ಹೊಸದಿಲ್ಲಿ : ಮುಕೇಶ್ ಅಂಬಾನಿ ಅವರ ರಿಲಯನ್ಸ್ ಫೌಂಡೇಶನ್ ಸ್ಥಾಪಿಸಲಿರುವ ಜಿಯೋ ಇನ್‌ಸ್ಟಿಟ್ಯೂಟ್‌ಗೆ ಕೇಂದ್ರ ಸರಕಾರ ಈಗಲೇ ದೇಶದ ಆರು ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್ (ಅತ್ಯುತ್ಕೃಷ್ಟ ವಿದ್ಯಾಲಯ) ಪಟ್ಟಿಗೆ ಸೇರಿಸುವುದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿವಾದ ಸೃಷ್ಟಿಸಿದೆ.
ಇನ್ನೂ ಸ್ಥಾಪನೆಯೇ ಆಗದಿರುವ ವಿದ್ಯಾಲಯಕ್ಕೆ ಇಷ್ಟೊಂದು ದೊಡ್ಡ ಸ್ಥಾನಮಾನವನ್ನು ಕೇಂದ್ರ ಸರಕಾರ ಕೊಟ್ಟಿರುವುದಾದರೂ ಯಾವ ನೆಲೆಯಲ್ಲಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಲಾಗುತ್ತಿದೆ.
ಆದರೆ ಸಾಮಾಜಿಕ ಮಾಧ್ಯಮಗಳಲ್ಲಿನ ಈ ವಿವಾದವು ಕೆಲ ಅಪಪ್ರಚಾರದ ಫಲವಾಗಿದೆಯೇ ಹೊರತು ವಾಸ್ತವತೆಯನ್ನು ತಿಳಿದುಕೊಂಡದ್ದಲ್ಲ ಎಂದು ಸರಕಾರ ಸಮಜಾಯಿಷಿಕೆ ನೀಡಿದೆ.
ದೇಶದ ಆರು ಅತ್ಯುತ್ಕೃಷ್ಟ ವಿದ್ಯಾಲಯಗಳ (ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್) ಪಟ್ಟಿಯಲ್ಲಿ ಜಿಯೋ ಇನ್‌ಸ್ಟಿಟ್ಯೂಟ್‌ಗೆ ಸ್ಥಾನಮಾನ ಸಿಕ್ಕಿರುವುದು ಹೇಗೆಂಬುದಕ್ಕೆ ಕೇಂದ್ರ ಸರಕಾರ ಕೊನೆಗೂ ನೀಡಿರುವ ಸ್ಪಷ್ಟೀಕರಣ ಹೀಗಿದೆ :
Related Articles
ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್ ಎಂಬ ಅರ್ಹತೆ ಪಡೆಯುವುದಕ್ಕೆ ಇರುವ ಎಲ್ಲ ಮಾನದಂಡಗಳಿಗೆ ಅನುಗುಣವಾಗಿ ವಿದ್ಯಾಲಯವನ್ನು ಸ್ಥಾಪಿಸುವ ಪ್ರವರ್ತನ ಸಂಸ್ಥೆಯ ಅಧಿಕೃತ ಪ್ರಸ್ತಾವವೇ ಈ ಮಾನ್ಯತೆಯನ್ನು ಪಡೆಯಲು ಸಾಕಾಗುತ್ತದೆ ಎಂದು ಸರಕಾರ ಹೇಳಿದೆ.
ಇನ್‌ಸ್ಟಿಟ್ಯೂಶನ್ ಆಫ್ ಎಮಿನೆನ್ಸ್ ಸ್ಥಾಪಿಸ ಬಯಸುವ ಪ್ರವರ್ತನ ಸಂಸ್ಥೆಗೆ ಕೇಂದ್ರ ಸಚಿವಾಲಯವು ಲೆಟರ್ ಆಫ್ ಇಂಟೆಂಟ್ (ಉದ್ದೇಶ ದೃಢ ಪತ್ರ) ಜಾರಿಗೊಳಿಸಿದ ಮೂರು ವರ್ಷಗಳ ಒಳಗೆ ಪ್ರಸ್ತಾಪಿತ ಸ್ಥಾನಮಾನದ ವಿದ್ಯಾಲಯವನ್ನು ಸ್ಥಾಪಿಸುವ ಬದ್ಧತೆಯು ಪ್ರವರ್ತನ ಸಂಸ್ಥೆಗೆ ಇರುತ್ತದೆ ಎಂದು ಸರಕಾರ ಹೇಳಿದೆ.