Advertisement

ಗುರುವಿನಿಂದ ಮಾತ್ರ ಅಂಧಕಾರ ದೂರ: ಸಿದ್ದಲಿಂಗ ಶ್ರೀ

09:55 PM Sep 08, 2019 | Team Udayavani |

ನೆಲಮಂಗಲ: ಉತ್ತಮ ಗುರುವಿನಿಂದ ಮಾತ್ರ ಅಂಧಕಾರವನ್ನು ಹೊಗಲಾಡಿಸಿ ಬೆಳಕು ನೀಡಲು ಸಾಧ್ಯ ಎಂದು ತುಮಕೂರು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ ಪವಾಡ ಬಸವಣ್ಣ ದೇವರ ಮಠದಲ್ಲಿ ಬಸವೇಶ್ವರ ಸಮೂಹ ವಿದ್ಯಾಸಂಸ್ಥೆ ಆಯೋಜಿಸಿದ್ದ ಲಿಂಗೈಕ್ಯ ಸದಾಶಿವ ಸ್ವಾಮೀಜಿಯ ಸ್ಮರಣೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

Advertisement

ಜಗತ್ತು ಸ್ಮರಿಸುವಂತೆ ತ್ಯಾಗ ಮತ್ತು ಸೇವೆಯನ್ನೆ ಉಸಿರಾಗಿಸಿಕೊಂಡಿದ್ದ ಲಿಂಗೈಕ್ಯ ಸದಾಶಿವ ಸ್ವಾಮೀಜಿ ಅವರು ಸಮಾಜದ ಪ್ರೀತಿಗೆ ಪಾತ್ರರಾಗಿದ್ದವರು. ಬದುಕಿದ್ದಷ್ಟು ದಿನಗಳಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ಮಂಟಪದಂತಿದ್ದ ಮಠವನ್ನು ಸುಸ್ಥಿತಿಗೆ ತಂದವರು. ಶ್ರೀಗಳು ಭೌತಿಕವಾಗಿ ಇಲ್ಲದೇ ಹೋದರೂ ಭಾವನಾತ್ಮಕವಾಗಿ ಉಳಿದಿದ್ದಾರೆ ಎಂದು ಸ್ಮರಿಸಿದರು.

ವಿದ್ಯಾವಂತ ಜನತೆಗೆ ಉದ್ಯೋಗವಕಾಶ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಉದ್ದೇಶದಿಂದ ತಮ್ಮ ಇಡೀ ಬದುಕನ್ನು ಮೀಸಲಿಟ್ಟ ಪೂಜ್ಯರ ಕಾರ್ಯ ಅವಿಸ್ಮರಣೀಯ. ಶ್ರೀಗಳು ಲಿಂಗೈಕ್ಯವಾದ ನಂತರ ಮಠದ ಉತ್ತರಾಧಿಕಾರಿಯಾಗಿ ಬಂದ ಸಿದ್ಧಲಿಂಗ ಸ್ವಾಮೀಜಿ ನೂರು ಪಟ್ಟು ಮಠವನ್ನು ಅಭಿವೃದ್ಧಿಗೊಳಿಸಿ ಶೈಕ್ಷಣಿಕ ಹಾಗೂ ಧಾರ್ಮಿಕ ಕೇಂದ್ರವನ್ನಾಗಿಸಿರುವುದು ಪ್ರಶಂಸನೀಯ ಎಂದರು.

