ಪ್ರೇಮ್ ನಿರ್ದೇಶನದ ಚಿತ್ರ ಅಂದಮೇಲೆ ಅಲ್ಲೊಂದು ಹೊಸತನ ಇದ್ದೇ ಇರುತ್ತೆ. ಅದರಲ್ಲೂ ಶಿವರಾಜಕುಮಾರ್ ಹಾಗೂ ಸುದೀಪ್ ಕಾಂಬಿನೇಷನ್‌ನ ಮೊದಲ ಚಿತ್ರ ಅಂದಮೇಲೆ ಕೇಳಬೇಕೇ? ಹೌದು, “ದಿ ವಿಲನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರೇಮ್ ಟೀಸರ್ ತೋರಿಸಲು ಟಿಕೆಟ್ ನಿಗದಿಪಡಿಸಿದ್ದು ವಿಶೇಷ. ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸಿ, ತಮ್ಮ ಹೀರೋಗಳ ಟೀಸರ್ ವೀಕ್ಷಿಸಿದ್ದು ಮತ್ತೂಂದು ವಿಶೇಷ. ಅಷ್ಟಕ್ಕೂ ಪ್ರೇಮ್ ಟಿಕೆಟ್ ಇಟ್ಟಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕರ ಸಹಾಯಕ್ಕಾಗಿ. ಟಿಕೆಟ್‌ನಿಂದ ಗಳಿಸಿದ ಹಣವನ್ನು ಹಿರಿಯ ನಿರ್ದೇಶಕ ಎ.ಟಿ.ರಘು, ಬೂದಾಳ್ ಕೃಷ್ಣಮೂರ್ತಿ, ಹಿರೇಮಠ ಹಾಗೂ ಆನಂದ್.ಪಿ.ರಾಜು ವಿತರಣೆ ಮಾಡಲಾಯಿತು.
ಅದಕ್ಕೂ ಮುನ್ನ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, “ನನಗೆ ತಿಳಿದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಟೀಸರ್ ವೀಕ್ಷಿಸಲು ಅಭಿಮಾನಿಗಳು ಟಿಕೆಟ್ ಖರೀದಿಸಿರುವುದು ಇದೇ ಮೊದಲು ಎನಿಸುತ್ತದೆ. ಕನ್ನಡ ಚಿತ್ರರಂಗ ಈಗ ಬೇರೆ ಭಾಷೆಯ ಚಿತ್ರರಂಗಕ್ಕೂ ಪೈಪೋಟಿ ನೀಡುವಂತೆ ಬೆಳೆದಿದೆ. ಈಗ ಇಲ್ಲಿ ಉತ್ತಮ ಚಿತ್ರಗಳು ತಯಾರಾಗುತ್ತಿವೆ. “ದಿ ವಿಲನ್’ ಚಿತ್ರದಲ್ಲಿ ಕನ್ನಡದ ಇಬ್ಬರು ದೊಡ್ಡ ಸ್ಟಾರ್‌ಗಳನ್ನು ತೋರಿಸಿರುವುದು ಸುಲಭದ ಮಾತಲ್ಲ. ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಇನ್ನು, ಐದು ಪರದೆಗಳಲ್ಲೂ ಏಕಕಾಲಕ್ಕೆ ಟೀಸರ್ ಬಿಡುಗಡೆ ಮಾಡಿ, ಟಿಕೆಟ್‌ನಿಂದ ಬಂದ ಹಣವನ್ನು ಹಿರಿಯ ನಿರ್ದೇಶಕರ ಸಹಾಯಕ್ಕೆ ಬಳಿಸುತ್ತಿರುವ ನಿರ್ಮಾಪಕರ ಯೋಚನೆಯೂ ಹೆಮ್ಮೆ ಪಡುವಂಥದ್ದು. ಈ ಚಿತ್ರ ಯಶಸ್ಸು ಗಳಿಸಲಿ’ ಎಂದು ಶುಭಕೋರಿದರು ಸಿಎಂ.
ಅಂದು ಶಿವರಾಜಕುಮಾರ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದರು. “ನಾನು ಮೊದಲ ಸಲ ಸುದೀಪ್ ಜೊತೆಗೆ ತೆರೆ ಹಂಚಿಕೊಂಡಿದ್ದೇನೆ. ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ನಾವು ನಮ್ಮ ಕೆಲಸ ಮಾಡಿದ್ದೇವೆ. ಇನ್ನೇನಿದ್ದರೂ ಅಭಿಮಾನಿಗಳು ಚಿತ್ರ ನೋಡಿ ತೀರ್ಪು ಕೊಡಬೇಕು’ ಅಂದರು ಶಿವರಾಜಕುಮಾರ್.
ಸುದೀಪ್ ಚಿತ್ರವೊಂದರ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಿದ್ದರಿಂದ ಅವರು ಅಲ್ಲಿಂದಲೇ ವೀಡಿಯೋ ಕಳುಹಿಸಿ, ಆ ಮೂಲಕ ತಂಡಕ್ಕೆ ಹಾಗೂ ಟೀಸರ್ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು. ನಿರ್ದೇಶಕ ಪ್ರೇಮ್ ಕೂಡ ಅಂದು ಖುಷಿಯಲ್ಲಿದ್ದರು. “ನಾನು ಟೀಸರ್ ತೋರಿಸಲು ಟಿಕೆಟ್ ನಿಗದಿಪಡಿಸಿದ್ದು ತೊಂದರೆಯಲ್ಲಿರುವ ಹಿರಿಯ ನಿರ್ದೇಶಕರ ಸಹಾಯಕ್ಕಾಗಿ ಮಾತ್ರ. ಯಾರೂ ಅನ್ಯತಾ ಭಾವಿಸಬಾರದು. ಸರ್ಕಾರ ನಿರ್ದೇಶಕ ಸಂಘಕ್ಕೆ ಒಂದಷ್ಟು ಅನುದಾನ ಒದಗಿಸುವ ಮೂಲಕ ಅನಾರೋಗ್ಯದಲ್ಲಿರುವ ನಿರ್ದೇಶಕರ ಸಹಾಯಕ್ಕೆ ಮುಂದಾಗಬೇಕು ಎಂಬ ಮನವಿ ಇಟ್ಟರು. ಸುಮಾರು 1.47 ನಿಮಿಷದ ಎರಡು ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಎಲ್ಲೆಡೆ ಚಪ್ಪಾಳೆ, ಕೇಕೆ ಮುಗಿಲು ಮುಟ್ಟಿತ್ತು. ಅಂದು ನಿರ್ಮಾಪಕ ಸಿ.ಆರ್.ಮನೋಹರ್ ಹಾಗೂ ಚಿತ್ರತಂಡ ವೇದಿಕೆಯೇರಿ ಸಿನಿಮಾ ಬಗ್ಗೆ ಮಾತಾಡುವ ಹೊತ್ತಿಗೆ ಸಮಯ ಮೀರಿತ್ತು.