Advertisement

ಮೀನು ಇಳಿಸಲು 30 ಬೋಟ್‌ಗಳಿಗೆ ಮಾತ್ರ ಅವಕಾಶ

11:39 PM May 09, 2020 | Sriram |

ಮಲ್ಪೆ /ಗಂಗೊಳ್ಳಿ: ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸಲು ಷರತ್ತುಬದ್ಧ ಅನುಮತಿ ದೊರೆತ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳುತ್ತಿದೆ.

Advertisement

ಕಳೆದ 47 ದಿನಗಳ ಬಳಿಕ ಶನಿವಾರದಿಂದ ಬೆರಳೆಣಿಕೆಯ ಬೋಟುಗಳು ಮೀನು ಬೇಟೆಗೆ ತೆರಳಲು ಸಜ್ಜಾಗುತ್ತಿದ್ದು ಬೋಟುಗಳಿಗೆ ಮಂಜುಗಡ್ಡೆ ತುಂಬಿಸುವ ಹಾಗೂ ಇನ್ನಿತರ ಸಿದ್ಧತೆಯನ್ನು ಮಾಡಿಕೊಂಡಿದ್ದು, ಶನಿವಾರ ರಾತ್ರಿ ಅಥವಾ ರವಿವಾರದಿಂದ ಕಡಲಿಗಿಳಿಯಲಿವೆ.

ಮೀನುಗಾರಿಕೆ ಋತು ಆರಂಭದ ದಿನದಿಂದಲೂ ಮೀನಿನ ಕ್ಷಾಮದಿಂದ ಕಂಗೆಟ್ಟಿದ್ದ ಮೀನುಗಾರರಿಗೆ ಲಾಕ್‌ಡೌನ್‌ ಜಾರಿಯಾಗಿ ಮೀನುಗಾರಿಕೆ ಸ್ಥಗಿತವಾದ ಅನಂತರವಂತೂ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಜಿಲ್ಲಾಧಿಕಾರಿಗಳ ಮುಖೇನ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರಾವಳಿ ಕಾವಲು ಪಡೆ ಅಧಿಕಾರಿಗಳು ಮೀನುಗಾರ ಮುಖಂಡರು ಜತೆ ಸೇರಿ ಸಭೆ ನಡೆಸಿ ಷರತ್ತುಬದ್ಧವಾಗಿ ಮೀನುಗಾರಿಕೆ ನಡೆಸಲು ಅನುಮತಿಯನ್ನು ಪಡೆದಿದ್ದಾರೆ.

ತಂದ ಮೀನನ್ನು ಬಂದರಿನಲ್ಲಿ ಖಾಲಿ ಮಾಡಲು ಏಕಕಾಲದಲ್ಲಿ 30 ಬೋಟುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮೀನು ಹಿಡಿದು ತಂದ ಅನಂತರ ದಡಕ್ಕೆ ಇಳಿಸಲು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುವುದು. ಬಂದರಿನೊಳಗೆ ಸಾರ್ವಜನಿಕವಾಗಿ ಮೀನು ಹರಾಜು ಮತ್ತು ಚಿಲ್ಲರೆ ಮಾರಾಟ ಮಾಡದೇ ಹೋಲ್‌ಸೇಲ್‌ ಆಗಿ ಮಾರಾಟ ಮಾಡಬೇಕು ಎಂಬ ಆದೇಶವಿದೆ ಎಂದು ಮೀನುಗಾರಿಕೆ ಉಪನಿರ್ದೇಶಕ ಗಣೇಶ್‌ ಕೆ. ತಿಳಿಸಿದ್ದಾರೆ.

ಯಾಂತ್ರಿಕ ಮೀನುಗಾರಿಕೆ ಬೋಟುಗಳಲ್ಲಿರುವುದು ಶೇ. 80ರಷ್ಟು ಉ.ಕನ್ನಡದ ಮೀನುಗಾರರು. ಅಲ್ಲಿನ ಮೀನುಗಾರರನ್ನು ವಾಪಾಸು ಉಡುಪಿಗೆ ಕರೆಸುವ ಬಗ್ಗೆ ಈ ಹಿಂದೆ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿ ಸಿದ್ದತೆ ನಡೆಸಿದ್ದರು. ಇದೀಗ ಉ.ಕನ್ನಡ ಜಿಲ್ಲೆಯಲ್ಲಿ ಕೊರೊನಾ ಕೇಸ್‌ ಜಾಸ್ತಿಯಾದ್ದರಿಂದ ಅವರನ್ನು ವಾಪಸು ಕರೆಸಿಕೊಳ್ಳುವ ನಿರೀಕ್ಷೆ ಇಲ್ಲ . ಮೀನುಗಾರಿಕೆ ಕಳುಹಿಸಲು ಸಿದ್ಧವಾಗಿರುವ ಬೋಟು ಮಾಲಕರಿಗೆ ಬಂದರಿನಲ್ಲಿ ತಮ್ಮ ಬೋಟು ತೆರವುಗೊಳಿಸಲು ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಮಲ್ಪೆ ಮೀನುಗಾರರ ಸಂಘ ಕಾರ್ಯದರ್ಶಿ ಸುಭಾಸ್‌ ಮೆಂಡನ್‌ ತಿಳಿಸಿದ್ದಾರೆ.

