ಪಟ್ನಾ: ಬಿಹಾರ ವಿಧಾನಸಭೆಗೆ ಅಕ್ಟೋಬರ್-ನವೆಂಬರ್‌ನಲ್ಲಿ ಆನ್‌ಲೈನ್ ಮೂಲಕ ಚುನಾವಣೆ ನಡೆಯುವ ಸಾಧ್ಯತೆಗಳು ಅಧಿಕವಾಗಿವೆ. ಒಂದು ವೇಳೆ ಆ ರೀತಿ ಮತದಾನ ನಡೆಯಿತು ಎಂದಾದರೆ ದೇಶ ದಲ್ಲಿಯೇ ಹೈಟೆಕ್ ಚುನಾವಣೆ ನಡೆಸಿಕೊಟ್ಟ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಬಿಹಾರಕ್ಕೆ ದೊರಕಲಿದೆ.
ಜಗತ್ತಿನಾದ್ಯಂತ ಕೋವಿಡ್-19 ವೈರಸ್‌ನಿಂದಾಗಿ ಜೀವನದ ಪ್ರತಿ ವ್ಯವಸ್ಥೆಯಲ್ಲಿ ಬದಲಾವಣೆಯ ಹೊರಳುವಿಕೆ ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ವಿಚಾರಕ್ಕೂ ಡಿಜಿಟಲ್ ವ್ಯವಸ್ಥೆಯೇ ಪ್ರಧಾನವಾಗಿ ಇರಲಿದೆ ಎಂಬ ಅಭಿಪ್ರಾಯಗಳ ನಡುವೆ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಜಾರಿಗೆ ತರುವ ಬಗ್ಗೆ ಚಿಂತನೆಗಳು ನಡೆದಿವೆ.
ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಆದರೆ ಆನ್‌ಲೈನ್ ಚುನಾವಣೆ ನಡೆಸುವ ಬಗ್ಗೆ ಚುನಾವಣ ಆಯೋಗ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದರೆ ಮಾತ್ರ ಈ ಸಾಧನೆ ಸಾಧ್ಯವಾಗಲಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಬೇಕೆಂಬ ಸಲಹೆ ನಡುವೆ ಚುನಾವಣೆ ನಡೆಸುವ ಹೊಸ ಸಾಧ್ಯತೆ ಬಗ್ಗೆ ಚಿಂತನೆ ನಡೆದಿದೆ.
ವೈರಸ್ ಸೋಂಕಿನ ಅನಂತರದ ದಿನಗಳಲ್ಲಿ ಹಿಂದಿನಂತೆಯೇ ಊರು ಊರಿಗೆ ತೆರಳಿ ಪ್ರಚಾರ ನಡೆಸುವುದು, ಮತದಾನಕ್ಕೆ ಸರತಿಯಲ್ಲಿ ನಿಲ್ಲುವುದು ಕಷ್ಟವಾಗಬಹುದು. ಹೀಗಾಗಿ ಹೊಸ ರೀತಿಯ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾಗಿದೆ. ಜಗತ್ತಿನ ಕೆಲವು ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ.
ಆನ್‌ಲೈನ್‌ನಲ್ಲೇ ಪ್ರಚಾರ
ಮುಂದಿನ ಒಂದರಿಂದ ಎರಡು ವರ್ಷಗಳ ಅವಧಿಯಲ್ಲಿ ಸಾಂಪ್ರದಾಯಿಕ ಪ್ರಚಾರವೇ ದೇಶಾದ್ಯಂತ ಮರೆಯಾಗಲಿದೆ. ಆನ್‌ಲೈನ್ ಮೂಲಕವೇ ಪ್ರಚಾರ ನಡೆಸುವ ವ್ಯವಸ್ಥೆ ಬರಬಹುದು. ಈಗಾಗಲೇ ಬಿಜೆಪಿ ಕಾರ್ಯಕರ್ತರ ಜತೆಗೆ ಡಿಜಿಟಲ್ ಮಾಧ್ಯಮದ ಮೂಲಕವೇ ಪ್ರತಿದಿನ 2 ಗಂಟೆ ಕಾಲ ಮಾಹಿತಿ ವಿನಿಮಯ ಮಾಡಲಾಗುತ್ತಿದೆ. ಅದೇ ರೀತಿ ಚುನಾವಣ ಪ್ರಚಾರ ಕೂಡ ನಡೆಸಲಾಗುತ್ತದೆ ಎಂದಿದ್ದಾರೆ.ಬಿಹಾರದಲ್ಲಿನ ವಿಪಕ್ಷಗಳ ನಾಯಕರಲ್ಲಿಯೂ ಸಾಂಪ್ರದಾಯಿಕ ಪ್ರಚಾರದ ಬದಲಾಗಿ ಡಿಜಿಟಲ್ ಮಾಧ್ಯಮದ ಮೂಲಕ ಪ್ರಚಾರದ ಬಗ್ಗೆ ಒಲವು ವ್ಯಕ್ತವಾಗಿದೆ.