Advertisement
ಇದರಿಂದ ಬಿಬಿಎಂಪಿಯ ಎಲ್ಲ 198 ವಾರ್ಡಗಳಲ್ಲಿ ಏಕಕಾಲದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ ಅಗ್ಗದ ದರದಲ್ಲಿ ಕಡುಬಡವರಿಗೆ ಊಟ ಉಪಹಾರ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಅಲ್ಪ ಹಿನ್ನೆಡೆಯಾದಂತಾಗಿದೆ.
Related Articles
Advertisement
ಯೋಜನೆ ರೂಪಿಸಿದ ಆರಂಭದಲ್ಲಿ 900 ಚದರ ಅಡಿ ವಿಸ್ತೀರ್ಣದಲ್ಲಿ ಕ್ಯಾಂಟೀನ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಪ್ರೀಕಾಸ್ಟ್ ಎಲಿಮೆಂಟ್‌ಗಳ ಜೋಡಣೆ, ಇತರೆ ವ್ಯವಸ್ಥೆ ಹೊಂದಿಸಲು 1,600 ಚದರ ಅಡಿ ವಿಸ್ತೀರ್ಣ ಅಗತ್ಯವಿದೆ. ಆದರೆ ಅಗತ್ಯವಿರುವಷ್ಟು ಭೂಮಿ ಪಡೆಯುವುದು ಸವಾಲಾಗಿದೆ. ಹಾಗಾಗಿ ಅಗತ್ಯ ಭೂಮಿ ಒದಗಿಸುವ ಕಾರ್ಯಕ್ಕೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಹಲವೆಡೆ ಕ್ಯಾಂಟೀನ್ ನಿರ್ಮಾಣವಾಗುತ್ತಿರುವ ಸ್ಥಳಗಳಿಗೆ ಬೃಹತ್ ಎಲಿಮೆಂಟ್‌ಗಳನ್ನು ಸಾಗಿಸುವ ಟ್ರಕ್, ಕ್ರೇನ್‌ಗಳು ತಲುಪಲು ಅಡಚಣೆಯಾಗಿರುವುದು ಸಹ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಎಂ.ಆನಂದ್, ವಿಶೇಷ ಆಯುಕ್ತ (ಹಣಕಾಸು) ಮನೋಜ್ ರಾಜನ್ ಇತರರು ಉಪಸ್ಥಿತರಿದ್ದರು.
ಕ್ಯಾಂಟೀನ್ ವಿಚಾರದಲ್ಲಿ ಬಿಜೆಪಿ ರಾಜಕೀಯ: ಇಂದಿರಾ ಕ್ಯಾಂಟೀನ್ ಯೋಜನೆ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದು, ಇದನ್ನು ಕಾರ್ಯಕರ್ತರು ದಿಟ್ಟವಾಗಿ ಎದುರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕೆಪಿಸಿಸಿ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಬಡವರಿಗಾಗಿ ರೂಪಿಸಿರುವ ಕ್ಯಾಂಟೀನ್ ಯೋಜನೆ ವಿಚಾರದಲ್ಲೂ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯವರು ಸುಳ್ಳು ಆರೋಪಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಇದನ್ನು ಕಾರ್ಯಕರ್ತರು ದಿಟ್ಟವಾಗಿ ಎದುರಿಸಬೇಕು. ನಮ್ಮ ಕಾರ್ಯಕರ್ತರು ಎದೆ ಉಬ್ಬಿಸುವ ಕೆಲಸವನ್ನು ಸರ್ಕಾರ ಮಾಡಿದೆಯೇ ಹೊರತು ಎದೆಗುಂದುವ ಕಾರ್ಯ ಮಾಡಿಲ್ಲ ಎಂದು ಹುರಿದುಂಬಿಸಿದರು.
ಆರೋಪ ಸಾಬೀತುಪಡಿಸುವಂತೆ ಸವಾಲು: ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಮಾಡಿರುವ ಆರೋಪ ಸಾಬೀತುಪಡಿಸಲಿ ಎಂದು ಸಚಿವ ಕೆ.ಜೆ.ಜಾರ್ಜ್, ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸವಾಲು ಹಾಕಿದ್ದರೆ, ಬಡವರಿಗೆ ಅನುಕೂಲವಾಗುವ ಯೋಜನೆಗೆ ಅಡ್ಡಿಪಡಿಸುವವರನ್ನು ಜನ ಕ್ಷಮಿಸುವುದಿಲ್ಲ ಎಂದು ಸಚಿವ ಯು.ಟಿ.ಖಾದರ್ ದೂರಿದ್ದಾರೆ.