Advertisement

ಗಂಗೊಳ್ಳಿ: ಮೀನುಗಾರಿಕೆಗೆ ತೆರಳಿದ ಬೋಟ್‌ಗಳ ಆಗಮನ
ಗಂಗೊಳ್ಳಿ ಒಂದೂವರೆ ತಿಂಗಳ ಬಳಿಕ ಶುಕ್ರವಾರ ಮೀನು ಗಾರಿಕೆಗಾಗಿ ತೆರಳಿದ್ದ ಬೋಟ್‌ಗಳು ಶನಿವಾರ ಗಂಗೊಳ್ಳಿಯ ಮೀನು ಗಾರಿಕೆ ಬಂದರಿಗೆ ಆಗಮಿಸಿವೆ. ಕೆಲ ದಿನಗಳ ಅನಂತರ ಮೀನುಗಾರಿಕೆ ನಡೆದರೂ ಎಲ್ಲ ಬೋಟ್‌ಗಳಿಗೂ ಅಷ್ಟೇನು ಉತ್ತಮ ಪ್ರಮಾಣದ ಮೀನುಗಳು ಸಿಕ್ಕಿಲ್ಲ.

ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಯೊಂದಿಗೆ ಜಿಲ್ಲಾಧಿ ಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಿ, ಯಾಂತ್ರಿಕ ಮೀನುಗಾರಿಕೆಗೆ ಅನುಮತಿ ನೀಡಲಾಗಿದೆ. ಅದರಂತೆ ಶುಕ್ರವಾರ ಮೀನುಗಾರಿಕೆಗೆ ತೆರಳಿದ್ದ 10-12 ಬೋಟ್‌ಗಳು ಶನಿವಾರ ವಾಪಸಾಗಿದ್ದು, ಏಕಕಾಲದಲ್ಲಿ ಬಂದರಿನಲ್ಲಿ 8 ಬೋಟ್‌ಗಳಿಗೆ ಮಾತ್ರ ಮೀನು ಇಳಿಸಲು ಅವಕಾಶ ಕಲ್ಪಿಸಲಾಗಿತ್ತು.
ಬಂದರಿನಲ್ಲಿ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಕರಾ ವಳಿ ಕಾವಲು ಪಡೆ ಪೊಲೀಸರು ಸಾಮಾಜಿಕ ಅಂತರ ಕಾಪಾಡುವಂತೆ, ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಂಡರು.

ಮಾಲಕರಿಗೆ ಸೂಚನೆ
ಈಗಾಗಲೇ ಜಿಲ್ಲಾಧಿಕಾರಿಗಳು ಷರತ್ತು ಬದ್ದ ಮೀನುಗಾರಿಕೆ ನಡೆಸಲು ವಿಧಿಸಿದ ನಿಯಮಗಳ ಬಗ್ಗೆ ಎಲ್ಲ ಬೋಟು ಮಾಲಕರಿಗೆ ಮಾಹಿತಿಯನ್ನು ನೀಡಿದ್ದೇವೆ. ಮೀನುಗಾರಿಕೆ ಚಟುವಟಿಕೆಗಳು ನಿಯಮ ಬದ್ಧವಾಗಿ ನಡೆಯುವಂತೆ ನಿಗಾ ಇಡಲು ಮೀನುಗಾರ ಸಂಘವು ವಿವಿಧ ಸಂಘಗಳ ಸಹಕಾರದಲ್ಲಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
-ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು,
ಮಲ್ಪೆ ಮೀನುಗಾರರ ಸಂಘ

ಪಾಸ್‌ ಕಡ್ಡಾಯ
ಕೋವಿಡ್‌-19ನಲ್ಲಿರುವ ಎಲ್ಲ ನಿಯಮಗಳು ಮೀನುಗಾರಿಕೆಯಲ್ಲಿ ಪಾಲನೆಯಾಗಲಿದೆ. ಪ್ರತೀ ದಿನಕ್ಕೆ 30 ಬೋಟುಗಳಿಗೆ ಮಾತ್ರ ಅವಕಾಶ. ಮೀನುಗಾರಿಕೆಗೆ ತೆರಳುವಾಗ ಮೀನುಗಾರ ಕಾರ್ಮಿಕರ ವಿವರ ನೀಡಬೇಕು. ಮೀನುಗಾರಿಕೆ ಇಲಾಖೆಯಿಂದ ಪಾಸ್‌ ತೆಗೆದುಕೊಳ್ಳಬೇಕು, ವಾಪಸು ಬರುವಾಗಲೂ ಮಾಹಿತಿ ನೀಡಬೇಕು.
-ಗಣೇಶ್‌ ಕೆ., ಉಪ ನಿರ್ದೇಶಕರು,
ಮೀನುಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next