಚಕ್ರಬಡ್ಡಿಯನ್ನು ಮನ್ನಾ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದೆ.

ಸೋಮವಾರ (ಅ. 5) ಸು. ಕೋರ್ಟ್‌ನಲ್ಲಿ ಈ ಸಂಬಂಧಿ ಅರ್ಜಿಯ ಅಂತಿಮ ವಿಚಾರಣೆ ನಡೆಯಲಿದ್ದು, ತೀರ್ಪು ಪ್ರಕಟವಾಗಲಿದೆ. ಸೆಪ್ಟಂಬರ್‌ ಕೊನೆಯ ವಾರವಷ್ಟೇ ಸುಪ್ರೀಂ ಕೋರ್ಟ್‌, ಗ್ರಾಹಕರಿಗೆ ಹೊರೆಯಾಗದಂತೆ ನಿಯಮ ರೂಪಿಸಿ ಎಂದು ಕೇಂದ್ರಕ್ಕೆ ಸೂಚಿಸಿತ್ತು. ಅ. 5ರಂದು ಕೊನೆಯ ವಿಚಾರಣೆ ನಡೆಸುತ್ತೇವೆ, ಮತ್ತೆ ಮುಂದೂಡಿಕೆ ಇಲ್ಲ ಎಂದಿತ್ತು.

ಕಂತು ಕಟ್ಟಿದವರಿಗೂ ಪ್ರಯೋಜನ?
ಮೊರೊಟೋರಿಯಂ ಪಡೆದವರಿಗೆ ಮಾತ್ರ ಪ್ರಯೋಜನ ನೀಡಿದರೆ ಲಾಕ್‌ಡೌನ್‌ ಅವಧಿಯಲ್ಲೂ ನಿಯಮಿತವಾಗಿ ಸಾಲದ ಕಂತು ಕಟ್ಟಿದವರನ್ನು ಈ ಸೌಲಭ್ಯದಿಂದ ವಂಚಿಸಿದಂತಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಕೇಂದ್ರ ಸರಕಾರವು ಲಾಕ್‌ಡೌನ್‌ ಅವಧಿಯ 6 ತಿಂಗಳಿಗೆ ಅನ್ವಯವಾಗುವಂತೆ ಮೂಲ ಸಾಲದ ಮೇಲಿನ ಚಕ್ರಬಡ್ಡಿಯನ್ನು ಕಡಿತ ಮಾಡುವ ಸಂಭವವಿದೆ ಎಂದು ಕೆಲವು ವಿತ್ತ ತಜ್ಞರು ಹೇಳಿದ್ದಾರೆ.

ಏನಿದು ಚಕ್ರಬಡ್ಡಿ ?
ಸಾಲ 100 ರೂ. ಇದ್ದು, ಮಾಸಿಕ ಕಂತು 10 ರೂ. ಇದೆ ಎಂದಿಟ್ಟುಕೊಳ್ಳಿ. ಲಾಕ್‌ಡೌನ್‌ನ ಎಪ್ರಿಲ್‌ನಲ್ಲಿ ಕಂತು 10 ರೂ. ಕಟ್ಟಲು ಆಗಿಲ್ಲ. ಮೇಯಲ್ಲಿ ಸಾಲಕ್ಕೆ ಬಡ್ಡಿ ವಿಧಿಸುವಾಗ ಬ್ಯಾಂಕ್‌, ಮೂಲ ಸಾಲ ಮತ್ತು ಹಿಂದಿನ ತಿಂಗಳ ಬಾಕಿ 10 ರೂ. ಸೇರಿಸಿ 110 ರೂ.ಗಳಿಗೆ ಬಡ್ಡಿ ವಿಧಿಸುತ್ತದೆ. ಇದರಿಂದ ಲಾಕ್‌ಡೌನ್‌ನ 6 ತಿಂಗಳುಗಳಲ್ಲಿ 60 ರೂ. ಬಾಕಿ ಉಳಿದಂತೆ ಆಗುತ್ತದೆ. ಆಗ 160 ರೂ.ಗಳಿಗೆ ಬಡ್ಡಿ ವಿಧಿಸಲಾಗುತ್ತದೆ. ಈಗ ಚಕ್ರಬಡ್ಡಿ ಮನ್ನಾದಿಂದ ಗ್ರಾಹಕರಿಗೆ ಪ್ರಯೋಜನಗಳಾಗುತ್ತವೆ. ಕಂತುಗಳ ಸಂಖ್ಯೆ ಕಡಿಮೆಯಾಗಬಹುದು ಅಥವಾ ಕಂತಿನ ಹಣದಲ್ಲೇ ಕಡಿತ ಮಾಡಬಹುದು ಎಂದು ಆರ್ಥಿಕ ತಜ್ಞ, ಮಣಿಪಾಲದ ಜಯದೇವ ಪ್ರಸಾದ ಮೊಳೆಯಾರ ಹೇಳಿದ್ದಾರೆ.