ಬೆಟ್ಟಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಸಮಾಜದ ಎಲ್ಲ ರೋಗಳಿಗೂ ಮದ್ದು ನೀಡುವ ಶಕ್ತಿ ಗುರುವಿಗೆ ಇದೆ. ಸಮರ್ಥ ಗುರುವಿನ ಮಾರ್ಗದರ್ಶನದ ಅಗತ್ಯತೆ ಆಧುನಿಕ ಯುಗಕ್ಕಿದೆ. ಅದರಂತೆ ಶ್ರೀಗಂಧದ ವ್ಯಕ್ತಿತ್ವ ಹೊಂದಿದ್ದ ಲಿಂಗೈಕ್ಯ ಸದಾಶಿವ ಸ್ವಾಮೀಜಿ ಸಮಾಜದ ಉನ್ನತಿಗೆ ಶ್ರಮಿಸಿದವರು. ಲೌಕಿಕ ಶಿಕ್ಷಣದ ಶಿಕ್ಷಕ ರಾಧಕೃಷ್ಣನ್‌ ಹಾಗೂ ಧಾರ್ಮಿಕ ಶಿಕ್ಷಣ ನೀಡಿದ ಲಿಂಗೈಕ್ಯ ಸದಾಶಿವ ಸ್ವಾಮೀಜಿ ಇಬ್ಬರನ್ನು ಸ್ಮರಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ ಎಂದರು.

ಸಾಮೂಹಿಕ ಲಿಂಗಪೂಜೆ: ಲಿಂಗೈಕ್ಯ ಸದಾಶಿವ ಸ್ವಾಮೀಜಿ ಅವರ ಸ್ಮರಣೋತ್ಸವ ಪ್ರಯುಕ್ತ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರಿಂದ ಸಾಮೂಹಿಕ ಲಿಂಗಪೂಜೆ ಆಯೋಜಿಸಲಾಗಿತ್ತು. ಹಾಗೂ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಬೋಧಕ ಬೋಧಕೇತರ ವರ್ಗದವರು ಶ್ರೀಗಳ ಆಶೀರ್ವಾದ ಪಡೆದರು.

Advertisement

ಬಹುಮಾನ ವಿತರಣೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಪವಾಡ ಬಸವಣ್ಣ ದೇವರಮಠದ ಸಿದ್ಧಲಿಂಗಸ್ವಾಮೀಜಿ, ಕಂಚ್‌ಗಲ್‌ ಬಂಡೆಮಠದ ಬಸವಲಿಂಗ ಸ್ವಾಮೀಜಿ, ವನಕಲ್ಲುಮಠದ ಬಸವರಮಾನಂದ ಸ್ವಾಮೀಜಿ ,ವೀರಶೈವ ಮಹಾಸಭಾ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಎನ್‌.ಎಸ್‌.ನಟರಾಜು, ತಾಲೂಕು ಅಧ್ಯಕ್ಷ ಎನ್‌.ಎಸ್‌ ಶಾಂತಕುಮಾರ್‌, ಉಪಾಧ್ಯಕ್ಷ ರೇವಣಸಿದ್ಧಯ್ಯ, ಖಜಾಂಚಿ ಸತೀಶ್‌, ಯುವ ಘಟಕದ ಅಧ್ಯಕ್ಷ ಮರುಳಸಿದ್ಧಯ್ಯ, ಮಹಿಳಾ ಘಟಕ ಅಧ್ಯಕ್ಷೆ ವೇದಾವತಿ,

ಪುರಸಭೆ ಸದಸ್ಯರಾದ ಸಿ.ಪ್ರದೀಪ್‌, ಎನ್‌.ಎಸ್‌.ಪೂರ್ಣಿಮಾ, ಮುಖಂಡ ಎನ್‌.ಎಸ್‌.ಜಗದೀಶ್‌, ಗಂಗಾಧರ್‌, ಕೆ.ಕೃಷ್ಣಪ್ಪ, ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗರಾಜು, ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಎಂ.ಆರ್‌ ವೀರಪ್ಪಾಜಿ, ಡಾ.ರುದ್ರಮಹೇಶ್‌, ಎಚ್‌.ಎನ್‌.ಚಂದ್ರಶೇಖರಪ್ಪ, ಡಿ.ಜಿ.ರೇಖಾ, ಎಚ್‌.ಎಸ್‌.ನೀಲಾ, ಮುದ್ದಬಸವಯ್ಯ, ಎಚ್‌.ಎಸ್‌ ನಿರ್ಮಲಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next