“ಯೋಜನೆಗೆ ಸರ್ಕಾರ 100 ಕೋಟಿ ರೂ. ಕಾಯ್ದಿರಿಸಿದ್ದು, ಸಿವಿಲ್ ಕಾಮಗಾರಿಗೆ 73 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಹೀಗಿರುವಾಗ 73 ಕೋಟಿ ರೂ.ಗಳಲ್ಲಿ 65 ಕೋಟಿ ರೂ. ಭ್ರಷ್ಟಾಚಾರ ನಡೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಮಾಡಿ ಈಗಾಗಲೇ ಎಸಿಬಿಗೆ ದೂರು ನೀಡಿದ್ದಾರೆ.
ಅದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಸಲ್ಲಿಸಿದರೆ ಎಸಿಬಿ ತನಿಖೆ ನಡೆಸಲಿದೆ. ಹಾಗೆಯೇ ಮಾಧ್ಯಮಗಳಿಗೂ ಅವರು ದಾಖಲೆಗಳನ್ನು ನೀಡಲಿ ಎಂದು ಹೇಳಿದರು. ಕೆಇಎಫ್ ಇನ್‌ಫ್ರಾ ಕಂಪನಿಯು ತಮಿಳುನಾಡಿನ ಸಂಸ್ಥೆಯಲ್ಲ. ಬದಲಿಗೆ ಅದು ಮೂಲತಃ ಕರ್ನಾಟಕದ ಕಂಪನಿ. ಹೀಗಿದ್ದರೂ ಆಧಾರರಹಿತ ಆರೋಪ ಮಾಡುವುದೇ ಕೆಲವರಿಗೆ ಕಸುಬಾಗಿದೆ ಎಂದು ಖಾದರ್ ಹೇಳಿದ್ದಾರೆ.
ಖರ್ಚು ವೆಚ್ಚವನ್ನು ವೆಬ್‌ಸೈಟ್‌ಗೆ ಹಾಕುತ್ತೇವೆ: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ಆರೋಪ ಮಾಡಿದವರು ಅಕ್ರಮ ನಡೆದಿದ್ದರೆ ಸಾಬೀತುಪಡಿಸಲಿ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಬಹಿರಂಗ ಸವಾಲು ಹಾಕಿದರು. “ಒಂದು ಮನೆಯನ್ನು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಬಹುದು. ಇಲ್ಲವೇ ಐದು ಲಕ್ಷ ರೂ., 50 ಲಕ್ಷ ರೂ. ಹಾಗೂ 5 ಕೋಟಿ ರೂ. ವೆಚ್ಚದಲ್ಲೂ ನಿರ್ಮಿಸಬಹುದು.
ನಿರ್ಮಾಣಕ್ಕೆ ಯಾವ ಸಾಮಗ್ರಿಗಳನ್ನು ಬಳಸಲಾಗಿದೆ ಎಂಬುದು ಮುಖ್ಯ. ಕ್ಯಾಂಟೀನ್ ನಿರ್ಮಾಣಕ್ಕೆ ಬಳಸಿರುವ ವಸ್ತುಗಳು ಹಾಗೂ ವೆಚ್ಚದ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅದನ್ನು ಯಾರು ಬೇಕಾದರೂ ಮಾರುಕಟ್ಟೆಯಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದು. ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಸಾಬೀತುಪಡಿಸಲಿ ಎಂದು ಬಹಿರಂಗವಾಗಿ ಸವಾಲು ಹಾಕುತ್ತಿದ್ದೇನೆ’ ಎಂದು ಹೇಳಿದರು.
ನಿಮ್ಹಾನ್ಸ್‌ಗೆ ಕಳುಹಿಸಬೇಕು “ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯದಲ್ಲಿ ಅಕ್ರಮ ನಡೆದಿದೆ ಎಂದು ಕೆಲವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಕೆಲವರಿಗೆ ಆಧಾರರಹಿತ ಆರೋಪ ಮಾಡುವುದೇ ಹವ್ಯಾಸವಾಗಿಬಿಟ್ಟಿದೆ. ಅಂತಹವರನ್ನು ನಿಮ್ಹಾನ್ಸ್‌ಗೆ ಕಳುಹಿಸಿ ಚಿಕಿತ್ಸೆ ಕೊಡಿಸಬೇಕು’
-ಕೆ.ಜೆ.ಜಾರ್ಜ್ , ಬೆಂಗಳೂರು ನಗರ ಅಭಿವೃದ್ಧಿ ಸಚಿವ ರಾಜ್ಯ ಸರ್ಕಾರದ ಉತ್ತಮ ಕೆಲಸಗಳಿಗೆ ಬಿಜೆಪಿಯವರು ಅಡ್ಡಿಪಡಿಸುತ್ತಲೇ ಇದ್ದಾರೆ. ಬಡವರಿಗೆ 5 ರೂ., 10 ರೂ.ಗೆ ಉಪಾಹಾರ, ಊಟ ವಿತರಿಸುವ ಐತಿಹಾಸಿಕ ಯೋಜನೆಗೆ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಇಂಥವರನ್ನು ಜನ ಕ್ಷಮಿಸುವುದಿಲ್ಲ.