Advertisement

7 ಸಾವಿರ ಕೋ.ರೂ. ನಷ್ಟ?
ವಿತ್ತ ತಜ್ಞರ ಪ್ರಕಾರ ಚಕ್ರಬಡ್ಡಿ ಮನ್ನಾ ಸೌಲಭ್ಯ ಶೇ.30ರಿಂದ 40ರಷ್ಟು ಸಾಲಗಾರರಿಗೆ ಸಿಗಲಿದೆ. ಇದರಿಂದ ಸರಕಾರಕ್ಕೆ 5ರಿಂದ 7 ಸಾವಿರ ಕೋ.ರೂ.ವರೆಗೆ ನಷ್ಟವಾಗಲಿದೆ. ಸದ್ಯ ಹೇಗೆ ಈ ಚಕ್ರಬಡ್ಡಿ ಮನ್ನಾ ನಿಯಮ ಅನ್ವಯಿಸಲಾಗುತ್ತದೆ ಎಂಬ ಬಗ್ಗೆ ಸರಕಾರವು ಏನೂ ಹೇಳಿಲ್ಲ. ಸರಕಾರವು ಸಂಸತ್ತಿನಲ್ಲಿ ಪರಿಷ್ಕೃತ ಅಂದಾಜು ಪಟ್ಟಿ ರೂಪಿಸಿ ಒಪ್ಪಿಗೆ ಪಡೆಯಬೇಕಾಗಿರುವುದರಿಂದ ಈಗ ಏನೂ ಹೇಳಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಪೂರ್ಣ ಮಾಹಿತಿ ಇಲ್ಲ
ಕೇಂದ್ರವು ಸದ್ಯ ಚಕ್ರಬಡ್ಡಿ ಮನ್ನಾ ಬಗ್ಗೆ ಪ್ರಸ್ತಾವನೆಯಂಥ ಅಫಿದ‌ವಿತ್‌ ಸಲ್ಲಿಸಿದೆ. ಸಾಲಗಾರರು, ಕಂತು ಕಟ್ಟಿದವರಿಗೆ ಪ್ರಯೋಜನ ಏನು ಎಂಬುದು ತೀರ್ಪಿನ ಬಳಿಕ ಸ್ಪಷ್ಟವಾಗಬಹುದು.

ಕೇಂದ್ರದ ಯೂ ಟರ್ನ್
ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಕೇಂದ್ರ ಸರಕಾರವು ಬಡ್ಡಿ ಮನ್ನಾ ಸಾಧ್ಯವಿಲ್ಲ ಎಂದಿತ್ತು. ಮನ್ನಾ ಮಾಡಿದರೆ ಬ್ಯಾಂಕ್‌ಗಳು ದಿವಾಳಿಯಾಗುತ್ತವೆ ಎಂಬ ಆತಂಕವನ್ನೂ ವ್ಯಕ್ತಪಡಿಸಿತ್ತು. ಆದರೆ ಅಫಿದವಿತ್‌ ಸಲ್ಲಿಕೆ ವೇಳೆ ಕೇಂದ್ರವು ಯೂಟರ್ನ್ ಹೊಡೆದಿದ್ದು, ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಯಾರಿಗೆ ಲಾಭ?
ಚಕ್ರಬಡ್ಡಿ ಮನ್ನಾ ಸಂದರ್ಭದಲ್ಲಿ ಕೇಂದ್ರ ಸರಕಾರವು ಸಿರಿವಂತರ ಸಾಲ ಮತ್ತು ದೊಡ್ಡ ಉದ್ದಿಮೆದಾರರು ಮಾಡಿರುವ ಸಾಲವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಆದರೆ ಲಾಕ್‌ಡೌನ್‌ ವೇಳೆ ಅತ್ಯಂತ ಹೆಚ್ಚು ಸಂಕಷ್ಟಕ್ಕೀಡಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆಮ್ಮದಿ ನೀಡಲು ಮುಂದಾಗಿದೆ. ಈ ಉದ್ಯಮಗಳ ಮಾಲಕರ ಜತೆಗೆ ಶಿಕ್ಷಣ ಸಾಲ, ಗೃಹ ಸಾಲ, ಗ್ರಾಹಕ ಉತ್ಪನ್ನಗಳ ಮೇಲಿನ ಸಾಲ, ಕ್ರೆಡಿಟ್‌ ಕಾರ್ಡ್‌ಗಳ ಬಾಕಿ, ವಾಹನ ಸಾಲ, ವೈಯಕ್ತಿಕ ಸಾಲ ಮತ್ತು ಬಳಕೆ ಸಾಲ ಪಡೆದವರಿಗೂ ಸರಕಾರದ ಈ ನಿರ್ಧಾರದಿಂದ ಅನುಕೂಲವಾಗಲಿದೆ.

8 ವಿಧಗಳ ಸಾಲ
1. ಎಂಎಸ್‌ಎಂಇ ಸಾಲಗಳು
2. ಶೈಕ್ಷಣಿಕ ಸಾಲ
3. ಗೃಹ ಸಾಲ
4. ಗ್ರಾಹಕ ಉಪಯೋಗಿ ವಸ್ತುಗಳ ಸಾಲ
5. ಕ್ರೆಡಿಟ್‌ ಕಾರ್ಡ್‌ ಬಾಕಿ
6. ಕಾರು ಸಾಲ
7. ವೃತ್ತಿನಿರತರ ವೈಯಕ್ತಿಕ ಸಾಲ
8. ಬಳಕೆ ಸಾಲ (ಕನ್ಸಪ್ಶನ್‌ ಲೋನ್‌)

2 ಕೋಟಿ ರೂ. ವರೆಗಿನ ಸಾಲಕ್ಕೆ ಮಾತ್ರ ಅನ್ವಯ
7,000 ಕೋಟಿ ರೂ. – ಬಡ್ಡಿ ಮನ್ನಾದಿಂದ ಆಗುವ ನಷ್ಟ
6 ಕೋಟಿ – ಜನರಿಗೆ ಅನುಕೂಲ
30@% ಸಾಲಗಾರರಿಗೆ ಈ ಸೌಲಭ್ಯ ಅನ್ವಯ

Advertisement

Udayavani is now on Telegram. Click here to join our channel and stay updated with the latest news.

Next