ಸುಳ್ಯ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ (ಜಾನುವಾರು ಸಾಗಾಣಿಕೆ) ನಿಯಮ 2021ರ ಅನ್ವಯ ಜಾನುವಾರು ಸಾಗಾಟ ಮಾಡಲು ಪರವಾನಿಗೆ ಪಡೆಯಲು ಇನ್ನು ಮುಂದೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕೃತ ಜಾನುವಾರು ಸಾಗಾಟ ಪರವಾನಿಗೆ ಜಾಲತಾಣದಿಂದ ರೈತರು ತಾವೇ ಅರ್ಜಿ ಗಳನ್ನು ಸಲ್ಲಿಸಿ ಕೆಲಸದ ದಿನಗಳಂದು ಪರವಾನಿಗೆ ಪಡೆದು ಕೊಳ್ಳಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
https://animaltrans.karahvs.in ಜಾಲತಾಣದಲ್ಲಿ ಜಾನುವಾರು ಮಾಲಕರು ಅಥವಾ ಸಾಗಾಟ ಮಾಡುವ ವಾಹನದ ಚಾಲಕರು ಅರ್ಜಿ ಸಲ್ಲಿಸಬೇಕು ಅಥವಾ ಈ ಕೆಳಗಿನ ದಾಖಲೆಗಳೊಂದಿಗೆ ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದು. ವಾಹನ ಸಂಖ್ಯೆ ಮತ್ತು ಮಾಡೆಲ್, ವಾಹನದ ಮಾಲಕನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ, ಚಾಲಕನ ಹೆಸರು, ವಿಳಾಸ ಮತ್ತು ಲೈಸನ್ಸ್ ಸಂಖ್ಯೆ, ವಾಹನದ ಫೋಟೋ, ವಾಹನದ ಆರ್‌ಸಿ ಫೋಟೋ, ಜಾನುವಾರು ಮಾರಾಟಗಾರರ ಹೆಸರು, ವಿಳಾಸ, ಇಮೈಲ್ ವಿವರ ಮತ್ತು ಮೊಬೈಲ್ ಸಂಖ್ಯೆ, ಜಾನುವಾರು ಮಾರಾಟಗಾರರ ಐಡಿ ಕಾರ್ಡ್ ಫೋಟೋ, ಜಾನುವಾರುವಿನ ಫೋಟೋ, ಜಾನುವಾರಿನ ಕಿವಿ ಓಲೆ ಸಂಖ್ಯೆ ಮತ್ತು ಲಸಿಕೆ ವಿವರ, ಜಾನುವಾರು ಖರೀದಿಸುವವರ ಹೆಸರು ಮತ್ತು ವಿಳಾಸ, ಸಾಗಾಟ ಮಾಡುವ ದಿನಾಂಕ, ಸಾಗಾಟದ ಅವಧಿ ಮತ್ತು ಮಾರ್ಗ.
ಎಲ್ಲ ದಾಖಲೆಗಳನ್ನು ಹೊಂದಿರುವ ಅರ್ಜಿಗಳನ್ನು ಜಾನುವಾರುವಿನ ಪರಿಶೀಲನೆಯ (ಪಶುವೈದ್ಯರಿಂದ ಜಾನುವಾರು ಪರಿಶೀಲನೆ ಕಡ್ಡಾಯ) ಅನಂತರ ಮಾನ್ಯ ಮಾಡಿ ಪರವಾನಿಗೆಯನ್ನು ಆಯಾ ಸಂಸ್ಥೆಗಳಲ್ಲಿ ನೀvಲಾಗುವುದು ಎಂದು ಸುಳ್ಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.