ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಒದಗಿಸುವ ಸ್ಪಾಟಿಫೈ ಸಂಸ್ಥೆಯು ಭಾರತದಲ್ಲಿ ತಮ್ಮ ನೆಟ್ ವರ್ಕ್ ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಭಾರತೀಯ ಸರೆಗಮ ಮ್ಯೂಸಿಕ್ ಸಂಸ್ಥೆಯ ಜತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ಈ ಒಪ್ಪಂದದಿಂದ ಸ್ಪಾಟಿಫೈ ಸಂಸ್ಥೆಗೆ ಭಾರತದ ಸುಮಾರು 25 ಭಾಷೆಗಳ ಚಲನಚಿತ್ರ, ಭಕ್ತಿ ಗೀತೆ, ಕರ್ನಾಟಕ, ಹಿಂದೂಸ್ತಾನಿ ಮತ್ತು ಶಾಸ್ತ್ರೀಯ ಸಂಗೀತದಂತಹ ವಿವಿಧ ಪ್ರಕಾರಗಳಲ್ಲಿ 100,000ಕ್ಕೂ ಹೆಚ್ಚು ಹಾಡುಗಳಿಗೆ ಸರೆಗಮದಿಂದ ಆ್ಯಕ್ಸೆಸ್ ಪಡೆದುಕೊಳ್ಳಲಿದೆ.
‘ನಾವು ಸ್ಪಾಟಿಫೈ ಜತೆ ಪಾಲುದಾರರಾಗಲು ಸಂತೋಷಪಡುತ್ತೇವೆ ಮತ್ತು ಈ ಒಪ್ಪಂದದಿಂದ ನಮ್ಮ ಸಂಪೂರ್ಣ ಕ್ಯಾಟಲಾಗ್ ಅನ್ನು ಈಗ ಭಾರತ ಸೇರಿದಂತೆ ವಿಶ್ವಾದ್ಯಂತ ಕೇಳುಗರಿಗೆ ಲಭ್ಯವಾಗುತ್ತದೆ. ನಮ್ಮಲ್ಲಿ ಹಳೆಯ ಕ್ಲಾಸಿಕ್‌ಗಳಿಂದ ಹಿಡಿದು ಹೊಸ ಯುಗದ ಸಂಗೀತದವರೆಗಿನ ಹಾಡುಗಳ ಸಂಗ್ರಹ ಹೊಂದಿದ್ದೇವೆ.
ಈ ಒಪ್ಪಂದದಿಂದ ಕೇಳುಗರಿಗೆ ಇನ್ನಷ್ಟು ಉಪಯೋಗವಾಗಲಿದೆ’ ಎಂದು ಸರೆಗಮಾ ಭಾರತೀಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಮೆಹ್ರಾ ಅವರು ಈ ಮಹತ್ವದ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಸ್ಪಾಟಿಫೈ ಇಂಡಿಯಾದಲ್ಲಿ ಸರೆಗಮ ಕ್ಯಾಟಲಾಗ್ ಲಭ್ಯವಿರುವುದರಿಂದ ಬಳಕೆದಾರರು ಸ್ಥಳೀಯ ಭಾಷೆಗಳಲ್ಲಿ ತಮ್ಮ ನೆಚ್ಚಿನ ರೆಟ್ರೋ ಗೀತೆಗಳನ್ನು ಕೇಳಿ ಆನಂದಿಸಬಹುದು. ಸ್ಪಾಟಿಫೈನ ಸ್ಥಳೀಯ ಪ್ಲೇ ಲಿಸ್ಟ್ ಸಂಗ್ರಹದ ಮೂಲಕ ಹಳೇ ಹಾಡುಗಳನ್ನು ಹುಡುಕಿ ಆಲಿಸಲು ಸಾಧ್ಯವಾಗಲಿದೆ ಎಂದು ಸ್ಪಾಟಿಫೈ ಗ್ಲೋಬಲ್ ಲೈಸೆನ್ಸಿಂಗ್ ನಿರ್ದೇಶಕ ಪೌಲ್ ಸ್ಮಿತ್ ಹೇಳಿದ್ದಾರೆ.
ಕಳೆದ ಮಾಚ್‌ನಲ್ಲಿ ಸ್ಪಾಟಿಫೈ ಸಂಸ್ಥೆಯು ಭಾರತೀಯ ಮಾರುಕಟ್ಟೆಯೂ ಒಳಗೊಂಡಂತೆ ವಾರ್ನರ್ ಮ್ಯೂಸಿಕ್ ಗ್ರೂಪ್‌ನೊಂದಿಗೆ ತನ್ನ ಜಾಗತಿಕ ಪರವಾನಗಿ ಸಹಭಾಗಿತ್ವವನ್ನು ನವೀಕರಿಸಿತ್ತು. ಈ ಒಪ್ಪಂದದ ಮೂಲಕ ದೇಶದಲ್ಲಿದ್ದ ದೀರ್ಘಕಾಲೀನ ಕಾನೂನು ಸಮರವೊಂದು ಅಂತ್ಯವಾಗಿತ್ತು.
ಇಷ್ಟು ಮಾತ್ರವಲ್ಲದೇ ಸ್ಪಾಟಿಫೈ ಕಳೆದ ತಿಂಗಳು ಶೆಮರೂ ಎಂಟರ್‌ಟೈನ್‌ಮೆಂಟ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು. ಈ ಮೂಲಕ ತನ್ನ ಚಂದಾದಾರರಿಗೆ 25 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಆ್ಯಕ್ಸಸ್ ನೀಡಿದೆ.