ಪಣಜಿ: ನೀತಿ ಆಯೋಗ ಪ್ರಕಟಿಸಿರುವ ಮಾಹಿತಿ ತಪ್ಪಾಗಿದ್ದು, ಗೋವಾದಲ್ಲಿ ಕೇವಲ 20 ಸಾವಿರ ನಿರುದ್ಯೋಗಿಗಳಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೊಂಡಿದ್ದಾರೆ. ಗೋವಾದಲ್ಲಿ 1 ಲಕ್ಷದ 10 ಸಾವಿರ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ನೀತಿ ಆಯೋಗ ವರದಿ ಪ್ರಕಟಿಸಿತ್ತು. ಈ ಮಾಹಿತಿ ಹಳೆಯದಾಗಿದ್ದು, ಹೆಚ್ಚಿನ ಜನರಿಗೆ ಕೆಲಸ ಸಿಕ್ಕಿದೆ ಎಂದು ಹೇಳಿಕೆ ನೀಡಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಆಯೋಗದ ಅಂಕಿ-ಅಂಶಗಳ ಪ್ರಕಾರ, ಗೋವಾದಲ್ಲಿ 1 ಲಕ್ಷದ 10 ಸಾವಿರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆದರೆ ಈ ಪೈಕಿ 80 ಸಾವಿರ ಜನರಿಗೆ ಉದ್ಯೋಗ ಸಿಕ್ಕಿದೆ. ನೌಕರಿ ಸಿಕ್ಕ ನಂತರ ಸರ್ಕಾರಿ ನೌಕರಿ ಸಿಗುವ ನಿರೀಕ್ಷೆಯಲ್ಲಿರುವ ಈ ಯುವಕರು ಉದ್ಯೋಗ ವಿನಿಮಯ ಕೇಂದ್ರದಿಂದ ಹೆಸರು ಕಡಿಮೆ ಮಾಡಿಕೊಂಡಿಲ್ಲ. ಈ ಪಟ್ಟಿಯಿಂದ ಇನ್ನೂ ಕೆಲ ಸರ್ಕಾರಿ ಅಧಿಕಾರಿಗಳ ಹೆಸರನ್ನು ಹೊರಗಿಟ್ಟಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಾಗಿ ಈ ಸಂಖ್ಯೆ ಲಕ್ಷಕ್ಕೆ ಏರಿದ್ದು, ಇದು ತಪ್ಪು ಎಂದು ಪ್ರತಿಕ್ರಿಯಿಸಿದ್ದಾರೆ.
ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಗೋವಾದಲ್ಲಿ ಕೇವಲ 20 ಸಾವಿರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ, ಉದ್ಯೋಗ ಸಿಕ್ಕ ನಂತರ ಉದ್ಯೋಗ ವಿನಿಮಯ ಕೇಂದ್ರದಲ್ಲಿರುವ ಪಟ್ಟಿಯಿಂದ ಸಂಬಂಧಪಟ್ಟವರ ಹೆಸರು ಬರುವಂತೆ ಗೋವಾ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಉದ್ಯೋಗ ಮತ್ತು ಕಾರ್ಮಿಕ ಕಮಿಷನರೇಟ್ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ 21 ಸಾವಿರ ಯುವಕರು ನೋಂದಣಿ ಮಾಡಿಕೊಂಡಿದ್ದರು. ಆದರೆ ಅವರಲ್ಲಿ ಶೇಕಡ 50ಕ್ಕಿಂತ ಕಡಿಮೆ ಅಂದರೆ 10 ಸಾವಿರ ಜನರು ವಾಸ್ತವವಾಗಿ ಹಾಜರಿದ್ದರು ಎಂದು ಪ್ರತಿಕ್ರಿಯೆ ನೀಡಿದರು.