-ಯು.ಟಿ.ಖಾದರ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಇಂದಿರಾ ಕ್ಯಾಂಟೀನ್ ತೆರವು ಪ್ರಕರಣ: ತಹಸೀಲ್ದಾರ್ ಅಮಾನತಿಗೆ ಸಿಎಂ ಆದೇಶ
ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಗೆ ಸಹಕಾರ ನೀಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆಗೆ ಅಗತ್ಯವಾದ ಜಾಗ ಯಾವುದೇ ಇಲಾಖೆಯ ಬಳಿಯಿದ್ದರೂ ತ್ವರಿತವಾಗಿ ಪಾಲಿಕೆಗೆ ಹಸ್ತಾಂತರ ಮಾಡುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇಂದಿರಾ ಕ್ಯಾಂಟೀನ್ ಯೋಜನೆಯ ಪ್ರಗತಿ ಪರಿಶೀಲನಾ ಕುರಿತು ಶುಕ್ರವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಪಾಲಿಕೆಯ ಅಧಿಕಾರಿಗಳು ಇತರೆ ಇಲಾಖೆಯ ಅಧಿಕಾರಿಗಳು ಕ್ಯಾಂಟೀನ್ ವಿಚಾರದಲ್ಲಿ ಸಹಕರಿಸುತ್ತಿಲ್ಲ ಎಂದು ದೂರಿದ್ದಾರೆ. ಜತೆಗೆ ಹೊಸಕೆರೆ ಹಳ್ಳಿಯಲ್ಲಿ ವಾರ್ಡ್‌ನಲ್ಲಿ ಕಂದಾಯ ಇಲಾಖೆಯ ಜಾಗದಲ್ಲಿ ನಿರ್ಮಿಸಿದ ಕ್ಯಾಂಟೀನ್‌ನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ದೂರಿದರು. ಇದರಿಂದ ಕೆಂಡವಾದ ಮುಖ್ಯಮಂತ್ರಿಗಳು ಕ್ಯಾಂಟೀನ್ ತೆರವುಗೊಳಿಸಿದ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸುವಂತೆ ಮೌಖೀಕವಾಗಿ ಆದೇಶಿಸಿದ್ದಾರೆ. ಪಾಲಿಕೆಯ ಅಧಿಕಾರಿಗಳು ಘಟನೆಯ ಕುರಿತು ಶನಿವಾರ ವರದಿ ಸಲ್ಲಿಸಿದ ನಂತರದಲ್ಲಿ ಅಮಾನತು ಆದೇಶ ಹೊರಬೀಳುವ ಸಾಧ್ಯತೆಯಿದೆ. ಇದೇ ವೇಳೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಸಿದ್ದರಾಮಯ್ಯ ಅವರು, ಕ್ಯಾಂಟಿನ್ ನಿರ್ಮಾಣಕ್ಕೆ ಅಗತ್ಯವಾದ ಸ್ಥಳವನ್ನು ಯಾವುದೇ ಇಲಾಖೆಯ ಅನುಮತಿ ಇಲ್ಲದೆ ಪಡೆಯುವ ಅಧಿಕಾರವನ್ನು ಪಾಲಿಕೆಗೆ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಯಿಂದ ಕ್ಯಾಂಟೀನ್ ತೆರವು: ಹೊಸಕೆರೆಹಳ್ಳಿ ವಾರ್ಡ್ ಪಿಇಎಸ್ ಕಾಲೇಜು ಮುಂಭಾಗದ ಸರ್ಕಾರ ಜಾಗದಲ್ಲಿ ಕ್ಯಾಂಟೀನ್ ನಿರ್ಮಿಸಲು ಶಾಸಕರು ಹಾಗೂ ಪಾಲಿಕೆ ಸದಸ್ಯರು ಸ್ಥಳ ಪರಿಶೀಲಿಸಿದ್ದರು. ಇದರೊಂದಿಗೆ ಪಾಲಿಕೆಯ ಜಂಟಿ ಆಯುಕ್ತರು ಕ್ಯಾಂಟೀನ್ ನಿರ್ಮಾಣಕ್ಕಾಗಿ ಜಾಗ ನೀಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಉತ್ತರ ನೀಡಿಲ್ಲ. ಕ್ಯಾಂಟೀನ್ ನಿರ್ಮಾಣವಾದ ಬಳಿಕ ಬೆಂಗಳೂರು ದಕ್ಷಿಣ ತಹಸೀಲ್ದಾರ್ ಶಿವಕುಮಾರ್ ಅವರು ಕ್ಯಾಂಟೀನ್‌ನ್ನು ತೆರವುಗೊಳಿಸಿದ್ದಾರೆ. ಅಧಿಕಾರಿಯ ಕ್ರಮಕ್ಕೆ ಗರಂ ಆಗಿರುವ ಮುಖ್ಯಮಂತ್ರಿಗಳು ಕೂಡಲೇ ಶಿವಕುಮಾರ್‌ನ್ನು ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.